ಮಂಡ್ಯ(ಆ.11): ಲಕ್ಷಗಟ್ಟಲೆ ಕ್ಯುಸೆಕ್‌ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದ್ದರೂ ಮಂಡ್ಯ ವಿ.ಸಿ ಸೇರಿ ಯಾವುದೇ ನಾಲೆಗಳಿಗೆ ಹನಿ ನೀರು ಬಿಟ್ಟುಕೊಳ್ಳುವ ಸ್ವಾತಂತ್ರ ರಾಜ್ಯಕ್ಕೆ ಇಲ್ಲ. ಕಬಿನಿ ಮತ್ತು ಕೆಆರ್‌ಎಸ್‌ ಅಣೆಕಟ್ಟೆಯಿಂದ ಒಂದೂವರೆ ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಆದರೆ, ಮಂಡ್ಯ ನಾಲೆಗಳಿಗೆ ಮಾತ್ರ ನೀರಿಲ್ಲ.

ಅಣೆಕಟ್ಟೆನಮ್ಮದು. ನೀರು ಅವರದ್ದು, ಅವರಿಗಾಗಿ ನಾವು ನೀರನ್ನು ಶೇಖರಣೆ ಮಾಡಿ ಸರಬರಾಜು ಮಾಡುವಂತಹ ನೀರುಗಂಟಿಯ ಕೆಲಸ ರಾಜ್ಯದ ಹಣೆಬರಹವಾಗಿದೆ. ಮಂಡ್ಯ ನಾಲೆಗಳಿಗೆ ಜುಲೈ 15 ರಿಂದ ಆಗಸ್ಟ್‌ 2ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯುಸೆಕ್‌ ನೀರು ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕಾಗಿದೆ. ಅಂದರೆ ರಾಜ್ಯದ ಪಾಲು ಕೇವಲ 5 ರಿಂದ ಐದೂವರೆ ಟಿಎಂಸಿ ಬಳಕೆ ಮಾಡಿಕೊಂಡಂತಾಗಿದೆ. ಆದರೆ, ತಮಿಳುನಾಡಿಗೆ ಮಳೆಯೇ ಇಲ್ಲದ ವೇಳೆಯಲ್ಲಿ 10 ರಿಂದ 12 ಟಿಎಂಸಿ ನೀರನ್ನು ಬಿಡಬೇಕಾದ ದುಸ್ಥಿತಿ ಬಂದಿತು.

ಡ್ಯಾಂನಲ್ಲಿ ನೀರಿದ್ದರೂ ನಾಲೆಗೆ ನೀರಿಲ್ಲ:

ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಈಗ ಸಾಕಷ್ಟುನೀರಿದೆ. ಮಂಡ್ಯ ವಿ.ಸಿ.ನಾಲೆ ಸೇರಿದಂತೆ ಎಲ್ಲಾ ನಾಲೆಗಳಿಗೆ ನೀರು ಬಿಟ್ಟುಕೊಳ್ಳಬಹುದು. ಮಳವಳ್ಳಿ, ಮದ್ದೂರು, ಕೆಎಂದೊಡ್ಡಿಯ ನಾಲೆಯ ಕೊನೆ ಭಾಗಗಳಿಗೆ ನೀರು ತಲುಪೇ ಇಲ್ಲ. ಈಗಲಾದರೂ ನಾಲೆಗಳಿಗೆ ನೀರು ಬಿಟ್ಟುಕೊಂಡರೆ ಕೊನೆ ಭಾಗಕ್ಕೆ ನೀರು ಕೊಡಲು ಸಾಧ್ಯವಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಮಳೆಯ ಅಭಾವವಿದೆ. ವಾಡಿಕೆಗಿಂತ ಶೇ.14 ರಷ್ಟುಮಳೆ ಕೊರತೆ ಇದೆ. ಮಳೆಯಾಶ್ರಿತ ಪ್ರದೇಶದಲ್ಲಿ ಭಿತ್ತನೆಯಾಗಿಲ್ಲ. ಕನಿಷ್ಠ ಪಕ್ಷ ನೀರಾವರಿ ಪ್ರದೇಶದಲ್ಲಾದರೂ ನಾಲೆಗಳ ಮೂಲಕ ನೀರು ಹರಿಸಿ ಬೆಳೆ ಬೆಳೆಯಲು ಅವಕಾಶ ಮಾಡಿಕೊಡಬೇಕು ಎನ್ನುವುದು ರೈತರ ಬೇಡಿಕೆ.

115 ಅಡಿ ತಲುಪಿದ KRS: 60 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ 7 ಜನ ಶಾಸಕರು, ಸಂಸದ ಸುಮಲತಾ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ನಾಲೆಗೆ ನೀರು ಬಿಟ್ಟು ಕೆರೆ ಕಟ್ಟೆಗಳನ್ನು ತುಂಬಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಬೇಸಿಗೆ ಸಮಯದಲ್ಲಿ ರೈತರ ಪಾಡು ದುರಂತಕ್ಕೀಡಾಗುತ್ತದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾಡಳಿತ ತಕ್ಷಣ ಈ ಕುರಿತಂತೆ ಸರ್ಕಾರದ ಗಮನಕ್ಕೆ ತಂದು ನಾಲೆಗಳಿಗೆ ನೀರು ಬಿಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಕೆಆರ್‌ ಎಸ್‌ ನಲ್ಲಿ 124 ಅಡಿ ನೀರಿದ್ದರೂ ಸಹ ಹನಿ ನೀರು ಬಿಟ್ಟುಕೊಳ್ಳಲು ಪ್ರಾಧಿಕಾರದ ಅನುಮತಿ ಕೇಳುವ ದುಸ್ಥಿತಿ ಬರುತ್ತದೆ. ಈಗ ಲಕ್ಷಗಟ್ಟಲೆ ನೀರನ್ನು ತಮಿಳುನಾಡಿಗೆ ಬಿಡುವಾಗ ನಾವು ಯಾರನ್ನು ಕೇಳಲಿಲ್ಲ. ಸಮೃದ್ಧಿಯಾಗಿ ನೀರು ಇರುವ ಸಂದರ್ಭದಲ್ಲಾದರೂ ನಮ್ಮ ನಾಲೆಗಳಿಗೆ ನೀರು ಹರಿಸಿದರೆ ಒಂದು ರೀತಿ ಉಪಕಾರ ಮಾಡಿದಂತಾಗುತ್ತದೆ. ಇದು ರೈತ ಸಮುದಾಯದ ಒಕ್ಕೂರಲಿನ ಕೂಗಾಗಿದೆ.