ಬೆಂಗಳೂರು(ಮಾ.04): ಬಿಬಿಎಂಪಿಯ 198 ವಾರ್ಡ್‌ಗಳನ್ನು 2011ರ ಜನಗಣತಿಗೆ ಅನುಗುಣವಾಗಿ ಪುನರ್‌ ವಿಂಗಡಿಸಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.

ಪುನರ್‌ ವಿಂಗಡಣೆ ವೇಳೆ ಕಾಂಗ್ರೆಸ್‌ನ ಮಾಜಿ ಮೇಯರ್‌ಗಳಾದ ಗಂಗಾಂಬಿಕೆ ಹಾಗೂ ಜಿ.ಪದ್ಮಾವತಿ ಅವರು ಪ್ರತಿನಿಧಿಸುವ ಜಯನಗರ ಹಾಗೂ ಪ್ರಕಾಶ ನಗರ ವಾರ್ಡ್‌ಗಳೇ ಮಾಯವಾಗಿವೆ. ಇನ್ನು ಹಲವು ವಾರ್ಡ್‌ಗಳ ಹೆಸರು ಬದಲಾವಣೆಯಾಗಿದ್ದು, ಹೊಸ ವಾರ್ಡ್‌ಗಳು ಸೃಷ್ಟಿಯಾಗಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2011ರ ಜನಗಣತಿಯ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ ಮರು ವಿಂಗಡಣೆ ಮಾಡಲಾಗಿದೆ. 2011ರಲ್ಲಿ ನಗರದಲ್ಲಿ ಒಟ್ಟು 84 ಲಕ್ಷ ಜನಸಂಖ್ಯೆ ಇದ್ದು, ಪ್ರತಿ ವಾರ್ಡ್‌ಗೆ ಸುಮಾರು 42 ಸಾವಿರ ಮಂದಿಯಂತೆ ಹಂಚಿಕೆ ಮಾಡಿ ವಾರ್ಡ್‌ ಮರು ವಿಂಗಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಳಿಗೆ ಬರುವ 28 ವಿಧಾನಸಭಾ ಕ್ಷೇತ್ರದ ಪೈಕಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.5ಕ್ಕಿಂತ ಹೆಚ್ಚು ಬದಲಾವಣೆ ಮಾಡದಂತೆ ಮರು ವಿಂಗಡನೆ ಮಾಡಲಾಗಿದೆ. ಆದರೆ, ಒಟ್ಟು ವಾರ್ಡ್‌ ಸಂಖ್ಯೆ 198 ಮೀರದಂತೆ ಮಾಡಲಾಗಿದೆ.

ಈ ವೇಳೆ ನಗರದ ಕೇಂದ್ರ ಭಾಗದ ವಲಯಗಳಾದ ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯದ ವಾರ್ಡ್‌ಗಳ ಸಂಖ್ಯೆ132ರಿಂದ 114ಕ್ಕೆ ಇಳಿಕೆಯಾಗಿದೆ. ಇನ್ನು ಹೊರ ಹಾಗೂ ಹೊಸ ವಲಯಗಳಾದ ಬೊಮ್ಮನಹಳ್ಳಿ, ಆರ್‌.ಆರ್‌.ನಗರ, ಯಲಹಂಕ, ಮಹದೇವಪುರ ಹಾಗೂ ದಾಸರಹಳ್ಳಿ ವಲಯದ ವಾರ್ಡ್‌ಗಳ ಸಂಖ್ಯೆ 68 ರಿಂದ 84 ವಾರ್ಡ್‌ಗಳಿಗೆ ಏರಿಕೆಯಾಗಿದೆ.

ಪದ್ಮನಾಭ ನಗರ ಕ್ಷೇತ್ರವನ್ನು ಹೊರತು ಪಡಿಸಿದರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ವಾರ್ಡ್‌ಗಳಲ್ಲಿ ಏರುಪೇರಾಗಿವೆ. ಯಲಹಂಕ ಕ್ಷೇತ್ರದಲ್ಲಿ 4 ವಾರ್ಡ್‌ಗಳಿದ್ದದ್ದು ಇದೀಗ 6 ವಾರ್ಡ್‌ಗಳಾಗಿವೆ. ಆರ್‌.ಆರ್‌.ನಗರ ಕ್ಷೇತ್ರದಲ್ಲಿ 9ರಿಂದ 11ಕ್ಕೆ, ಯಶವಂತಪುರ ಕ್ಷೇತ್ರದಲ್ಲಿ 5 ರಿಂದ 7ಕ್ಕೆ, ಬೆಂಗಳೂರು ದಕ್ಷಿಣದಲ್ಲಿ 8ರಿಂದ10ಕ್ಕೆ, ಬೊಮ್ಮನಹಳ್ಳಿಯಲ್ಲಿ 8ರಿಂದ 10ಕ್ಕೆ, ಕೆ.ಆರ್‌.ಪುರದಲ್ಲಿ 9ರಿಂದ 11ಕ್ಕೆ, ಮಹದೇವಪುರ ಕ್ಷೇತ್ರದಲ್ಲಿ 9ರಿಂದ 11ಕ್ಕೆ ಏರಿಕೆಯಾಗಿವೆ. ಗಾಂಧಿನಗರದಲ್ಲಿ 7ರಿಂದ 6ಕ್ಕೆ, ಸರ್ವಜ್ಞನಗರದಲ್ಲಿ 8ರಿಂದ 7ಕ್ಕೆ, ಚಿಕ್ಕಪೇಟೆ 7ರಿಂದ 6ಕ್ಕೆ , ರಾಜಾಜಿನಗರದಲ್ಲಿ 7ರಿಂದ 5ಕ್ಕೆ ಇಳಿಕೆ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ವಾರ್ಡ್‌ ಸಂಖ್ಯೆ ಬದಲಾವಣೆಯಾಗಿಲ್ಲ. ವಾರ್ಡ್‌ಗಳ ಮರು ವಿಂಗಡಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಗೆಜೆಟ್‌ ಹೊರಡಿಸಿದ 15 ದಿನಗಳಲ್ಲಿ ಸಲ್ಲಿಸಲು ಕಾಲಾವಕಾಶವನ್ನು ನಗರಾಭಿವೃದ್ಧಿ ಇಲಾಖೆ ನೀಡಲಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ ಆರೋಪ

ಈ ಹಿಂದೆ 2010ರಲ್ಲಿ ವಾರ್ಡ್‌ ಮರು ವಿಂಗಡನೆ ಮಾಡಲಾಗಿತ್ತು. ಆಗಲೂ ಅಧಿಕಾರದಲ್ಲಿದ್ದ ಬಿಜೆಪಿ ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೆ ಏರಿಕೆ ಮಾಡಿ ಮರು ವಿಂಗಡನೆ ಮಾಡಿತ್ತು. ಆಗಲೂ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿಯೇ ವಾರ್ಡ್‌ ಮರು ವಿಂಗಡನೆ ಮಾಡಲಾಗಿತ್ತು. ಇದೀಗ ಸಹ ಅದೇ ತಂತ್ರವನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಬಲ್ಯ ಇರುವ ಅನೇಕ ವಾರ್ಡ್‌ಗಳನ್ನು ವಿಭಜನೆ ಮಾಡಿ ಮತ ಬ್ಯಾಂಕ್‌ ಒಡೆಯುವ ಪ್ರಯತ್ನ ಮಾಡಲಾಗಿದೆ ಎಂಬ ಆರೋಪ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಂದ ಕೇಳಿಬರುತ್ತಿವೆ.

ವಾರ್ಡ್‌ ಸಂಖ್ಯೆ 225ಕ್ಕೆ ಏರಿಕೆ?:

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿ ಮರು ವಿಂಗಡಣೆ ಮಾಡಲಾಗಿದೆ. ಬಿಜೆಪಿ ಸ್ನೇಹಿತರೇ ಹೇಳುವ ಪ್ರಕಾರ ಕೋರ್ಟ್‌ಗೆ ಸಲ್ಲಿಸುವುದಕ್ಕಾಗಿ ವಾರ್ಡ್‌ ಮರು ವಿಂಗಡಿಸಿ ಅಧಿಸೂಚನೆ ಹೊರಡಿಸಲಾಗಿದ್ದು, ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 2021ರ ಜನಗಣತಿಗೆ ಅನುಗುಣವಾಗಿ 198 ರಿಂದ 225ಕ್ಕೆ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಜತೆಗೆ ಒಂದು ವರ್ಷ ಚುನಾವಣೆ ಮುಂದೂಡಲೂ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಡಳಿತ ಪಕ್ಷದ ಸದಸ್ಯರಿಗೂ ಕಂಟಕ:

ವಾರ್ಡ್‌ ಮರು ವಿಂಗಡಣೆ ಕೇವಲ ಕಾಂಗ್ರೆಸ್‌ ಸದಸ್ಯರಿಗೆ ಮಾತ್ರ ಕಂಟಕವಾಗಿಲ್ಲ. ಆಡಳಿತ ಪಕ್ಷ ಬಿಜೆಪಿಯ ಸುಮಾರು 12 ವಾರ್ಡ್‌ ಸದಸ್ಯರಿಗೂ ತೊಂದರೆ ಉಂಟಾಗಿದೆ. ತಾವು ಇದೀಗ ಸ್ಪರ್ಧೆ ಮಾಡಿದ ವಾರ್ಡ್‌ ತೊರೆದು ಬೇರೆ ವಾರ್ಡ್‌ನಿಂದ ಸ್ಪರ್ಧೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಯನಗರ ವಾರ್ಡನ್ನು ಸಿದ್ಧಾಪುರ ಹಾಗೂ ವಿವಿಪುರ ವಾರ್ಡ್‌ಗೆ ಸೇರಿಸಲಾಗಿದೆ. ಉತ್ತಮ ಕೆಲಸ ಮಾಡಿದ್ದೇವೆ ಎಂಬ ವಿಶ್ವಾಸ ಇದೆ. ಯಾವುದೇ ವಾರ್ಡ್‌ನಿಂದ ಸ್ಪರ್ಧೆ ಮಾಡಿದರೂ ಜನ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಜಯನಗರ ವಾರ್ಡ್‌ ಮಾಜಿ ಮೇಯರ್‌ ಗಂಗಾಂಬಿಕೆ ಅವರು ಹೇಳಿದ್ದಾರೆ.

ರಾಜಕೀಯ ದ್ವೇಷದಿಂದ ಪ್ರಕಾಶನಗರ ವಾರ್ಡ್‌ ಛಿದ್ರಗೊಳಿಸಲಾಗಿದೆ. ಜನಸಂಖ್ಯೆ ಹಾಗೂ ಮತಗಟ್ಟೆಯ ಯಾವುದೇ ಮಾನದಂಡಗಳನ್ನು ಬಳಕೆ ಮಾಡದೇ ಬಿಜೆಪಿಗೆ ಅನುಕೂಲವಾಗುವ ರೀತಿ ಮರು ವಿಂಗಡನೆ ಮಾಡಲಾಗಿದೆ ಎಂದು ಮಾಜಿ ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ. 

ಇಲ್ಲಿ ಆಕ್ಷೇಪಣೆ ಸಲ್ಲಿಸಿ

ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಕರಡು ಅಧಿಸೂಚನೆಯ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವುದಕ್ಕೆ 15 ದಿನ ಕಾಲಾವಕಾಶ ನೀಡಿದೆ. ಸಾರ್ವಜನಿಕರು ವಿಧಾನಸೌಧದಲ್ಲಿ ಇರುವ ನಗರಾಭಿವೃದ್ಧಿ ಇಲಾಖೆಗೆ ಆಕ್ಷೇಪಣೆ ಸಲ್ಲಿಸಬಹುದು. ಇಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ.

ಇಂದು ಅಂತಿಮ ತೀರ್ಪು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕ್ಷೇತ್ರದ ವ್ಯಾಪ್ತಿಯನ್ನು 2011ರ ಜನಗಣತಿ ಪ್ರಕಾರ ಆಧಾರದ ಮೇಲೆ ವಾರ್ಡ್‌ಗಳನ್ನು ಪುನರ್‌ ವಿಂಗಡಿಸಿ ಹಲವು ಹಳೆ ಕ್ಷೇತ್ರಗಳನ್ನು ಮಾರ್ಪಾಡು ಮಾಡಿ ಹೊಸ ಕ್ಷೇತ್ರಗಳನ್ನಾಗಿ ರೂಪಿಸಿ ಗೆಜೆಟ್‌ ಹೊರಡಿಸಿದ ಪ್ರತಿಯನ್ನು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಬುಧವಾರ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಸದಸ್ಯರು ನಿಗದಿತ ಅವಧಿಗೆ ಚುನಾವಣೆ ನಡೆಸುವಂತೆ ಸೂಚನೆ ನೀಡುವಂತೆ ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಅಂತಿಮ ತೀಪು ಬುಧವಾರ ಹೊರ ಬೀಳಲಿದೆ.