ಎನ್‌.ಲಕ್ಷ್ಮಣ್‌

ಬೆಂಗಳೂರು [ನ.02]: ಜನರ ಮೊಬೈಲ್‌ ಕಳವು ಮಾಡುತ್ತಿದ್ದ ಕಳ್ಳರು ಇದೀಗ ಪೊಲೀಸರ ‘ವಾಕಿಟಾಕಿಗೆ ಕೈ ಹಾಕಲು ಆರಂಭಿಸಿದ್ದಾರೆ!

ಹೌದು, ಹಿರಿಯ ಐಪಿಎಸ್‌ ಅಧಿಕಾರಿ ಅವರಿಗೆ ಸೇರಿದ ವೈರ್‌ಲೆಸ್‌ಅನ್ನು ಕಳ್ಳರು ಕದ್ದೊಯ್ದಿದ್ದು, ಈ ಸಂಬಂಧ ಭಾರತೀ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅಧಿಕಾರಿಯ ಸಿಬ್ಬಂದಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರಿನಲ್ಲಿನದ್ದ ವೈರ್‌ಲೆಸ್‌ ಕಳವು ಆಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಹೇಳಿದ್ದಾರೆ.

ಭಾರತೀನಗರ ನಿವಾಸಿ ಶೇಖ್‌ ಸಾದಿಕ್‌ ವಲಿ ಅವರು ಕೆಲ ವರ್ಷಗಳಿಂದ ಗೃಹ ರಕ್ಷಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆಯಲ್ಲಿನ ಐಪಿಎಸ್‌ ಅಧಿಕಾರಿಯೊಬ್ಬರ ಬಳಿ ಕಾರು ಚಾಲಕರಾಗಿದ್ದಾರೆ. ಐಪಿಎಸ್‌ ಅಧಿಕಾರಿಗೆ ಇಲಾಖೆ ವತಿಯಿಂದ ಸ್ವಿಫ್ಟ್‌ ಡಿಸೈರ್‌ ಕಾರು ನೀಡಲಾಗಿದ್ದು, ನ.27ರಂದು ಶೇಖ್‌ ಸಾದಿಕ್‌ ಅವರು ಅಧಿಕಾರಿಯನ್ನು ಅವರ ಮನೆಗೆ ಡ್ರಾಪ್‌ ಮಾಡಿದ್ದರು. ಊಟಕ್ಕೆಂದು ಮೂರು ಗಂಟೆ ಸುಮಾರಿಗೆ ಕಾರಿನ ಸಮೇತ ಭಾರತೀ ನಗರದಲ್ಲಿರುವ ಅಮ್‌ರ್‍ಸ್ಟ್ರಾಂಗ್‌ ರಸ್ತೆಯಲ್ಲಿರುವ ಮನೆಗೆ ಶೇಖ್‌ ಸಾದಿಕ್‌ ಬಂದಿದ್ದರು. ಮನೆಗೆ ಸಮೀಪದ ಡ್ರೈವಿಂಗ್‌ ಸ್ಕೂಲ್‌ವೊಂದರ ಕಟ್ಟಡದ ಕಾಂಪೌಂಡ್‌ವೊಂದರ ಬಳಿ ಕಾರು ನಿಲ್ಲಿಸಿ ತೆರಳಿದ್ದರು.

ಈ ವೇಳೆ ಕಳ್ಳರು ಕಾರಿನ ಮುಂಭಾಗದ ಎಡ ಭಾಗದಲ್ಲಿನ ಗಾಜು ಹೊಡೆದು, ಕಾರಿನಲ್ಲಿದ್ದ ವೈರ್‌ಲೆಸ್‌ ವಾಕಿಟಾಕಿ ಸೆಟ್‌ ಕದ್ದೊಯ್ದಿದ್ದಾರೆ.

ಊಟ ಮುಗಿಸಿಕೊಂಡು ಕಾರಿನ ಬಳಿ ಬಂದ ಶೇಖ್‌ ಕಾರು ಗಾಜು ಒಡೆದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಕಾರಿನ ಒಳಗೆ ಪರಿಶೀಲಿಸಿದಾಗ ವೈರ್‌ಲೆಸ್‌ ವಾಕಿಟಾಕಿ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಸುತ್ತಮುತ್ತಲಿನ ಸ್ಥಳದಲ್ಲಿ ಎಲ್ಲಾ ಕಡೆ ಹುಡುಕಿದರೂ ಎಲ್ಲಿಯೂ ವಾಕಿಟಾಕಿ ಪತ್ತೆಯಾಗಿಲ್ಲ. ದುಷ್ಕರ್ಮಿಗಳು ವಾಕಿಟಾಕಿಯನ್ನು ಕದ್ದೊಯ್ದಿರುವ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಪೊಲೀಸ್‌ ವಾಹನವೆಂದು ತಿಳಿದಿದ್ದರೂ ಕಳ್ಳರು ಕೃತ್ಯ ಎಸಗಿದ್ದಾರೆ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿರ್ಲಕ್ಷ್ಯ: ವೈರ್‌ಲೆಸ್‌ಅನ್ನು ಐಪಿಎಸ್‌ ಅಧಿಕಾರಿಗೆ ನೀಡಲಾಗಿರುತ್ತದೆ. ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಳಿ ವೈರ್‌ಲೆಸ್‌ ಇರುತ್ತದೆ. ಆ ಪಾಳಿಯಲ್ಲಿ ಐಪಿಎಸ್‌ ಅಧಿಕಾರಿ ಬಳಿ ಕೆಲಸಕ್ಕಿದ್ದ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಪ್ರಕರಣದಡಿ ಕ್ರಮ ಜರುಗಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಿಂದಿನ ಘಟನೆಗಳು

*2019ರ ಆ.16ರಂದು ರಾಜರಾಜೇಶ್ವರಿ ನಗರ ಪೊಲೀಸರು ಚನ್ನಸಂದ್ರದಲ್ಲಿರುವ ಲಾಡ್ಜ್‌ ಪರಿಶೀಲನೆಗೆಂದು ಹೋಗಿದ್ದರು. ಈ ವೇಳೆ ಕಿಡಿಗೇಡಿಗಳು ಪೊಲೀಸರ ‘ಚೀತಾ’ ವಾಹನ ಕದ್ದು, ಮದ್ದೂರು ಸಮೀಪ ಬಿಟ್ಟು ಹೋಗಿದ್ದರು.

*ಸೆ.23ರಂದು ಸಂಚಾರ ನಿಯಮ ಉಲ್ಲಂಘನೆಗೆ ಕೇಸ್‌ ಹಾಕಿದ್ದಕ್ಕೆ ಆರೋಪಿಯೊಬ್ಬ ಹೈಗ್ರೌಂಡ್ಸ್‌ ಠಾಣೆ ಕಾನ್‌ಸ್ಟೇಬಲ್‌ ಮುಸ್ತಾಫ್‌ ಅವರನ್ನು ಮನೆಯವರೆಗೂ ಹಿಂಬಾಲಿಸಿಕೊಂಡು ಹೋಗಿ ಬೈಕ್‌ನಲ್ಲಿಟ್ಟಿದ್ದ ಟ್ಯಾಬ್‌, ರೇನ್‌ಕೋಟ್‌ ಮತ್ತು ಮಾಸ್ಕ್‌ ಕದ್ದೊಯ್ದಿದ್ದ.

ಭಾರತೀನಗರ ಠಾಣಾ ವ್ಯಾಪ್ತಿಯಲ್ಲಿ ಕಾರಿನ ಗಾಜು ಹೊಡೆದು ಕಳ್ಳರು ವೈರ್‌ಲೆಸ್‌ ಕಳವು ಮಾಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಯಾವ ಅಧಿಕಾರಿಗೆ ಸೇರಿದ ವೈರ್‌ಲೆಸ್‌ ಎಂದು ಹೇಳಲು ಸಾಧ್ಯವಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

-ಡಾ.ಎಸ್‌.ಡಿ.ಶರಣಪ್ಪ, ಡಿಸಿಪಿ.