ಬೆಂಕಿ ನಂದಿಸಲೂ ಅಗ್ನಿ ಶಾಮಕ ದಳದಲ್ಲಿ ನೀರೇ ಇಲ್ಲ!
ರಾಜ್ಯದಲ್ಲಿ ನೀರಿನ ಅಭಾವ ಭಾರಿ ಪ್ರಮಾಣದಲ್ಲಿ ತಟ್ಟುತ್ತಿದೆ. ಇತ್ತ ಬೆಂಕಿ ನಂದಿಸುವ ಅಗ್ನಿ ಶಾಮಕ ದಳಳದಲ್ಲಿಯೂ ನೀರು ಇಲ್ಲದಂತಾಗಿದೆ.
ಸಿಂದಗಿ : ಜನ, ಜಾನುವಾರು ಆಯ್ತು, ಸರ್ಕಾರಿ ಕಚೇರಿಗಳಾದವು, ಈಗ ನೀರಿನ ಸಮಸ್ಯೆ ಬೆಂಕಿ ನಂದಿಸಲು ಅತ್ಯಗತ್ಯವಾಗಿ ನೀರನ್ನೇ ಬಳಕೆ ಮಾಡಬೇಕಿರುವ ಅಗ್ನಿಶಾಮಕ ದಳವನ್ನೂ ಬಿಟ್ಟಿಲ್ಲ. ಹೌದು. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಗೋಲಗೇರಿ ರಸ್ತೆಗೆ ಹೊಂದಿಕೊಂಡಿರುವ ಅಗ್ನಿಶಾಮಕ ದಳದ ಕಚೇರಿಯಲ್ಲಿ ನೀರಿಲ್ಲ. ಹೀಗಾಗಿ ತಾಲೂಕಿನ ಯಾವ ಭಾಗದಲ್ಲಿಯಾದರೂ ಅಗ್ನಿ ಅವಘಡಗಳು ಸಂಭವಿಸಿದರೆ, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಾರಣ ತಕ್ಷಣಕ್ಕೆ ಅವರಿಗೆ ನೀರು ಸಿಗುವುದಿಲ್ಲ. ಅನಿವಾರ್ಯ ಎಂಬಂತೆ 6 ಕಿ.ಮೀ. ದೂರದಲ್ಲಿರುವ ಖಾಸಗಿ ಬೋರ್‌ವೆಲ್ ಅವಲಂಬಿಸಬೇಕಾದುದು ಅನಿವಾರ್ಯವಾಗಿದೆ.
ಪಟ್ಟಣದ ಈ ಅಗ್ನಿಶಾಮಕ ಇಲಾಖೆಯಲ್ಲಿ 5 ಸಾವಿರ ಲೀಟರ್ ನೀರಿನ ಸಾಮರ್ಥ್ಯವಿರುವ ಎರಡು ನೀರಿನ ವಾಹನಗಳಿದ್ದು, ಸತತ ತುಂಬಿಡಬೇಕಾಗುತ್ತದೆ. ಇದಕ್ಕಾಗಿಯೇ ಕಚೇರಿ ಆವರಣದಲ್ಲಿ 2012ರಲ್ಲಿ 120 ಅಡಿಗಳವರೆಗೆ ಬೋರ್‌ವೆಲ್ ಕೊರೆಸಲಾಗಿತ್ತು. ಈ ಬೋರ್‌ವೆಲ್ 2018ರವರೆಗೂ ನಿರಾತಂಕವಾಗಿ ನೀರು ಕೊಟ್ಟಿದೆ. ಆದರೆ, ಪ್ರಸಕ್ತ ಬರಗಾಲ ಹೆಚ್ಚಾಗಿದ್ದರಿಂದ, ತಾಪವೂ ಏರಿಕೆಯಾಗಿದ್ದರಿಂದ 2019ರ ಫೆಬ್ರವರಿಯಿಂದ ಬತ್ತಿ ಹೋಗಿದೆ. ಈಗ ನೀರು ಬೇಕೆಂದರೆ ಕಚೇರಿಯಿಂದ ಆರು ಕಿ.ಮೀ. ದೂರವಿರುವ ಸಿಂದಗಿ ತಾಂಡಾಕ್ಕೆ ಹೋಗಬೇಕು.
ಈ ಸಿಂದಗಿ ತಾಂಡಾದಲ್ಲಿ ಹಣಮಂತ ಯರನಾಳ ಎಂಬವರು ತಮ್ಮ ಹೊಲದಲ್ಲಿರುವ ನೀರನ್ನು ಉಚಿತವಾಗಿ ನೀಡುತ್ತಿದ್ದಾರೆ. ನೀರು ಕೊಡುವಂತೆ ಹಣಮಂತ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಕೇಳಿಕೊಂಡ ಒಂದೇ ಮನವಿಗೆ, ಅವರು ಉಚಿತವಾಗಿಯೇ ಜಲದಾನ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳದ ವಾಹನಗಳಿಗೆ ನೀರು ತುಂಬಲು ವಿದ್ಯುತ್ ಅಗತ್ಯವಿದೆ. ಇದರ ಬಿಲ್ ಅನ್ನು ಕೂಡ ಹಣಮಂತನೇ ಭರಿಸುತ್ತಿದ್ದಾರೆ. ಒಂದು ವೇಳೆ ಕರೆಂಟ್ ಕೈಕೊಟ್ಟರೆ, ಜನರೇಟರ್ ಮೂಲಕ ವಾಹನಗಳಿಗೆ ನೀರು ತುಂಬಿಸಲಾಗುತ್ತಿದೆ.
ಇರುವುದು ಒಂದೇ ಘಟಕ: ಸಿಂದಗಿ ತಾಲೂಕಿನಲ್ಲಿ ಎಲ್ಲಿಯಾದರೂ ಅಗ್ನಿ ಅವಘಡಗಳು ಸಂಭವಿಸಿದರೆ, ಇಲ್ಲಿಗೆ ಕರೆ ಮಾಡುತ್ತಾರೆ. ಈ ತಾಲೂಕಿನಲ್ಲಿ ಆಲಮೇಲ (ಈಗ ಹೊಸದಾಗಿರುವ ತಾಲೂಕು) ಮತ್ತು ಮೊರಟಗಿ ಹೋಬಳಿಗಳಿವೆ. ಆದರೂ ಅಲ್ಲಿ ಅಗ್ನಿಶಾಮಕ ದಳದ ಕಚೇರಿಗಳಿಲ್ಲ. ಹೀಗಾಗಿ ಸಿಂದಗಿಯ ಕಚೇರಿಯನ್ನೇ ಹೆಚ್ಚಾಗಿ ಅವಘಡಗಳಾದಲ್ಲಿ ಕರೆ ಮಾಡುತ್ತಾರೆ. ಈ ಘಟಕದಲ್ಲಿ ನೀರಿನ ಕೊರತೆಯಾದಲ್ಲಿ 40 ಕಿಮೀ ದೂರದಲ್ಲಿರುವ ಬಸವನಬಾಗೇವಾಡಿ, 52 ಕಿಮೀ ದೂರದಲ್ಲಿರುವ ಇಂಡಿ, 60 ಕಿಮೀ ದೂರದಲ್ಲಿರುವ ವಿಜಯಪುರ ಅಗ್ನಿಶಾಮಕ ದಳ ಘಟಕಗಳೇ ನೆರವಿಗೆ ಬರಬೇಕಾದ ಅನಿವಾರ್ಯತೆ ಇದೆ.
ಸಾಕಷ್ಟುಅವಘಡಗಳು: ಸಿಂದಗಿ ತಾಲೂಕಿನಲ್ಲಿ ಇದುವರೆಗೆ ಸಾಕಷ್ಟುಅಗ್ನಿ ಅವಘಡಗಳು ಸಂಭವಿಸಿವೆ. 2017ರಲ್ಲಿ 68 ಅವಘಡಗಳು ಸಂಭವಿಸಿದರೆ, 2018ರಲ್ಲಿ 71 ಅನಾಹುತಗಳಾಗಿವೆ. ಇನ್ನು 2019ರಲ್ಲಿ ಇಲ್ಲಿಯವರೆಗೆ 37 ಅವಘಡಗಳು ಸಂಭವಿಸಿವೆ. ಹೀಗಾಗಿ ಇದುವರೆಗೆ ಜಲ ಸಮಸ್ಯೆಯನ್ನೇ ಕಾಣದ ಅಗ್ನಿಶಾಮಕ ಘಟಕಕ್ಕೆ ಈಗ ಜಲಬಾಧೆ ಶುರುವಾಗಿದೆ. ಒಂದು ವೇಳೆ ದೊಡ್ಡ ಅನಾಹುತವಾದಲ್ಲಿ, ಇರುವ ಎರಡು ವಾಹನಗಳಲ್ಲಿನ 10 ಸಾವಿರ ಲೀ. ಮಾತ್ರ ಉಪಯೋಗಿಸಬಹುದು. ಮತ್ತೆ ನೀರು ತುಂಬಿಕೊಂಡು ಬರಬೇಕಾದರೆ ಎಲ್ಲಿ ನೀರನ್ನು ತುಂಬಿಕೊಂಡು ಬರಬೇಕು ಎನ್ನುವ ಚಿಂತೆ ಸಿಬ್ಬಂದಿಯದ್ದಾಗಿದೆ.
ಮಳೆಯ ಕೊರತೆಯಿಂದ ಅಗ್ನಿಶಾಮಕ ದಳ ಕಚೇರಿ ಆವರಣದ ಅಂತರ್ಜಲ ಕುಸಿದಿದೆ. ಆದರೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ. ಕೂಡಲೇ ಇನ್ನೊಂದು ಕೊಳವೆ ಬಾವಿಯನ್ನು ಕೊರೆಸಲು ಆದೇಶಿಸುವೆ. ಕೆಲವೇ ತಿಂಗಳಲ್ಲಿ ತಾಲೂಕಿನ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ .27.10 ಕೋಟಿಗಳಲ್ಲಿ ಶಾಶ್ವತವಾಗಿ ನೀರಿನ ಯೋಜನೆಯನ್ನು ಮಾಡುವ ಯೋಜನೆ ರೂಪಿಸಲಾಗುವುದು.
- ಎಂ.ಸಿ.ಮನಗೂಳಿ, ತೋಟಗಾರಿಕೆ ಸಚಿವ
ಯಾವ ತಾಲೂಕಿನಲ್ಲಿಯೂ ನಮ್ಮ ಅಗ್ನಿಶಾಮಕ ದಳ ಇಲಾಖೆಗೆ ಸಂಬಂಧಿಸಿದಂತೆ ನೀರಿನ ಸಮಸ್ಯೆ ಆಗಿಲ್ಲ. ಆದರೆ ಸಿಂದಗಿಯಲ್ಲಿ ಮಾತ್ರ ಇಂತಹ ಸಮಸ್ಯೆ ಕಾಣುತ್ತಿದ್ದೇವೆ. ಇದರ ಮಧ್ಯೆಯೂ ನಮ್ಮ ಸಿಬ್ಬಂದಿ ಹೊಲ ಗದ್ದೆಗಳಿಗೆ ಹೋಗಿ ವಾಹನಗಳಿಗೆ ನೀರು ತುಂಬಿಕೊಂಡು ಬಂದು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ನಮಗೆ ಇನ್ನೂ 2 ಕೊಳವೆ ಬಾವಿಗಳ ಅವಶ್ಯಕತೆ ಇದೆ.
- ರಂಗನಾಥ, ಜಿಲ್ಲಾ ಅಗ್ನಿ ಶಾಮಕ ಇಲಾಖೆ ಮುಖ್ಯಾಧಿಕಾರಿ, ವಿಜಯಪುರ