ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ, ಶುದ್ಧ ಕುಡಿಯುವ ನೀರು, ಶೌಚಾಲಯ, ಬಯಲು ವ್ಯಾಯಾಮ ಶಾಲೆಗೆ ಬೇಡಿಕೆ|ಸ್ಮಾರ್ಟ್‌ಸಿಟಿ ಯೋಜನೆಯಡಿ ಉದ್ಯಾನ ಅಭಿವೃದ್ಧಿಗೆ ಯೋಜನೆ| ಜನರೊಂದಿಗೆ ಅಧಿಕಾರಿಗಳ ಸಭೆಯಲ್ಲಿ ಸಲಹೆ|  

ಬೆಂಗಳೂರು(ಫೆ.03): ಸಾರ್ವಜನಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸಬೇಕು. ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು, ಶೌಚಾಲಯಗಳನ್ನು ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ಹತ್ತು ಹಲವಾರು ಬಗೆಯ ಬೇಡಿಕೆಗಳ ಮಹಾಪೂರವನ್ನು ಕಬ್ಬನ್‌ ಉದ್ಯಾನವನದ ನಡಿಗೆದಾರರು ಹರಿಸಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಕಬ್ಬನ್‌ ಉದ್ಯಾನವನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಬಿಎಂಪಿ, ತೋಟಗಾರಿಕೆ ಇಲಾಖೆ ಮತ್ತು ಸ್ಮಾರ್ಟ್‌ ಸಿಟಿ ಯೋಜನೆ ಅಧಿಕಾರಿಗಳ ಜೊತೆ ಭಾನುವಾರ ನಡೆದ ಸಭೆಯಲ್ಲಿ ಸಾರ್ವಜನಿಕರು ಹಲವು ಮನವಿ ಸಲ್ಲಿಸಿದರು.

ಉದ್ಯಾನದ ಕೆಲ ಭಾಗಗಳಲ್ಲಿ ಬಯಲು ವ್ಯಾಯಾಮ ಶಾಲೆಗಳನ್ನು ನಿರ್ಮಿಸಬೇಕು. ಈಗಾಗಲೇ ಬಿದಿರನ್ನು ತೆರವುಗೊಳಿಸಿರುವ ಭಾಗಗಳಲ್ಲಿ ಹೊಸದಾಗಿ ಬಿದಿರು ಸಸಿಗಳನ್ನು ನೆಡಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಬಿಬಿಎಂಪಿ ಮೇಯರ್‌ ಎಂ.ಗೌತಮ್‌ಕುಮಾರ್‌, ಮುನ್ನೂರು ಎಕರೆ ವಿಸ್ತೀರ್ಣವುಳ್ಳ ಕಬ್ಬನ್‌ ಉದ್ಯಾನವನ್ನು ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ 40 ಕೋಟಿ ವೆಚ್ಚದಲ್ಲಿ ಎರಡು ಹಂತಗಳಲ್ಲಿ ಅಭಿವೃದ್ಧಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಬ್ಬನ್‌ ಉದ್ಯಾನ ನಡಿಗೆದಾರು, ಸಾರ್ವಜನಿಕರು ಹಾಗೂ ವಾಯುವಿಹಾರಿಗಳ ಮತ್ತಷ್ಟು ಸಲಹೆಗಳನ್ನು ಪಡೆದು ಪರಿಹರಿಸುವುದಾಗಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಹಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಬ್ಬನ್‌ ಉದ್ಯಾನ ಅಭಿವೃದ್ಧಿಗೊಳಿಸಲು ವಿಸ್ತೃತ ಯೋಜನಾ ವರದಿ(ಡಿಪಿಆರ್‌) ತಯಾರಿಸಲಾಗಿದೆ. ಹಲವು ವಾಸ್ತುಶಿಲ್ಪಿಗಳ ಮೂಲಕ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಪಾದಚಾರಿ ಮಾರ್ಗ, ಸೈಕಲ್‌ ಟ್ರ್ಯಾಕ್‌, ಜಾಗಿಂಗ್‌ ಟ್ರ್ಯಾಕ್‌, ವಾಯುವಿಹಾರ ಪಥ, ನೀರು ಶುದ್ಧೀಕರಣ, ಅಂಗವಿಕಲರ ಸ್ನೇಹಿ ಉದ್ಯಾನ, ಹಿರಿಯರು ಹಾಗೂ ಮಕ್ಕಳಿಗಾಗಿ ಮೀಸಲಿರುವ ಪ್ರದೇಶ ಪುನರ್‌ ನವೀಕರಣಗೊಳಿಸುವುದು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಮುಂದಿನ ವರ್ಷ ಮಾಚ್‌ರ್‍ ಅಂತ್ಯದೊಳಗಾಗಿ ಮೊದಲನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಇದೇ ವೇಳೆ ಸ್ಮಾರ್ಟ್‌ ಸಿಟಿ ಅಡಿ ಕೈಗೆತ್ತಿಕೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಸಂಸದ ಪಿ.ಸಿ.ಮೋಹನ್‌, ಶಾಸಕ ರಿಜ್ವಾನ್‌ ಅರ್ಷದ್‌, ಸ್ಥಳೀಯ ಪಾಲಿಕೆ ಸದಸ್ಯ ವಸಂತಕುಮಾರ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌, ಉಪ ನಿರ್ದೇಶಕಿ ಜಿ.ಕುಸುಮಾ ಮತ್ತಿತರರಿದ್ದರು.

ಮೊದಲನೇ ಹಂತದ ಕಾಮಗಾರಿಗಳು

20 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ ಪಥ ಪುನರ್‌ ನವೀಕರಣ, ವಾಯುವಿಹಾರ ಪಥ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ನೀರು ಶುದ್ಧೀಕರಣ ಘಟಕ ಸ್ಥಾಪನೆ, ಸೈಕಲ್‌ ಟ್ರ್ಯಾಕ್‌, ಜಾಗಿಂಗ್‌ ಟ್ರ್ಯಾಕ್‌, ಕಮಲದ ಕೊಳ ಅಭಿವೃದ್ಧಿ, ಕಮಲದ ಕೊಳದ ಸುತ್ತಲು ಸಂಚಾರಿ ಮಾರ್ಗ, ನಾಲೆ ಮತ್ತು ಸೇತುವೆಗಳ ಅಭಿವೃದ್ಧಿ.

2ನೇ ಹಂತದ ಅಭಿವೃದ್ಧಿ ಕೆಲಸಗಳು

ಕರಗದ ಕುಂಟೆ ಅಭಿವೃದ್ಧಿ, ಜೌಗು ಪ್ರದೇಶದ ಅಭಿವೃದ್ಧಿ, ಕಾರಂಜಿ ನಿರ್ಮಾಣ, ಆಸನಗಳ ವ್ಯವಸ್ಥೆ, ಕಲ್ಯಾಣಿ ಅಭಿವೃದ್ಧಿ, ಕಾಲುವೆಗಳ ಅಭಿವೃದ್ಧಿ, ಸಸಿಗಳನ್ನು ನೆಡುವುದು, ಅಂಗವಿಕಲರಿಗಾಗಿ ಸಂವೇದನಾ ಅಂಗಗಳ ಅಭಿವೃದ್ಧಿ, ಆಯುರ್ವೇದ ಉದ್ಯಾನ ನಿರ್ಮಾಣ, ಹಿರಿಯ ನಾಗರಿಕರು ಹಾಗೂ ಮಕ್ಕಳಿಗಾಗಿ ಮೀಸಲಿಟ್ಟಿರುವ ಸ್ಥಳ ಪುನರ್‌ ನವೀಕರಣ, ಯೋಗಾಭ್ಯಾಸ ಪ್ರದೇಶ ಅಭಿವೃದ್ಧಿ, ಕಬ್ಬನ್‌ ಉದ್ಯಾನ ಇತಿಹಾಸ ಹಾಗೂ ಸಮರ್ಪಕ ಮಾಹಿತಿಗಳ ಫಲಕ ಅಳವಡಿಕೆ, ಬಯೋಗ್ಯಾಸ್‌ ಪ್ಲಾಂಟ್‌ ಸ್ಥಾಪನೆ, ಸೈಕಲ್‌ ನಿಲ್ದಾಣ, ಪಾರಿವಾಳಗಳ ಆಹಾರ ವಿತರಿಸುವ ಸ್ಥಳ ಅಭಿವೃದ್ಧಿ, ತಂತಿ ಬೇಲಿ ಹಾಗೂ ದ್ವಾರಗಳ ಅಳವಡಿಕೆ, ಹಿರಿಯರಿಗಾಗಿ ಪ್ರತ್ಯೇಕ ಆಸನಗಳ ವ್ಯವಸ್ಥೆ, ಬಿದಿರಿನಿಂದ ಹಲವು ವಿನ್ಯಾಸ ತಯಾರಿಕೆ, ಕಸದ ಡಬ್ಬಿಗಳ ಅಳವಡಿಕೆ ಮಾಡಲಾಗುತ್ತದೆ. ಇದಕ್ಕಾಗಿ 2ನೇ ಹಂತ 20 ಕೋಟಿ ವ್ಯಯಿಸಲಾಗುತ್ತದೆ.