ಹಿಂಗಾರು ಬೆಳೆಗೂ ನೀರು ನೀಡಲಾಗುವುದು: ಡಿಸಿಎಂ ಸವದಿ
ರೈತರ ಹಿತ ಕಾಯುವುದಕ್ಕೆ ಸರ್ಕಾರ ಬದ್ಧವಾಗಿದೆ| ಕಳೆದ 3-4 ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಜಲಾಶಯದಲ್ಲಿ ನೀರಿನ ಕೊರತೆಯಿಂದ ಕೇವಲ ಮುಂಗಾರು ಬೆಳೆಗೆ ಮಾತ್ರ ನೀರನ್ನು ಒದಗಿಸಲಾಗುತ್ತಿತ್ತು
ಆದರೆ ಈ ಭಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚು ಇರುವುದರಿಂದ ಅದರ ಲಾಭವನ್ನು ರೈತರು ಪಡೆದುಕೊಳ್ಳಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ ಎಂದ ಸವದಿ|
ಮುನಿರಾಬಾದ(ನ.22): ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಹಾಗೂ ಜಲಾಶಯದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಿಂಗಾರು ಬೆಳೆಗೆ ನೀರನ್ನು ಒದಗಿಸಲಾಗುತ್ತದೆ, ಈ ಕುರಿತು ಜನವರಿಯಲ್ಲಿ ಮತ್ತೊಂದು ಸಭೆ ನಡೆಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
ಗುರುವಾರ ಮುನಿರಾಬಾದ್‌ನಲ್ಲಿ ನಡೆದ 113ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಹಿತ ಕಾಯುವುದಕ್ಕೆ ಸರ್ಕಾರ ಬದ್ಧವಾಗಿದೆ. ಕಳೆದ 3-4 ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಜಲಾಶಯದಲ್ಲಿ ನೀರಿನ ಕೊರತೆಯಿಂದ ಕೇವಲ ಮುಂಗಾರು ಬೆಳೆಗೆ ಮಾತ್ರ ನೀರನ್ನು ಒದಗಿಸಲಾಗುತ್ತಿತ್ತು. ಆದರೆ ಈ ಭಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚು ಇರುವುದರಿಂದ ಅದರ ಲಾಭವನ್ನು ರೈತರು ಪಡೆದುಕೊಳ್ಳಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ ಎಂದರು.
ತುಂಗಭದ್ರಾ ಡ್ಯಾಂ ತುಂಬಿದ್ರೂ 2ನೇ ಬೆಳೆಗೆ ನೀರು ಅನಿಶ್ಚಿತ!
ಇಂದಿನ ಸಭೆಯಲ್ಲಿ ರೈತರ ಹಿಂಗಾರು ಬೆಳೆಗೆ ವಿವಿಧ ಕಾಲುವೆಗಳಲ್ಲಿ ನೀರು ಹರಿಸುವ ದಿನಾಂಕ ನಿಗದಿಪಡಿಸಲಾಗಿದೆ. ಜನವರಿಯಲ್ಲಿ ಅಗತ್ಯ ಬಿದ್ದರೆ ನೀರಾವರಿ ಸಲಹಾ ಸಮಿತಿ ಸಭೆಯನ್ನು ಮತ್ತೊಮ್ಮೆ ಕರೆದು ಜಲಾಶಯದಲ್ಲಿರುವ ನೀರಿನ ಲಭ್ಯತೆ ಹಾಗೂ ಇತರೆ ಮೂಲಗಳಿಂದ ಜಲಾಶಯಕ್ಕೆ ನೀರನ್ನು ತರುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗುವುದು. ಸಭೆಯ ಉದ್ದೇಶ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಕೊರತೆಯಾಗಬಾರದು ಎಂದು ತಿಳಿಸಿದರು.
ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವ ತೊಂದರೆಯಾಗದೆ ಎಲ್ಲರಿಗೂ ನ್ಯಾಯ ಸಮ್ಮತವಾಗಿ (ಮೇಲ್ಮಾಗದ ರೈತರು ಹಾಗೂ ಕೆಳಭಾಗದ ರೈತರು) ನೀರು ದೊರೆಯಲಿದೆ, ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಅಚ್ಚು ಕಟ್ಟು ಪ್ರದೇಶದಲ್ಲಿ ಅನಧಿಕೃತವಾದ ನೀರಿನ ಬಳಕೆ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಲಾಶಯದಿಂದ 200 ಟಿಎಂಸಿಗೂ ಅಧಿಕ ಪ್ರಮಾಣದಲ್ಲಿ ನದಿಗೆ ನೀರು ಹರಿದು ಹೋಗಿದ್ದು. ಅಚ್ಚುಕಟ್ಟು ಪ್ರದೇಶದ ರೈತರಿಗೆ ಪ್ರತಿ ವರ್ಷ ಹಿಂಗಾರು ಬೆಳೆಗೆ ನೀರಿನ ಕೊರತೆ ಉಲ್ಬಣವಾಗುತ್ತಿದೆ, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಶೀಘ್ರವೇ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಆರೋಗ್ಯ ಸಚಿವ ಶ್ರೀರಾಮುಲು, ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸ್ಗೂರು, ಗಣೇಶ, ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಮಂಜಪ್ಪ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯಾವ ಕಾಲುವೆಗೆ ಎಷ್ಟು ನೀರು:
ಈಗಿರುವ ನೀರಿನ ಲಭ್ಯತೆಯನ್ನು ಆಧಾರಿಸಿ ಈಗ ತೆಗೆದುಕೊಂಡಿರುವ ತೀರ್ಮಾನದಂತೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಡಿಸೆಂಬರ್ 1 ರಿಂದ 31ರ ವರೆಗೆ 3800 ಕ್ಯುಸೆಕ್ ನೀರನ್ನು ಹರಿಸಲಾಗುವುದು. ಈ ಅವಧಿಯಲ್ಲಿ ಡಿಸೆಂಬರ್ 15 ರಿಂದ ಡಿಸೆಂಬರ್ 27 ವರೆಗೆ ವಡ್ಡರಹಟ್ಟಿ, ಸಿಂದನೂರು ಮತ್ತು ಸಿರವಾರ್ ವಿಭಾಗಗಳ ವಿತರಣಾ ಕಾಲುವೆಗಳನ್ನು ಆನ್/ಅಫ್ ಮಾಡಿ ಮೈಲ್-104ರಲ್ಲಿ ಬರುವ ಸಮತೋಲನ ಜಲಾಶಯಕ್ಕೆ ನೀರನ್ನು ಪೂರೈಕೆ ಮಾಡಿ ರಾಯಚೂರು ನಗರಕ್ಕೆ ಕುಡಿಯುವ ನೀರು ಹಾಗೂ ಯರಮರಸ್ ವಿಭಾಗದ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಬಳೆಗೆ ಸಂರಕ್ಷಿಸುವುದು.
ಜನವರಿ 1, 2020ರಿಂದ ಜನವರಿ 31, 2020 ರವರೆಗೆ ಪ್ರತಿನಿತ್ಯ 3400 ಕ್ಯುಸೆಕ್‌ನಂತೆ ನೀರನ್ನು ಒದಗಿಸಲಾಗುವುದು. ಫೆಬ್ರವರಿ 1 ರಿಂದ 31ನೇ ಮಾರ್ಚ ವರೆಗೆ ಪ್ರತಿನಿತ್ಯ 3000 ಕ್ಯುಸೆಕ್‌ನಂತೆ 60 ದಿನಗಳವರೆಗೆ ನೀರನ್ನು ಒದಗಿಸಲಾಗುವುದು. (ಈ ಅವಧಿಯಲ್ಲಿ ಫೆಬ್ರವರಿ 16ರಿಂದ ಫೆಬ್ರವರಿ 25 ರವರೆಗೆ ವಡ್ಡರಹಟ್ಟಿ, ಸಿಂದನೂರು, ಮತ್ತು ಸಿರವಾರ ವಿತರಣಾ ಕಾಲುವೆಗಳನ್ನು ಆನ್/ಆಫ್ ಮಾಡಿ ಮೈಲ್ 104 ರಲ್ಲಿ ಸಮತೋಲನಾ ಜಲಾಶಯಕ್ಕೆ ನೀರು ಪೂರೈಕೆ ಮಾಡಿ ಸಂಗ್ರಹಿಸಿಕೊಂಡು ಯರಮರಸ್ ವಿಭಾಗದ ಅಚ್ಚುಕಟ್ಟಿನಲ್ಲಿ ಬೆಳದು ನಿಂತಿರುವ ಬೆಳೆಗಳನ್ನು ಸಂರಕ್ಷಿಸುವುದು ಹಾಗೂ ರಾಯಚೂರು ಮತ್ತು ಇತರೆಡೆ ಕುಡಿಯುವ ನೀರು ಯೋಜನೆಗೆ ನೀರು ಒದಗಿಸಲಾಗುವುದು.) ಏಪ್ರಿಲ್ 10 ರಿಂದ 20 ರವರೆಗೆ 2000 ಕ್ಯುಸೆಕ್‌ನಂತೆ 10ದಿನಗಳಿಗೆ ಕುಡಿಯುವ ನೀರಿನ ಸಲುವಾಗಿ ವಿಜಯನಗರ ಕಾಲುವೆಗಳಿಗೆ ನೀರನ್ನು ಒದಗಿಸಲಾಗುವುದು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ:
ಈ ಕಾಲುವೆಗೆ ಡಿಸೆಂಬರ್ 1ರಿಂದ ಡಿಸೆಂಬರ್ 20 ರವರೆಗೆ ಪ್ರತಿನಿತ್ಯ 700 ಕ್ಯುಸೆಕ್‌ನಂತೆ ನೀರನ್ನು ಹರಿಸಲಾಗುವುದು. 21 ಡಿಸೆಂಬರ್‌ನಿಂದ 31 ಡಿಸೆಂಬರ್ ರವರೆಗೆ ಕಾಲುವೆಯಲ್ಲಿ ನೀರನ್ನು ನಿಲ್ಲಿಸಲಾಗುವುದು. ಜನವರಿ 1, 2020 ರಿಂದ ಜನವರಿ 15 ರವರೆಗೆ ಪ್ರತಿನಿತ್ಯ 750 ಕ್ಯುಸೆಕ್‌ನಂತೆ 10 ದಿನಗಳಿಗೆ ಅಥವಾ ಆಂಧ ಪ್ರದೇಶದ ಕಾಲುವೆಯಲ್ಲಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ಬಲದಂಡೆ ಕೆಳಮಟ್ಟದ ಕಾಲುವೆ:
ಡಿಸೆಂಬರ್ 1ರಿಂದ ಡಿಸೆಂಬರ್ 20 ರವರೆಗೆ ಪ್ರತಿನಿತ್ಯ 700 ಕ್ಯುಸೆಕ್ ಡಿಸೆಂಬರ್ 21ರಿಂದ ಜನವರಿ 10 ರವರೆಗೆ ಪ್ರತಿನಿತ್ಯ 500 ಕ್ಯುಸೆಕ್ ನೀರು, ಜನವರಿ 11,2020 ರಿಂದ ಜನವರಿ 31ರ ವರೆಗೆ ಪ್ರತಿನಿತ್ಯ 700 ಕ್ಯುಸೆಕ್ ನೀರು, ಫೆಬ್ರವರಿ 1ರಿಂದ ಮಾರ್ಚ 31ರವರೆಗೆ ಪ್ರತಿನಿತ್ಯ 650 ಕ್ಯುಸೆಕ್ ನೀರನ್ನು ಹರಿಸಲಾಗುವುದು. ಕುಡಿಯುವ ನೀರಿನ ಸಲುವಾಗಿ ಮೇ 1ರಿಂದ ಮೇ-15 ರವರೆಗೆ ಪ್ರತಿನಿತ್ಯ 310 ಕ್ಯುಸೆಕ್ ನೀರನ್ನು ಹರಿಸಲಾಗುವುದು ಎಂದು ನೀರಾವರಿ ಸಭೆಯಲ್ಲಿ ನಿರ್ಧರಿಸಲಾಗುವುದು.