ತುಂಬಿದ ಆಲಮಟ್ಟಿ ಡ್ಯಾಂ: ಕಾಲುವೆಗೆ 65 ದಿನ ವಾರಾಬಂಧಿ ನೀರು
ಗರಿಷ್ಠ 123.081 ಟಿಎಂಸಿ ಅಡಿ ನೀರು ಸಂಗ್ರಹ| ಕಾಲುವೆಗಳ ಜಾಲದಲ್ಲಿ ನೀರನ್ನು ಅನಧಿಕೃತವಾಗಿ ಎತ್ತುವುದನ್ನು ನಿರ್ಬಂಧಿಸಲಾಗಿದೆ| ಕಾಲುವೆಗಳ ಜಾಲದ ಗೇಟ್‌ಗಳನ್ನು ಹಾನಿ ಮಾಡುವುದು| ಎಸ್ಕೇಪ್‌ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು| ಕಾಲುವೆಗಳ ಜಾಲದಲ್ಲಿ ಪಂಪಸೆಟ್ ಅಳವಡಿಸಿ ನೀರನ್ನು ಎತ್ತುವುದನ್ನು ನಿರ್ಬಂಧಿಸಲಾಗಿದೆ|
ಗಂಗಾಧರ ಎಂ. ಹಿರೇಮಠ
ಆಲಮಟ್ಟಿ(ಡಿ.01): ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಇದೇ ಡಿ. 1ರಿಂದ 2020ರ ಮಾರ್ಚ್ 20ರವರೆಗೆ ವಾರಾಬಂಧಿ ಪ್ರಕಾರ 65 ದಿನಗಳ ಕಾಲ ಕಾಲುವೆಗೆ ನೀರು ಹರಿಸಲಾಗುತ್ತದೆ.
ಆಲಮಟ್ಟಿ ಅಣೆಕಟ್ಟು ವೃತ್ತದಡಿ ಬರುವ ಆಲಮಟ್ಟಿ ಎಡದಂಡೆ, ಚಿಮ್ಮಲಗಿ ಏತ ನೀರಾವರಿ, ಆಲಮಟ್ಟಿ ಬಲದಂಡೆ, ತಿಮ್ಮಾಪುರ ಏತ ನೀರಾವರಿ, ಮರೋಳ ಏತ ನೀರಾವರಿ ಹಂತ- 1ರ ಪೂರ್ವ ಮತ್ತು ಪಶ್ಚಿಮ ಕಾಲುವೆಗಳ ಅಡಿ ಹಾಗೂ ಮುಳವಾಡ ಏತ ನೀರಾವರಿ ವೃತ್ತ ಕಚೇರಿಯಡಿ ಬರುವ ಮುಳವಾಡ ಏತ ನೀರಾವರಿ ಹಂತ-2ರ ಪೂರ್ವ ಮತ್ತು ಪಶ್ಚಿಮ ಕಾಲುವೆ, ಸೊನ್ನ ಏತ ನೀರಾವರಿ, ರೊಳ್ಳಿ-ಮನ್ನಿಕೇರಿ ಏತ ನೀರಾವರಿ, ತೆಗ್ಗಿ ಸಿದ್ದಾಪುರ ಏತ ನೀರಾವರಿ ಯೋಜನೆಗಳ ಕಾಲುವೆಯಡಿ ವಾರಾಬಂಧಿ ಪದ್ಧತಿಯನ್ನು 8 ದಿನ ಚಾಲು 7 ದಿನ ಬಂದ್ ಅವಧಿಗೆ ಬದಲಾಯಿಸಲಾಗಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾಲುವೆಗಳ ಜಾಲದಲ್ಲಿ ನೀರನ್ನು ಅನಧಿಕೃತವಾಗಿ ಎತ್ತುವುದನ್ನು ನಿರ್ಬಂಧಿಸಲಾಗಿದೆ. ಕಾಲುವೆಗಳ ಜಾಲದ ಗೇಟ್‌ಗಳನ್ನು ಹಾನಿ ಮಾಡುವುದು, ಎಸ್ಕೇಪ್‌ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಕಾಲುವೆಗಳ ಜಾಲದಲ್ಲಿ ಪಂಪಸೆಟ್ ಅಳವಡಿಸಿ ನೀರನ್ನು ಎತ್ತುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಈಗಾಗಲೇ ಎಲ್ಲೆಡೆ ಪ್ರಚುರ ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನೀರಿನ ಸಂಗ್ರಹ:
2170 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಲ್ಲಿ ಗರಿಷ್ಠ 123.081 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 515.15 ಮೀ. ವರೆಗೆ ನೀರು ಸಂಗ್ರಹವಿದ್ದು, 64.50 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಜುಲೈ 3ರಿಂದ ಆರಂಭಗೊಂಡಿದ್ದ ಜಲಾಶಯದ ಒಳಹರಿವು ನ. 24ರಂದು ಸ್ಥಗಿತಗೊಂಡಿತ್ತು. ಆದರೆ ಶನಿವಾರ ಮತ್ತೆ ಜಲಾಶಯಕ್ಕೆ 2170 ಕ್ಯುಸೆಕ್ ನೀರು ಹರಿದು ಬರುತ್ತಿದೆ. 2002ರಿಂದ ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹ ಆರಂಭಗೊಂಡಿದ್ದು, ಇದು ಅತಿ ದೀರ್ಘ ಕಾಲದ ಒಳಹರಿವು ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವರ್ಷ ಆಲಮಟ್ಟಿ ಜಲಾಶಯಕ್ಕೆ ದಾಖಲೆಯ 1195.5 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಇದು ಇಲ್ಲಿಯವರೆಗಿನ ಗರಿಷ್ಠ ಒಳಹರಿವು. ಅದೇ ರೀತಿ ಜಲಾಶಯದಿಂದ 1095.88 ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ನದಿ ತಳಪಾತ್ರಕ್ಕೆ ಹರಿಸಲಾಗಿದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ ಆಗಸ್ಟ್ 12ರಂದು 6.95 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿರುವುದು ಒಂದೇ ದಿನದ ಹರಿದು ಬಂದ ಗರಿಷ್ಠ ಒಳಹರಿವು ಆಗಿದೆ. ಅದೇ ರೀತಿ ಅದೇ ದಿನ 5.70 ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದ ನದಿ ಪಾತ್ರಕ್ಕೆ ಹರಿದು ಬಿಟ್ಟಿರುವುದು ಕೂಡಾ ಗರಿಷ್ಠ ಹೊರಹರಿವು ಆಗಿದೆ.