ಚಿಕ್ಕಬಳ್ಳಾಪುರ(ಆ.27): ಕುಡಿಯುವ ನೀರಿನ ಸಮಸ್ಯೆಯಿಂದಾಗಿ ತಾಲೂಕಿನ ಮುದ್ದೇನಹಳ್ಳಿ ಮತ್ತು ನಂದಿ ಗ್ರಾಪಂ ವ್ಯಾಪ್ತಿಯ ಶಾಲೆಗಳಲ್ಲಿ ಬಿಸಿಯೂಟಕ್ಕೂ ತೊಂದರೆ, ಕೊಳವೆ ಬಾವಿಗಳು ಬತ್ತಿಹೋಗಿರುವ ಪರಿಣಾಮ ತಾಲೂಕಿನಲ್ಲಿ ಈಗಾಗಲೇ ನಿರ್ಮಿಸಿರುವ 9 ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿವೆ, ಅಲ್ಲದೆ ತಾಲೂಕಿನ 57 ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಕಾಡುತ್ತಿದೆ.

ಇವು ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳೇ ನೀಡಿದ ಮಾಹಿತಿಯಾಗಿದ್ದು, ಮುಂಗಾರು ಮುಗಿಯುತ್ತಿದ್ದರೂ ನೀರಿನ ಸಮಸ್ಯೆ ನಿವಾರಣೆಗೆ ಬದಲಾಗಿ ಹೆಚ್ಚುತ್ತಿರುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ತೀವ್ರ ಆತಂಕಕ್ಕೆ ಈಡುಮಾಡಿದೆ.

ಬಿಸಿಯೂಟಕ್ಕೂ ನೀರಿನ ತೊಂದರೆ: 

ಚಿಕ್ಕಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ ಮಾತನಾಡಿ, ಮುದ್ದೇನಹಳ್ಳಿ ಮತ್ತು ನಂದಿ ಗ್ರಾಪಂಗಳ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಪರಿಣಾಮ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೂ ತೀವ್ರ ಸಮಸ್ಯೆಯಾಗಿದೆ. ಇದರಿಂದಾಗಿ ಟ್ಯಾಂಕರ್‌ಗಳ ಮೂಲಕ ನೀರು ಹಾಕಿಸಿಕೊಂಡು ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಸಾಲಿನಲ್ಲಿ ತಾಲೂಕಿನಲ್ಲಿ 37,398 ಮಕ್ಕಳು ಶಾಲೆಗಳಿಗೆ ದಾಖಲಾಗಿದ್ದು, ಇದರಲ್ಲಿ ಸರ್ಕಾರಿ ಶಾಲೆಗಳಿಗೆ 12,311, ಅನುದಾನಿತ ಶಾಲೆಗಳಿಗೆ 3,332, ಅನುದಾನ ರಹಿತ ಶಾಲೆಗಳಿಗೆ 16, 755 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 16,755 ಸೈಕಲ್‌ಗಳನ್ನು 8ನೇ ತರಗತಿ ಮಕ್ಕಳಿಗೆ ವಿತರಿಸಲಾಗಿದೆ ಎಂದು ವಿವರಿಸಿದರು.

ಕಂಪೌಂಡ್ ಇಲ್ಲ, ಶೌಚಾಲಯವಿಲ್ಲ:

ತಾಲೂಕಿನ 51 ಶಾಲೆಗಳಿಗೆ ಕಾಂಪೌಂಡ್‌ ಇಲ್ಲ, 70 ಶಾಲೆಗಳಿಗೆ ಶೌಚಾಲಯ ಇಲ್ಲ, 137 ಶಾಲೆಗಳ ದುರಸ್ತಿ ಆಗಬೇಕಿದ್ದು, 50 ಶಾಲೆಗಳ 70 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಹೇಳಿದರು. ತಾಲೂಕಿನ ಬನ್ನಿಕುಪ್ಪೆ, ಆಕಲತಿಮ್ಮನಹಳ್ಳಿ, ಗೊಳ್ಳು ಮತ್ತು ಪುರದಗಡ್ಡೆ ಗ್ರಾಮಗಳಲ್ಲಿ ಸರ್ಕಾರಿ ಶಾಲಾ ಜಾಗಗಳು ಒತ್ತುವರಿ ಮಾಡಿಕೊಂಡಿರುವ ಪರಿಣಾಮ ತೀವ್ರ ತೊಂದರೆಯಾಗಿದ್ದು, ಕೂಡಲೇ ಸರ್ವೇ ಮಾಡಿ ಜಾಗ ಭದ್ರಪಡಿಸಲು ಸಹಕರಿಸುವಂತೆ ಮನವಿ ಮಡಾಇದರು.

57 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ:

ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿ ಮಾಹಿತಿ ನೀಡಿ, ತಾಲೂಕಿನ 57 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 24 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ, 33 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ತಾಲೂಕಿನಾದ್ಯಂತ ಇರುವ ಶುದ್ಧ ನೀರಿನ ಘಟಕಗಳಲ್ಲಿ 9 ಘಟಕಗಳು ನೀರಿನ ಸಮಸ್ಯೆಯಿಂದ ಸ್ಥಗಿತಗೊಂಡಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ರಾಮಸ್ವಾಮಿ, ಉಹಾಧ್ಯಕ್ಷರು, ಸದಸ್ಯರು ಹಾಜರಾಗಿದ್ದರು. ದಿಬ್ಬೂರು ತಾಪಂ ಸದಸ್ಯ ಸುಬ್ಬರಾಯಪ್ಪ ಸಭೆಗೆ ಗೈರು ಹಾಜರಾಗಿದ್ದರು.

ವಿದ್ಯುತ್‌ ಸಮಸ್ಯೆಗೆ ಪರಿಹಾರ ಯಾವಾಗ?

ಸಭೆಯಲ್ಲಿ ಮಾತನಾಡಿದ ತಾಪಂ ಸದಸ್ಯ ಸತೀಶ್‌, ನಗರದಲ್ಲಿ ಯಾವುದೇ ನೀತಿ ನಿಯಮ ಇಲ್ಲದೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ನಿರಂತರವಾಗಿ ವಿದ್ಯುತ್‌ ಸಮಸ್ಯೆ ಇರುವುದರಿಂದ ನಾನಾ ಕೆಲಸಗಳಿಗೆಗಾಗಿ ತಾಲೂಕು ಕಚೇರಿಗೆ ಬರುವ ನೂರಾರು ರೈತರು ಕೆಲಸ ಆಗದೆ ವಾಪಸ್‌ ಆಗುವಂತಾಗಿದೆ. ತಾಲೂಕು ಕಚೇರಿಯಲ್ಲಿ ಯುಪಿಎಸ್‌ ಇಲ್ಲ, ಜನರೇಟರ್‌ ಇಲ್ಲ, ಇದರಿಂದ ಬಂದ ರೈತರು ವಾಪಸ್‌ ತೆರಳುತ್ತಿದ್ದು, ಇದಕ್ಕೆ ಪರಿಹಾರ ಯಾವಾಗ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಬೆಸ್ಕಾಂ ಅಧಿಕಾರಿ, ಜಿಲ್ಲಾಸ್ಪತ್ರೆ ಪ್ರತ್ಯೇಕ ಲೈನ್‌ ಎಳೆಯುತ್ತಿರುವ ಕಾರಣ ಪತ್ರಿಕಾ ಹೇಳಿಕೆ ನೀಡಿ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ವಿದ್ಯುತ್‌ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು. ಇದರಿಂದ ಕೆರಳಿದ ಅಧ್ಯಕ್ಷರು ಮತ್ತು ಇತರೆ ಸದಸ್ಯರು, ನಿರಂತರವಾಗಿ ವಿದ್ಯುತ್‌ ಕಡಿತವಾಗುತ್ತಿದ್ದು, ಕೇವಲ ನೆಪ ಹೇಳುವುದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆಯೇ ಎಂದು ತರಾಟೆಗೆ ತೆಗೆದುಕೊಂಡರು.

ಇನ್ನು ಎರಡು ವರ್ಷಗಳಿಂದ ಜಕ್ಕಲಮಡಗು ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ ಎಲ್ಲಿದ್ದಾನೆ ಅಂತ ಪತ್ರಿಕಾ ಜಾಹೀರಾತು ನೀಡಿ ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಎಷ್ಟೇ ಎಚ್ಚರಿಕೆ ನೀಡಿದರೂ ಕಾಮಗಾರಿಯೂ ಮುಗಿಯಲಿಲ್ಲ. ಈ ಗ್ರಾಮಗಳಿಗೆ ನೀರೂ ಬರಲಿಲ್ಲ ಎಂದು ಸದಸ್ಯ ಸತೀಶ್‌ ಕಿಡಿಕಾರಿದರು.

143 ಶಂಕಿತ ಡೆಂಘೀ ಪ್ರಕರಣ

ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ತಾಲೂಕಿನಲ್ಲಿ ಒಟ್ಟು 143 ಶಂಕಿತ ಡೆಂಘೀ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ 9 ಪ್ರಕರಣಗಳು ದೃಢಪಟ್ಟಿವೆ. ಡೆಂಘೀ ನಿಯಂತ್ರಣಕ್ಕಾಗಿ ಒಣಗಲು ದಿನ, ಸ್ವಚ್ಛತೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರ ಸಹಕಾರದಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗೈರಾದ ಅಧಿಕಾರಿಗಳಿಗೆ ನೋಟಿಸ್‌

ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಸೋಮವಾರ ನಡೆದ ತಾಪಂ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದು, ಗೈರಾದ ಅಧಿಕಾರಿಗಳಿಗೆ ಕೂಡಲೇ ನೋಟಿಸ್‌ ಜಾರಿಗೊಳಿಸುವಂತೆ ತಾಪಂ ಅಧ್ಯಕ್ಷ ರಾಮಸ್ವಾಮಿ ತಾಪಂ ಇಒ ಹರ್ಷವರ್ಧನ್‌ ಅವರಿಗೆ ಸೂಚಿಸಿದರು.