ಉಡುಪಿ(ಜು.05): ಜಿಲ್ಲೆಯಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಶುಕ್ರವಾರ ರಾತ್ರಿ ಆರಂಭವಾದ ಮಳೆ ಶನಿವಾರ ಇಡೀ ದಿನ ಸುರಿದಿದೆ. ಜಿಲ್ಲೆಯ ಎಲ್ಲಾ ನದಿಗಳು ತುಂಬಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

ಬೇಸಿಗೆಗಾಲದಲ್ಲಿ ಸಂಪೂರ್ಣ ಬತ್ತಿದ್ದ ನದಿಗಳು ಈ ಮಳೆಗೆ ತುಂಬಿವೆ. ಮುಂಜಾನೆ ಬಹುತೇಕ ನದಿಗಳಲ್ಲಿ ದಡದವರೆಗೆ ನೀರು ತುಂಬಿತ್ತು. ಮಧ್ಯಾಹ್ನವಾಗುತ್ತಲೇ ಮಳೆ ಸ್ವಲ್ಪ ಕಡಿಮೆಯಾಗಿ ನದಿಗಳಲ್ಲಿ ನೀರು ಹಿಮ್ಮುಖವಾಗಿದೆ. ಉದ್ಯಾವರ, ಸುವರ್ಣ, ಸೀತಾ ನದಿಗಳಲ್ಲಿ ಕೆಂಪು ನೀರು ಬಹಳ ರಭಸವಾಗಿ ಹರಿಯುತ್ತಿತ್ತು.

ದಕ್ಷಿಣ ಕನ್ನಡದಲ್ಲಿ ಮತ್ತೆ ಮೂವರು ಬಲಿ, ಬಿಜೆಪಿ ಮುಖಂಡ ಸೇರಿ 75 ಪಾಸಿಟಿವ್

ಹವಾಮಾನ ಇಲಾಖೆಯ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ 4 ದಿನಗಳ ಕಾಲ ಯಲ್ಲೋ ಅಲರ್ಟ್‌ (ಹಳದಿ ಎಚ್ಚರಿಕೆ) ನೀಡಿದ್ದು, ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಜಿಲ್ಲೆಯ ನದಿಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಗಳಿವೆ.

ಕಲ್ಸಂಕದಲ್ಲಿ ಕೃತಕ ನೆರೆ: ಉಡುಪಿ ನಗರದ ಮಧ್ಯದಲ್ಲಿ ಹರಿಯುವ ಇಂದ್ರಾಣಿ ಹೊಳೆ (ಕಲ್ಸಂಕ ತೋಡು)ಯಲ್ಲಿ ಪ್ರವಾಹ ಉಂಟಾಗಿದ್ದು, ಇಲ್ಲಿನ ಕಲ್ಸಂಕ, ಮಠದಬೆಟ್ಟು ಪ್ರದೇಶಗಳಲ್ಲಿ, ಹೊಳೆಯ ಪಕ್ಕದ ತಗ್ಗಿನ ಮನೆಗಳ ಅಂಗಳದವರೆಗೆ ನೀರು ನುಗ್ಗಿತ್ತು. ಈ ಹೊಳೆಯ ಅಕ್ಕಪಕ್ಕದ ಪ್ರದೇಶಗಳು ಅಕ್ರಮ ಒತ್ತುವರಿಯಾಗಿದ್ದು, ನೀರು ಸರಾಗವಾಗಿ ಹರಿಯದೇ ಇಲ್ಲಿ ಪ್ರತಿವರ್ಷ ಕೃತಕ ನೆರೆ ಮಾಮೂಲಿಯಾಗುತ್ತಿದೆ.

ಈ ಬಾರಿಯ ಹೆಚ್ಚು ಮಳೆ:

ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಈ ಬಾರಿ ಮಳೆಗಾಲದಲ್ಲಿಯೇ ಅತೀ ಹೆಚ್ಚು 81.50 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ 103.40 ಮಿ.ಮಿ., ಕುಂದಾಪುರ ತಾಲೂಕಿನಲ್ಲಿ 62.00 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 90.90 ಮಿ.ಮೀ. ಮಳೆ ದಾಖಲಾಗಿದೆ.

ಉಡುಪಿ ಸಮೀಪದ ಬಡಾನಿಡಿಯೂರು ಗ್ರಾಮದಲ್ಲಿ ಜಿಲ್ಲೆಯಲ್ಲಿ ಅತೀಹೆಚ್ಚು 176 ಮಿ.ಮೀ. ಮಳೆಯಾಗಿದೆ. ಬೊಮ್ಮರಬೆಟ್ಟು, ಕುಕ್ಕುಂದೂರು, ಕಾಂತಾವರ, ಪಳ್ಳಿ, ಸಾಣೂರು, ಕಂಬದಕೋಣೆ, ಚಾಂತಾರು, ಹಾವಂಜೆ, ಕೆಮ್ಮಣ್ಣು, ಕಟಪಾಡಿ, ಕಾಪು, ಪಡುಬಿದ್ರಿ, ಅಂಬಲಪಾಡಿ, ಮಣಿಪುರ ಇತ್ಯಾದಿ ಗ್ರಾಮಗಳಲ್ಲಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.

ದುಬೈ, ಕುವೈಟ್‌ನಿಂದ ಬಂತು 3 ವಿಮಾನ: 423 ಮಂದಿ ಆಗಮನ

ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದರೂ, ಜನಜೀವನಕ್ಕೆ ವಿಪರೀತ ತೊಂದರೆ ಅಥವಾ ಹಾನಿಗಲಾಗಿಲ್ಲ. ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಅಬ್ಬಾಸ್‌ ಸಾಹೇಬರ ಮನೆಗೆ ಮಳೆಯಿಂದ ಭಾಗಶಃ ಹಾನಿಯಾಗಿದ್ದು, 25,000 ರು.ಗಳ ನಷ್ಟವನ್ನು ಅಂದಾಜು ಮಾಡಲಾಗಿದೆ.