ಚಿಕ್ಕಮಗಳೂರು(ಜು.25): ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ ನದಿಗಳು ಹರಿಯುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ.

ರಾಜ್ಯದ 7 ಜಿಲ್ಲೆಗಳ ನೆಲವನ್ನು ತಂಪು ಮಾಡುವ ಭದ್ರಾ ಜಲಾಶಯದ ಸೆರಗಿನಲ್ಲೇ ಈ ತಾಲೂಕು ಇದ್ದರೂ ಇಲ್ಲಿನ ಜನರಿಗೆ ಸರ್ವಋುತುಗಳಲ್ಲೂ ಸಂಪೂರ್ಣ ಕುಡಿಯುವ ನೀರಿನ ಸೌಲಭ್ಯ ಕಾಣುವ ಭಾಗ್ಯವೇ ಬಂದಿಲ್ಲ.

ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲ:

ಮಳೆಗಾಲ ಆರಂಭವಾಗಿ ಇನ್ನು ಐದಾರು ದಿನಗಳು ಕಳೆದರೆ 2 ತಿಂಗಳು ಪೂರ್ಣಗೊಳ್ಳಲಿವೆ. ಆದರೆ, ನಿರೀಕ್ಷೆಯಂತೆ ಮಳೆಯೇ ಬಂದಿಲ್ಲ. ಇದರಿಂದಾಗಿ ಕೆರೆಕಟ್ಟೆಗಳು ಒಣಗಿವೆ. ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ರೈತರು ಮುಗಿಲತ್ತ ನೋಡುತ್ತಿದ್ದಾರೆ. ಬೇಸಿಗಾಲವೇ ಮಳೆಗಾಲದಲ್ಲೂ ಮುಂದುವರಿದಿದೆ.

ಲಭ್ಯವಿರುವ ಪ್ರದೇಶಗಳಿಂದ ಟ್ಯಾಂಕರ್‌ ಮೂಲಕ ನೀರನ್ನು ಸಂಗ್ರಹಿಸಿ ತಾಲೂಕಿನ ಅನುವನಹಳ್ಳಿ, ಬೆಟ್ಟದಾವರೆಕೆರೆ, ಸಪ್ಪನಹಳ್ಳಿ, ದೋರನಾಳು, ಕೆ.ಹೊಸೂರು, ಈ ಗ್ರಾಮಗಳಿಗೆ ಮತ್ತು ನಾರಾಣಾಪುರ, ತ್ಯಾರಜ್ಜನಹಳ್ಳಿ, ತ್ಯಾಗದಕಟ್ಟೆ, ತಿಪ್ಪಗೊಂಡನಹಳ್ಳಿ, ಹರುವನಹಳ್ಳಿ, ಗೌಳಿಗರ ಕ್ಯಾಂಪ್‌ ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಆ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ತೀವ್ರ ಮಳೆ ಕೊರತೆ:

ತಾಲೂಕಿನಾದ್ಯಂತ ನಿತ್ಯ ಬೇಸಿಗೆ ವಾತಾವರಣವೇ ಕಾಣುತ್ತಿದೆ. ತುಸುವೂ ಮಳೆ ಬೀಳುವ ಲಕ್ಷಣಗಳೇ ಇಲ್ಲ. ಕೆರೆ- ಕಟ್ಟೆಗಳಿಗೆ ಹಳ್ಳ- ಕೊಳ್ಳಗಳಿಗೆ ತೆರೆದಬಾವಿ ಕೊಳವೆ ಬಾವಿಗಳಿಗೆ ನೀರಾಗುವ ತಾಲೂಕಿನ ಅನೇಕ ಜಲಾನಯನ ಪ್ರದೇಶಗಳಲ್ಲೇ ಮಳೆಯ ತೀವ್ರ ಕೊರತೆ ಎದ್ದುಕಾಣುತ್ತಿದೆ. ಜುಲೈ ತಿಂಗಳು ಮುಗಿಯುವ ಹಂತ ತಲುಪುತ್ತಿದ್ದರೂ ತಾಲೂಕಿನ ಯಾವುದೇ ಭಾಗದಲ್ಲಿ ನೀರಾಗುವ ಮಳೆ ಕಂಡು ಬರುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಹಳ್ಳಿ ಹೋಬಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎಷ್ಟೆಲ್ಲ ದೊಡ್ಡ ಸಮಸ್ಯೆ ಆಗಬಹುದು ಎಂದು ಊಹಿಸಲು ಸಾಧ್ಯವಿಲ್ಲದಂತಾಗಿದೆ.

ಸಮಸ್ಯೆ ಎದುರಾಗಬಹುದಾದ ಗ್ರಾಮಗಳು:

ಅಜ್ಜಂಪುರ, ಬರಗೇನಹಳ್ಳಿ, ಗುಳ್ಳದಮನೆ, ಮುಡುಗೋಡು, ಹಲಸೂರು, ಗೌರಾಪುರ, ಹುಣಸಘಟ್ಟ, ಡಿ.ಬಿ.ಕೆರೆ, ಜಾವೂರು, ಬಗ್ಗವಳ್ಳಿ, ನೇರಲೆಕೆರೆ, ಸುಣ್ಣದಹಳ್ಳಿ, ಕೋರನಹಳ್ಳಿ, ಚೀರನಹಳ್ಳಿ, ಸೊಕ್ಕೆ, ಬೆಟ್ಟದಹಳ್ಳಿ, ಕುಡ್ಲೂರು, ಲಿಂಗದಹಳ್ಳಿ, ಕೊರಟಿಕೆರೆ, ಹಾದಿಕೆರೆ, ಅಮೃತಾಪುರ, ಅತ್ತಿಮೊಗ್ಗೆ, ಸೊಲ್ಲಾಪುರ, ಗಡೀಹಳ್ಳಿ, ಬೇಗೂರು, ಮುದಿಗೆರೆ.

ಕುಸಿದ ನೀರಿನ ಮಟ್ಟ:

ತಾಲೂಕಿನ ಏಕೈಕ ಜೀವನದಿ ಎನಿಸಿರುವ ಸಮೀಪದ ಲಕ್ಕವಳ್ಳಿ ಬಳಿಯ ಭದ್ರಾನದಿಯಲ್ಲಿ ನೀರಿನ ಮಟ್ಟತೀವ್ರತರವಾಗಿ ಕುಸಿದು ಹೋಗಿದ್ದು ಕಳೆದ ವರ್ಷ ಇದೇ ದಿವಸಗಳಲ್ಲಿ ಮುಂಗಾರು ಮಳೆಯ ದಿನಗಳಲ್ಲೇ ಈ ನದಿ ತುಂಬಿ ಹರಿದಿದೆ. ನದಿಯಲ್ಲಿ ಒಳ ಮತ್ತು ಹೊರ ಹರಿವು ಆಗಾಧ ಪ್ರಮಾಣದಲ್ಲಿ ಒದಗಿ ಬಂದು ನದಿಯ ನೀರಿನ ಮಟ್ಟ165 ಅಡಿ ತಲುಪಿದ್ದು, ಹೆಚ್ಚಳವಾಗಿದ್ದ ನದಿನೀರನ್ನು ಅಣೆಕಟ್ಟಿನ 4 ಕ್ರಸ್ಟ್‌ ಗೇಟ್‌ಗಳನ್ನು ತೆರೆದು ಯಥೇಚ್ಚವಾಗಿಯೇ ನೀರನ್ನು ನದಿಯಿಂದ ಹೊರಬಿಡಲಾಗಿತ್ತು. ಇದರಿಂದ ಭದ್ರಾನದಿ ಸಮೀಪದ ಪ್ರದೇಶಗಳಲ್ಲಿ ಅಂತರ್ಜಲ ಸಹಜವಾಗಿಯೇ ಅಭಿವೃದ್ಧಿಗೊಂಡು ಹೆಚ್ಚಾಗಿತ್ತು. ಆದರೆ ಈ ವರ್ಷ ಅಂತಹ ಮಳೆಯ ನಿರೀಕ್ಷೆ ಉಲ್ಟಾ ಆಗಿದೆ

ಇದೀಗ ಪಟ್ಟಣದಲ್ಲಿ 6 ದಿವಸಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅದೂ ಸ್ವಲ್ಪವೇ ಪ್ರಮಾಣದಲ್ಲಿ, ಪಟ್ಟಣದಲ್ಲಿರುವ ಬೋರ್‌ವೆಲ್‌ಗಳು, ಕಿರುನೀರು ಸರಬರಾಜು ಘಟಕಗಳಿಂದ ಸದ್ಯ ನಿತ್ಯ ಬಳಕೆಗಾದರೂ ನೀರು ದೊರೆಯುತ್ತಿದೆ. ಎಷ್ಟೋ ಬಡಾವಣೆಗಳಿಗೆ ಭದ್ರಾನದಿಯ ಕುಡಿಯುವ ನೀರು ತಲುಪುತ್ತಲೆ ಇಲ್ಲ. ಮಳೆ ಚೆನ್ನಾಗಿ ಬಂದರೆ ಮಾತ್ರ ಒಂದು ಹನಿ ನೀರನ್ನು ವ್ಯರ್ಥಗೊಳಿಸದೇ ಸಂಗ್ರಹಿಸುವಂತಹ ಪರಿಸ್ಥಿತಿ ತಲೆದೋರಿದೆ.

-ಅನಂತ ನಾಡಿಗ್‌