ರಾಮಮೂರ್ತಿ ನವಲಿ

ಗಂಗಾವತಿ(ಮೇ.24): ವಿವಿಧ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿ ಎಂಬ ಕಾರಣದಿಂದ ಕಿರು ನೀರು ಪೂರೈಕೆಗಾಗಿ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್‌ನ ಬಹುತೇಕ ಕಾಮಗಾರಿ ಅಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೆ ಲಕ್ಷಾಂತರ ಪಾವತಿಸಿರು​ವುದು ಬೆಳಕಿಗೆ ಬಂದಿದೆ.

2018-19ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಈ ಯೋಜನೆಗೆ 25 ಲಕ್ಷ ಅನುದಾನ ಮಂಜೂರಾಗಿತ್ತು. ಈ ಅನುದಾನದಲ್ಲಿ ನಗರಸಭೆಯ 17 ವಾರ್ಡ್‌ಗಳಿಗೆ ಮಿನಿ ನೀರಿನ ಟ್ಯಾಂಕ್‌ ನಿರ್ಮಿಸಿ ಆಯಾ ವಾ​ರ್ಡ್‌ಗಳಿಗೆ ನೀರು ಪೂರೈಸಬೇಕಾಗಿತ್ತು. ಒಂದು ಟ್ಯಾಂಕ್‌ ನಿರ್ಮಾಣಕ್ಕೆ ಕನಿಷ್ಠ 1.45 ಲ​ಕ್ಷ ವೆಚ್ಚವಾಗುತ್ತ​ದೆ. ಬಹುತೇಕ ವಾರ್ಡ್‌ಗಳಲ್ಲಿ ನೀರಿನ ಟ್ಯಾಂಕ್‌ಗಳು ನಿರ್ಮಾಣವಾಗಿದ್ದರೂ ನೀರು ಪೂರೈಸುತ್ತಿಲ್ಲ. ಕೆಲ ಕಡೆ ಪೈಪ್‌ಲೈನ್‌ ಮಾಡ​ದೆ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ.

ಕೊಪ್ಪಳ: ಕೊರೋನಾ ಸೋಂಕಿತನ ಸಂಪರ್ಕದ ವ್ಯಕ್ತಿಯ ಹುಡುಕಲು ಹರಸಾಹಸ

ಅಪೂರ್ಣ ಕಾಮಗಾರಿ:

ನಗರದ 29ನೇ ವಾರ್ಡಿನಲ್ಲಿ ಮಿನಿ ನೀರಿನ ಟ್ಯಾಂಕ್‌ ಕಾಟಾಚಾರಕ್ಕೆ ನಿರ್ಮಿಸಿದ್ದಾರೆ. ಎರಡು ವರ್ಷಗಳ ಹಿಂದೆ ಟ್ಯಾಂಕ್‌ ನಿರ್ಮಿಸಿದ್ದರೂ ಪೈಪ್‌ಲೈನ್‌ ಕಾರ್ಯವಾಗಿಲ್ಲ. ಅಲ್ಲದೆ ನೀರೂ ಇಲ್ಲ. ಇಲ್ಲಿಯ ಜನರು ನೀರಿಗಾಗಿ ಪರದಾಡುತ್ತಿದ್ದರೂ ನಗರಸಭೆ ನಿರ್ಲಕ್ಷ್ಯ ವಹಿಸಿದೆ ಎಂಬ ದೂರು ಕೇಳಿ ಬರು​ತ್ತಿದೆ.

14ನೇ ವಾರ್ಡಿನ ಶಾಲೆಯಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಿದ್ದರೂ ಕೊಳವೆ ಬಾವಿ ಇಲ್ಲ. ಇದರಿಂದ ಬೇಸಿಗೆ ಸಂದರ್ಭದಲ್ಲಿ ವಾರ್ಡಿನ ಜನರೊಂದಿಗೆ ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಒದಗಿದೆ. 3ನೇ ವಾರ್ಡಿನಲ್ಲಿ ಕೊಳವೆ ಬಾವಿ ವಿಫಲವಾಗಿ​ರು​ವ ಕಾರಣದಿಂದ ಈ ಯೋಜನೆ ಅಪೂರ್ಣಗೊಳಿಸಿದ್ದಾರೆ. ಆದರೆ, ಹಣ ಮಾತ್ರ ಪಾವತಿಸಲಾಗಿದೆ.

ಹಳೆ ಟ್ಯಾಂಕಿಗೆ ಹೊಸ ಬಣ್ಣ:

2018-19ನೇ ಸಾಲಿನಲ್ಲಿ 11ನೇ ವಾರ್ಡಿ​ನಲ್ಲಿ ಹೊಸ ಟ್ಯಾಂಕ್‌ ನಿರ್ಮಿಸಿ ನೀರು ಪೂರೈಸುವುದಕ್ಕಾಗಿ ನಗರಸಭೆ 14ನೇ ಹಣಕಾಸು ಯೋಜನೆಯಲ್ಲಿ 1.21ಲಕ್ಷ ಅನುದಾನ ನೀಡಿದೆ. ಆದರೆ, ಗುತ್ತಿಗೆದಾರರೊಬ್ಬರು ಹಳೆಯ ನೀರಿನ ಟ್ಯಾಂಕ್‌ಗೆ ಹೊಸ ಬಣ್ಣ ಹಚ್ಚಿ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.

ತಾಕತ್ತಿದ್ದರೆ ಬಿಜೆಪಿ ಸರ್ಕಾರ ತನಿಖೆಗೆ ನಡೆಸಲಿ: ಕಾಂಗ್ರೆಸ್‌ ನಾಯಕ

ವಿದ್ಯುತ್‌ ಸಂಪರ್ಕ:

ಕೆಲ ವಾರ್ಡ್‌ಗಳಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಿದ್ದು ಅವು​ಗ​ಳಿ​ಗೆ ವಿದ್ಯುತ್‌ ಸಂಪರ್ಕ ಕಲ್ಪಿಸದ ಕಾರಣ ನೀರು ಪೂರೈಕೆ ವ್ಯತ್ಯಯವಾಗಿದೆ. ಕೆಲ ವಾರ್ಡ್‌ಗಳಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದರೂ ಜೆಸ್ಕಾಂಗೆ ವಿದ್ಯುತ್‌ ಬಾಕಿ ನೀಡದ ಕಾರಣ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ವಾರ್ಡಿನ ಜನರು ನಗರಸಭೆ ವಿರುದ್ಧ ರೋಸಿ ಹೋಗಿದ್ದಾರೆ. ನಗರದಲ್ಲಿ ನಿರಂತರ ನೀರಿನ ಯೋಜನೆ ಪ್ರಾರಂಭವಾಗಿದ್ದರೂ ಕೆಲ ವಾರ್ಡ್‌ಗಳಲ್ಲಿ ನೀರಿನ ಯೋಜನೆ ತಲುಪದ ಕಾರಣ ಹಾಹಾಕಾರ ಉಂಟಾ​ಗಿ​ದೆ.

ನಗರಸಭೆಗೆ 2018-19ನೇ ಸಾಲಿನಲ್ಲಿ ಮಂಜೂರಿಯಾಗಿದ್ದ 14ನೇ ಹಣಕಾಸು ಯೋಜನೆಯ ಕಾಮಗಾರಿ ಕೆಲ ವಾರ್ಡ್‌ಗಳಲ್ಲಿ ಅಪೂರ್ಣವಾಗಿದೆ. ವಿದ್ಯುತ್‌ ಸಂಪರ್ಕ ಇಲ್ಲ, ಕೊಳವೆ ಬಾವಿ ಇಲ್ಲ, ಪೈಪ್‌ಲೈನ್‌ ಇಲ್ಲ. ಇದರ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಖುದ್ದಾಗಿ ಪರಿಶೀಲಿಸಿದ್ದೇ​ನೆæ. ಅಪೂರ್ಣ ಕಾಮಗಾರಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಗಂಗಾಧರ ಅವರು ಹೇಳಿದ್ದಾರೆ. 

ಬಹುತೇಕ ವಾರ್ಡ್‌ಗಳಲ್ಲಿ ಅಪೂರ್ಣ ಕಾಮಗಾರಿಯಾಗಿ​ದೆ. 29ನೇ ವಾರ್ಡಿನಲ್ಲಿ ಟ್ಯಾಂಕ್‌ ನಿರ್ಮಿಸಿದ್ದರೂ ಪೈಪ್‌ಲೈನ್‌ ಇಲ್ಲ. ಅಲ್ಲದೆ ನೀರಿನ ಪೂರೈಕೆ ಬಗ್ಗೆ ಚಕಾರ ಎತ್ತಿಲ್ಲ. ಇನ್ನು ಕೆಲ ವಾರ್ಡ್‌ಗಳಲ್ಲಿ ಹಳೆಯ ನೀರಿನ ಟ್ಯಾಂಕ್‌ಗೆ ಬಣ್ಣ ಹಚ್ಚಿ ಗುತ್ತಿಗೆದಾರರಿಗೆ ಹಣ ಪಾವಿತಸಲಾಗಿದೆ ಎಂದು ನಗ​ರ​ಸಭೆ 29ನೇ ವಾರ್ಡಿನ ಸದಸ್ಯ ವೆಂಕಟರಮಣ ಅವರು ತಿಳಿಸಿದ್ದಾರೆ.