ನಾಗಮಂಗಲ (ಡಿ.05):  ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ವಿಚಾರವಾಗಿ ಒಡಹುಟ್ಟಿದ ಅಕ್ಕನನ್ನೇ ತಮ್ಮ ನಡುರಸ್ತೆಯಲ್ಲೇ ಎಳೆದಾಡಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆದಿದೆ.

ಗೊಲ್ಲರಹಳ್ಳಿಗೆ ಸೊಸೆಯಾಗಿ ಬಂದಿರುವ ನಾನು ಚುನಾವಣೆಯಲ್ಲಿ ನನ್ನೂರಿನ ಅಭ್ಯರ್ಥಿಯನ್ನೇ ಬೆಂಬಲಿಸುವುದಾಗಿ ತಿಳಿಸಿದ ಅಕ್ಕನಿಗೆ ಸ್ವಂತ ತಮ್ಮನೇ ಹಲ್ಲೆ ಮಾಡಿದ್ದಾನೆ. ಸಂಘದ ಆಡಳಿತ ಮಂಡಳಿ 13 ಸ್ಥಾನಗಳ ಪೈಕಿ ಮೀಸಲಾತಿ ಸ್ಥಾನಗಳಿಗೆ ಅಭ್ಯರ್ಥಿಗಳಿಲ್ಲದ ಹಿನ್ನೆಲೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಬಂಕಾಪುರ ಗ್ರಾಮದ 6 ಮಂದಿ ಮತ್ತು ಗೊಲ್ಲರಹಳ್ಳಿ ಮೂವರು ಸೇರಿ ಒಟ್ಟು 9 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದರು. ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನಗಳಿಗೆ ಡಿ.2ರ ಬುಧವಾರ ಚುನಾವಣೆ ನಿಗಧಿಯಾಗಿತ್ತು.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ...

ಕಳೆದ ಐದು ವರ್ಷಗಳ ಕಾಲ ಬಂಕಾಪುರ ಗ್ರಾಮದವರು ಸಂಘದ ಅಧ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಗೊಲ್ಲರಹಳ್ಳಿ ಗ್ರಾಮಕ್ಕೆ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಬೇಕೆಂದು ಗ್ರಾಮದ ಮುಖ್ಯಸ್ಥರು ನಿರ್ಧರಿಸಿ ಅಧ್ಯಕ್ಷೆ ಸ್ಥಾನಕ್ಕೆ ಗೊಲ್ಲರಹಳ್ಳಿ ಗ್ರಾಮದ ನಾಗಮ್ಮ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಬಂಕಾಪುರದ ಲಕ್ಷ್ಮಮ್ಮರಿಂದ ನಾಮಪತ್ರ ಹಾಕಿಸಿದ್ದರು.

ಬಂಕಾಪುರ ಗ್ರಾಮದಿಂದ ಗೊಲ್ಲರಹಳ್ಳಿ ಗ್ರಾಮಕ್ಕೆ ಕಳೆದ 35 ವರ್ಷಗಳ ಹಿಂದೆ ಸೊಸೆಯಾಗಿ ಬಂದಿರುವ ಶಾರದಮ್ಮ ಸಹ ಸಂಘದ ನಿರ್ದೇಶಕರಾಗಿದ್ದು, ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಶಾರದಮ್ಮನ ತಮ್ಮ ಬಿ.ರಾಜೇಗೌಡರ ಗೊಲ್ಲರಹಳ್ಳಿ ಅಭ್ಯರ್ಥಿ ಸಂಘದ ಅಧ್ಯಕ್ಷೆಯಾಗುವುದಕ್ಕೆ ನೀನು ಬೆಂಬಲಿಸಬಾರದೆಂದು ಒತ್ತಾಯ ಪೂರ್ವಕವಾಗಿ ಮನವಿ ಮಾಡಿದ್ದಾನೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಾರದಮ್ಮ ನಾನು ಬಂಕಾಪುರದ ಹೆಣ್ಣುಮಗಳಾಗಿದ್ದರೂ ಸಹ ಮದುವೆಯಾಗಿ ಈ ಊರಿನ ಸೊಸೆಯಾಗಿ ಬಂದಿದ್ದೇನೆ. ಹಾಗಾಗಿ ಇದು ನನ್ನೂರು. ನನ್ನೂರಿನ ಅಭ್ಯರ್ಥಿಯನ್ನೇ ನಾನು ಬೆಂಬಲಿಸುತ್ತೇನೆ. ನನ್ನನ್ನು ತಡೆಯುವ ಅಧಿಕಾರ ನಿನಗಿಲ್ಲ ಎಂದು ತಮ್ಮನಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕುಪಿತಗೊಂಡ ಬಿ.ರಾಜೇಗೌಡ ಸ್ವಂತ ಅಕ್ಕನನ್ನು ನಡುರಸ್ತೆಯಲ್ಲಿ ಸ್ಥಳೀಯ ಸಾರ್ವಜನಕರೆದುರೇ ಎಳೆದಾಡಿ ಹಲ್ಲೆ ನಡೆಸಿದ್ದಾನೆ.

ಈ ವೇಳೆ ಮಧ್ಯೆ ಪ್ರವೇಶಿಸಿದ ಶಾರದಮ್ಮನ ಪುತ್ರ ಕುಮಾರ್‌ ಸೋದರಮಾವ ನಡೆಸುತ್ತಿದ್ದ ಹಲ್ಲೆಯಿಂದ ತಾಯಿಯನ್ನು ರಕ್ಷಿಸಿದ ಬಳಿಕ, ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿ ಗ್ರಾಮಕ್ಕೆ ಕರೆತಂದಿದ್ದು, ಮಹಿಳೆಯ ಮೇಲೆ ಹಲ್ಲೆ ನಡೆದಿದ್ದರೂ ಸಹ ಮಾನವೀಯತೆ ದೃಷ್ಟಿಯಿಂದ ಪೊಲೀಸ್‌ ಠಾಣೆಗೆ ದೂರು ನೀಡಲು ಶಾರದಮ್ಮ ಮುಂದಾಗಿಲ್ಲ.

ಚುನಾವಣೆ ವೇಳೆ ಬಂಕಾಪುರ ಗ್ರಾಮದ ನಾಲ್ಕು ಮಂದಿ ಮಹಿಳಾ ನಿರ್ದೇಶಕರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ತಡೆಯೊಡ್ಡಿದ್ದ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವ ಅವಕಾಶವಿದ್ದರೂ ಸಹ ಕೋರಂ ಅಭಾವದಿಂದ ಚುನಾವಣಾಧಿಕಾರಿ ಸುಜಾತ ಚುನಾವಣಾ ಪ್ರಕ್ರಿಯೆ ಮುಂದಿನ ಆದೇಶದವರೆಗೂ ಮುಂದೂಡಿದ್ದಾರೆ.

ಸಂಘದ ಅಧ್ಯಕ್ಷೆ, ಉಪಾಧ್ಯಕ್ಷೆ ಚುನಾವಣಾ ಪ್ರಕ್ರಿಯೆ ವೇಳೆ ನಡೆದ ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತ ಬಂಕಾಪುರ ಗ್ರಾಮದ ಮೂವರು ಹಾಗೂ ಗೊಲ್ಲರಹಳ್ಳಿ ಗ್ರಾಮದ ಒಬ್ಬ ನಿರ್ದೇಶಕಿ ಸೇರಿ ನಾಲ್ಕು ಮಂದಿ ತಮ್ಮ ನಿರ್ದೆಶಕರ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.