ತುಮಕೂರು(ಆ.02): ಕಾವೇರಿ ಕೊಳ್ಳ ವ್ಯಾಪ್ತಿಗೆ ಸೇರುವ ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದ್ದು, ಹನಿ ನೀರಿಗೂ ತತ್ವಾರ ಪಡುವ ಸ್ಥಿತಿ ಸ್ಮಾರ್ಟ್‌ ಸಿಟಿಯಲ್ಲಿ ತಲೆದೋರಿದೆ.

ಪ್ರತಿ ವರ್ಷವೂ ನಗರಕ್ಕೆ ಹೇಮಾವತಿ ನದಿ ಮೂಲದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆದರೆ ಕಳೆದ ಬಾರಿ ಅಪಾರ ಪ್ರಮಾಣದ ನೀರು ಸಮುದ್ರಕ್ಕೆ ಹರಿದು ಹೋದರೂ ಹೇಮಾವತಿ ನದಿಯಿಂದ ಸೂಕ್ತ ಪ್ರಮಾಣದ ನೀರು ಹರಿಯದ ಪರಿಣಾಮ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ.

35 ವಾರ್ಡ್‌ನಲ್ಲೂ ನೀರಿಲ್ಲ:

ತುಮಕೂರು ನಗರ ವ್ಯಾಪ್ತಿಯ ಎಲ್ಲ 35 ವಾರ್ಡ್‌ಗಳಲ್ಲೂ ನೀರಿಗೆ ಹಾಹಾಕಾರ ಉಂಟಾಗಿದ್ದು ಕುಡಿಯುವ ನೀರು ನಿರ್ವಹಣೆ ಪಾಲಿಕೆಗೆ ತಲೆ ಬಿಸಿ ಉಂಟುಮಾಡಿದೆ. ತುಮಕೂರು ನಗರದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಟ್ಯಾಂಕರ್‌ ಮೂಲಕ ನಗರ ವಾಸಿಗಳಿಗೆ ನೀರು ಒದಗಿಸುವ ಪರಿಸ್ಥಿತಿ ಬಂದೊದಗಿದೆ. ತುಮಕೂರು ನಗರಕ್ಕೆ ಕುಡಿವ ನೀರು ಪೂರೈಸುವ ಬುಗುಡನಹಳ್ಳಿ ಕೆರೆಯಲ್ಲಿ ನೀರು ಖಾಲಿಯಾಗಿದೆ.

ಹೇಮಾವತಿ ನೀರು ಬಿಡಲು ಆಗ್ರಹ:

ಜೂನ್‌, ಜುಲೈ ತಿಂಗಳಲ್ಲೇ ಸಮೃದ್ಧ ಮಳೆಯಾಗುವ ಸಮಯ, ಆದರೆ ಇದೀಗ ಕುಡಿವ ನೀರಿಗೆ ಅಭಾವ ಎದುರಾಗಿದ್ದು, ಮುಂದಿನ ಬೇಸಿಗೆಗೆ ಯಾವ ಪರಿಸ್ಥಿತಿ ನಿರ್ಮಾಣವಾಗಲಿದೆ ಅನ್ನುವುದು ಊಹೆಗೂ ನಿಲುಕದಾಗಿದೆ. 35 ವಾರ್ಡ್‌ಗಳಿಗೂ 60 ಟ್ಯಾಂಕರ್‌ ಮೂಲಕ ನೀರು ಒದಗಿಸಲು ಯೋಜನೆ ಸಿದ್ಧವಾಗಿದೆ. ಆದರೆ ಜನ ಇನ್ನು ಮುಂದೆ ಬಿಂದಿಗೆ ಹಿಡಿದು ರಸ್ತೆಯಲ್ಲಿ ನೀರಿನ ಟ್ಯಾಂಕರ್‌ ಬರುವುದನ್ನು ಕಾಯಬೇಕಾಗಿದೆ. ಇತ್ತ ಹೇಮಾವತಿ ನದಿ ಪಾತ್ರದಲ್ಲಿ ಒಳ್ಳೆ ಮಳೆಯಾಗುತ್ತಿದ್ದು, ಡ್ಯಾಂ ನಿಂದ ನೀರು ಬಿಡಬೇಕೆಂದು ಜನರು ಆಗ್ರಹಿಸಿದ್ದಾರೆ.

600ಕೊಳವೆ ಬಾವಿಯಲ್ಲಿ 200ರಲ್ಲಿ ಮಾತ್ರ ನೀರು:

ನಗರಕ್ಕೆ ನಿತ್ಯ 57 ಎಂಎಲ್‌ಡಿ ನೀರು ಬೇಕಾಗಿದೆ. ಬುಗುಡನಹಳ್ಳಿ ಕೆರೆ ಜೊತೆಗೆ ಮೈದಾಳ ಕೆರೆಯಿಂದ ತುಮಕೂರು ನಗರ 10 ವಾರ್ಡ್‌ಗಳಿಗೆ ನೀರು ಒದಗಿಸಲು ಸಾಧ್ಯವಿದೆ. ಈ ನೀರನ್ನು ಎಲ್ಲ ವಾರ್ಡ್‌ಗಳಿಗೂ ಹಂಚಿಕೆ ಮಾಡಿದರೆ ಅದು ಕೇವಲ ಮೂರ್ನಾಲ್ಕು ದಿನದಲ್ಲಿ ಖಾಲಿಯಾಗಲಿದೆ. ತುಮಕೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೂ 600 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಅವುಗಳಲ್ಲಿ 200 ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದೆ. ಹೀಗಾಗಿ ಪ್ರತಿವಾರ್ಡ್‌ಗಳಲ್ಲಿ ಒಂದೊಂದು ಪ್ರತ್ಯೇಕವಾಗಿ ಹೆಚ್ಚುವರಿಯಾಗಿ ಕೊಳವೆ ಬಾವಿ ಕೊರೆಯಲು ನಿರ್ಧರಿಸಲಾಗಿದೆ.

ತರೀಕೆರೆ: ತಾಲೂಕಿನಾದ್ಯಂತ ಕುಡಿವ ನೀರಿಗೆ ಹಾಹಾಕಾರ

ಮತ್ತಷ್ಟು ಕೊಳವೆ ಬಾವಿ ಕೊರೆಸಲು ತೀರ್ಮಾನ:

ಗಾಂಧಿನಗರ, ಶ್ರೀರಾಮನಗರ, ಅರಳೇಪೇಟೆ ಸೇರಿದಂತೆ 52 ಬಡಾವಣೆಗಳಲ್ಲಿ ಕೊಳವೆಬಾವಿ ಕೊರೆಸಿದರೂ, ನೀರು ಸಿಗುವ ಸಾಧ್ಯತೆಗಳಿಲ್ಲ, ಪಾಲಿಕೆ ನಿಯಂತ್ರಣಕ್ಕೆ ಸಿಗದಂತಿರುವ ಬಸವೇಶ್ವರ ಬಡಾವಣೆ, ಕ್ಯಾತ್ಸಂದ್ರ, ಸತ್ಯಮಂಗಲ,ಮರಳೇನಹಳ್ಳಿ ಗೋಮಾಳ, ಭೀಮಸಂದ್ರ ಸೇರಿದಂತೆ ಹಲವು ಪ್ರದೇಶಗಳಿಂದ ಕೊಳವೆಬಾವಿ ಕೊರೆಸಿ ನೀರು ಒದಗಿಸಲು ಪಾಲಿಕೆ ಮುಂದಾಗಿದೆ.

ಮಳೆಗಾಲದಲ್ಲೇ ನೀರಿಗೆ ತತ್ವಾರ:

ಇದೇ ಮೊದಲ ಬಾರಿಗೆ ಮಳೆಗಾಲದಲ್ಲೇ ನೀರಿಗೆ ತತ್ವಾರ ಶುರುವಾಗಿದೆ. ಒಂದು ಕಡೆ ಬುಗುಡನಹಳ್ಳಿ ಸೇರಿದಂತೆ ಬಹಳಷ್ಟುಜಲ ಸಂಗ್ರಹಾಗಾರಗಳು ನೀರಿಲ್ಲದೆ ಭಣಗುಟ್ಟುತ್ತಿದೆ. ವಾರವಾದರೂ ಮನೆಯಲ್ಲಿ ನೀರು ಬರುತ್ತಿಲ್ಲ. ಪ್ರತಿ ದಿನ ನೀರಿಗಾಗಿ ಜನ ಬಕ ಪಕ್ಷಿಯಂತೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೆ ಬರುವ ಬೇಸಿಗೆಯಲ್ಲಿ ಹನಿ ನೀರಿಗೂ ದೊಡ್ಡ ಹೋರಾಟವೇ ನಡೆಯಬೇಕಾಗುತ್ತದೆ ಎಂಬ ಆತಂಕ ಜನಸಾಮಾನ್ಯರದ್ದು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಮಾನ್ಯವಾಗಿ ಆಗಸ್ಟ್‌ ತಿಂಗಳಿನಲ್ಲಿ ಭರಪೂರ್ತಿ ನೀರು ಸಿಗುತ್ತಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ನೀರು ಸಿಗದೇ ಜನ ಹೈರಾಣಾಗಿದ್ದಾರೆ. ಈಗಾಗಲೇ ತುಮಕೂರು ನಗರದಲ್ಲಿ ನೀರಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ. ಆದರೆ ಜಲಸಂಗ್ರಹಾಗಾರಗಳು ಬತ್ತಿ ಹೋಗಿರುವುದರಿಂದ ನೀರನ್ನು ಹೇಗೆ ಒದಗಿಸುವುದು ಎಂಬ ಚಿಂತೆಯಲ್ಲಿ ಪಾಲಿಕೆ ಮುಳುಗಿದೆ.

ಪ್ರತಿ ವರ್ಷಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ನದಿ ಮೂಲದ ನೀರಿಗೆ ಗಂಟು ಬೀಳದೆ ತನ್ನದೆ ನೀರಿನ ಮೂಲ ಸೃಷ್ಟಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಜೊತೆಗೆ ಜನರು ಮಳೆಕುಯ್ಲು ನೀರಾವರಿ ಪದ್ದತಿಗಳನ್ನು ಆಳವಡಿಸಿಕೊಳ್ಳಬೇಕಾಗಿದೆ ಎಂದು ಮೇಯರ್ ಲಲಿತಾ ರವೀಶ್‌ ಹೇಳಿದ್ದಾರೆ.

-ಉಗಮ ಶ್ರೀನಿವಾಸ್‌