ತಾಕತ್ತಿದ್ದರೆ ಬಿಜೆಪಿ ಸರ್ಕಾರ ತನಿಖೆಗೆ ನಡೆಸಲಿ: ಕಾಂಗ್ರೆಸ್ ನಾಯಕ
ಅಕ್ರಮದ ದಾಖಲೆ ಬಿಡುಗಡೆ ಮಾಡಿದ ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ| ಈಗ ಸರ್ಕಾರ ನಮ್ಮದಿಲ್ಲ. ತಮ್ಮದೇ ಸರ್ಕಾರ ಇರುವುದರಿಂದ ತಾವೇ ತನಿಖೆ ನಡೆಸಬೇಕು| ಶಾಸಕ ಬಸವರಾಜ ದಢೇಸ್ಗೂರು ವಿರುದ್ಧ ಹರಿಹಾಯ್ದ ತಂಗಡಗಿ|
ಕೊಪ್ಪಳ(ಮೇ.24): ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಕೋಟಿ ಅಕ್ರಮ ನಡೆದಿರುವ ಬಗ್ಗೆ ನನ್ನ ಬಳಿ ದಾಖಲೆ ಇವೆ. ಸ್ಥಳೀಯ ಶಾಸಕ ಬಸವರಾಜ ದಡೇಸ್ಗೂರು ಅವರು ತಾಕತ್ತಿದ್ದರೆ ಕೂಡಲೇ ತಮ್ಮದೇ ಸರ್ಕಾರದ ಮೂಲಕ ತನಿಖೆಯನ್ನು ನಡೆಸಲಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಸವಾಲು ಎಸೆದಿದ್ದಾರೆ.
ಕೊಪ್ಪಳ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಬಸವರಾಜ ದಢೇಸ್ಗೂರು ವಿರುದ್ಧ ಹರಿಹಾಯ್ದರು. ಅಕ್ರಮವಾಗಿರುವ ದಾಖಲೆ ಸಮೇತ ಆರೋಪ ಮಾಡಿ ತನಿಖೆ ಮಾಡಿಸುವುದಾದರೆ ಮಾಡಿಸಲಿ ಎಂದು ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಈಗ ಸರ್ಕಾರ ನಮ್ಮದಿಲ್ಲ. ತಮ್ಮದೇ ಸರ್ಕಾರ ಇರುವುದರಿಂದ ತಾವೇ ತನಿಖೆ ನಡೆಸಬೇಕು ಎಂದರು.
ಟಿಬಿ ಡ್ಯಾಂಗೆ ಸಮಾನಾಂತರ ಡ್ಯಾಂ: ಸಮೀಕ್ಷೆಗೆ ಸರ್ಕಾರ ಅಸ್ತು
ನಾನು ಸುಮ್ಮನೇ ಆರೋಪ ಮಾಡಿಲ್ಲ. ದಿನಾಂಕ ಸಮೇತ ದಾಖಲೆಗಳು ಇವೆ. ಕಾಮಗಾರಿ ಮಾಡದೆ ಇರುವ ಫೋಟೋಗಳು ಇವೆ. ಇದಕ್ಕಿಂತ ಹೆಚ್ಚಾಗಿ ಅಲ್ಲಿಯ ಗ್ರಾಮಸ್ಥರು ಹಣ ಬಿಡುಗಡೆಯಾದ ಮೇಲೆ ಕಾಮಗಾರಿ ಮಾಡಲು ಬಂದಿರುವುದನ್ನು ವಿರೋಧಿಸುವ ವೀಡಿಯೋಗಳು ಇವೆ ಎಂದು ವೀಡಿಯೋಗಳನ್ನು ತೋರಿಸಿದರು.
ಕಾಮಗಾರಿ ಸಂಪೂರ್ಣ ಬೋಗಸ್ ಆಗಿದೆ. 78 ಕಾಮಗಾರಿಗಳ ಪೈಕಿ 40 ಕಾಮಗಾರಿಗಳ ದಾಖಲೆಗಳು ನನ್ನ ಬಳಿ ಇವೆ. ರೆಕಾರ್ಡ್ ಇಲ್ಲದೆ ನಾನು ಆರೋಪ ಮಾಡಿಲ್ಲ. ಈಗ ಶಾಸಕ ಬಸವರಾಜ ದಢೇಸ್ಗೂರು ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಇವರೂ ಪಾಲುದಾರರು ಎನ್ನುವ ಅನುಮಾನ ಬರುತ್ತದೆ ಎಂದರು.
ನಾನು ಈ ಹಿಂದೆ ನಮ್ಮ ಇಲಾಖೆಯಲ್ಲಿ ಅಕ್ರಮವಾಗಿದೆ ಎಂದು ತಿಳಿಯುತ್ತಿದ್ದಂತೆ ಸಿಒಡಿಗೆ ನೀಡಿದ್ದೇನೆ, ನಿಮಗೂ ಅಂಥ ತಾಕತ್ತು ಇದ್ದರೆ ಕೂಡಲೇ ತನಿಖೆಗೆ ಆದೇಶ ಮಾಡಿ, ಸರ್ಕಾರಕ್ಕೆ ಪತ್ರ ಬರೆದು, ಪ್ರಾಮಾಣಿಕತೆ ಪ್ರದರ್ಶನ ಮಾಡಲಿ ಎಂದರು.
ಉಗ್ರ ಹೋರಾಟ:
ದಾಖಲೆ ಸಮೇತ ಮತ್ತೊಂದು ದೂರು ನೀಡಲಾಗುವುದು. ಅದಾದ ಮೇಲೆಯೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಜಿಲ್ಲಾ ಪಂಚಾಯಿತಿ ಎದುರೇ ಜೂನ್ ತಿಂಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತೇನೆ. ಕೇವಲ ಕನಕಗಿರಿ ತಾಲೂಕು ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಇಂಥ ಅಕ್ರಮಗಳು ನಡೆದಿರುವ ಬಗ್ಗೆ ಮಾಹಿತಿ ಬರುತ್ತಿದ್ದು, ದಾಖಲೆ ಸಮೇತ ದೂರು ಸಲ್ಲಿಸುತ್ತೇನೆ ಎಂದರು.