ರಾಮಮೂರ್ತಿ ನವಲಿ 

ಗಂಗಾವತಿ(ಫೆ.17): ತಾಲೂಕಿನ ವಿರೂಪಾಪುರ ಗಡ್ಡೆಯಲ್ಲಿ ಇರುವ ರೆಸಾರ್ಟ್ ಮಾಲೀಕರು ಗಂಟುಮೂಟೆ ಕಟ್ಟಿಕೊಂಡು ಹೊರಟಿದ್ದಾರೆ. ವಿರೂಪಾಪುರ ಗಡ್ಡೆಯಲ್ಲಿರುವ ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಂಗಳೂರು ಹೈಕೋರ್ಟ್ 10 ದಿನ ತಡೆಯಾಜ್ಞೆ ನೀಡಿತ್ತು. ಆದರೆ ಜಿಲ್ಲಾಡಳಿತ ತಡೆಯಾಜ್ಞೆ ತೆರವುಗೊಳಿಸುವುದಕ್ಕೆ ಎಲ್ಲ ಏರ್ಪಾಡು ಮಾಡಿಕೊಂಡಿದ್ದರಿಂದ ಈಗ ರೆಸಾರ್ಟ್ ಮಾಲೀಕರು ಗಂಟುಮೂಟೆ ಕಟ್ಟಿಕೊಂಡು ಹೊರಟಿದ್ದಾರೆ. 

100ಕ್ಕೂ ಹೆಚ್ಚು ರೆಸಾರ್ಟ್‌ಗಳಿದ್ದರೂ ಪ್ರಭಾವಿ ರೆಸಾರ್ಟ್‌ಗಳ ಮಾಲೀಕರು ಕೋಟ್ಯಂತರ ರು. ವೆಚ್ಚ ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದರು. ಈಗ ಕೋರ್ಟ್ ಆದೇಶ ನೀಡಿದ್ದರಿಂದ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಿದ ಆಸ್ತಿ ನೆಲ ಸಮವಾಗುವ ಚಿಂತೆಯಲ್ಲಿದ್ದಾರೆ. ವರ್ಷದ ನಾಲ್ಕು ತಿಂಗಳ ಮಾತ್ರ ರೆಸಾರ್ಟ್ ವ್ಯವಹಾರ ಮಾಡುತ್ತಿರುವ ಮಾಲೀಕರು ವಿದೇಶಿ ಪ್ರವಾಸಿಗಳಿಗೆ ದುಬಾರಿ ಬೆಲೆಯಲ್ಲಿ ಉಪಾಹಾರ, ಊಟ, ವಾಹನ ಸೌಕರ್ಯ, ಇಂಟರ್‌ನೆಟ್ ಸಂಪರ್ಕ ನೀಡಿ ಹಣ ವಸೂಲಿ ಮಾಡುತ್ತಿದ್ದರೆಂಬ ದೂರು ಇತ್ತು. ಅಲ್ಲದೇ ಗಾಂಜಾ, ಅಫೀಮು, ಮದ್ಯ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗೆ ಕುಮ್ಮಕ್ಕು ನೀಡಿ ಹಣ ಕಬಳಿಸುತ್ತಿರುವದಲ್ಲದೇ ಕೊಠಡಿಗಳಿಗೆ 3 ರಿಂದ 4 ಸಾವಿರ ನಿಗದಿ ಪಡಿಸಿದ್ದರು. ಇದರಿಂದಾಗಿ ಕೇವಲ 4 ತಿಂಗಳಲ್ಲಿ ಸಾಕಷ್ಟು ಹಣ ಬಾಚಿಕೊಳ್ಳುವ ವ್ಯವಹಾರ ನಡೆದಿತ್ತು. 

ಕೊಪ್ಪಳ: ವಿರೂಪಾಪುರಗಡ್ಡೆ ರೆಸಾರ್ಟ್‌ ತೆರವಿಗೆ ಹೈಕೋರ್ಟ್‌ ತಡೆ

ಕಲುಷಿತಗೊಂಡಿದ್ದ ವಿರೂಪಾಪುರಗಡ್ಡೆ ಆನೆಗೊಂದಿ ಸನಿಹದಲ್ಲಿದ್ದ ವಿರೂಪಾಪುರಗಡ್ಡೆ ಸಂಪೂರ್ಣವಾಗಿ ಕಲುಷಿತಗೊಂಡಿತ್ತು. ಪ್ರವಾಸಿರು ಹಂಪಿಗೆ ತೆರಳಬೇಕಾದರೆ ವಿರೂಪಾಪುರಗಡ್ಡೆ ಮಾರ್ಗದಿಂದ ತೆರಳಬೇಕಾಗುತ್ತಿತ್ತು. ಮಾರ್ಗ ಮದ್ಯದಲ್ಲಿ ಗಾಂಜಾ, ಮದ್ಯಪಾನ ಅಲ್ಲದೇ ಕಾನೂನು ಬಾಹಿರಚಟುವಟಿಕೆಗಳಿಂದ ಪ್ರವಾಸಿಗರು ರೋಸಿ ಹೋಗಿದ್ದರು. ಈಗ ರೆಸಾರ್ಟ್‌ಗಳನ್ನು ತೆರವುಗೊಳಿಸುತ್ತಿರುವುದರಿಂದ ಉತ್ತರ ಭಾರತದ ಪ್ರವಾಸಿಗರು ಸ್ವಾಗತಿಸಿದ್ದಾರೆ. 
ವಿರೂಪಾಪುರಗಡ್ಡೆ ಸನಿಹದಲ್ಲಿರುವ ಅಂಜನಾದ್ರಿ ಪರ್ವತ, ಪಂಪಾಸರೋವರ, ಅಚ್ಯುತಾಶ್ರಮ, ಋುಷಿಮುಖ ಪರ್ವತ ಹಾಗೂ ಪವಿತ್ರ ತುಂಗಭದ್ರಾ ನದಿ ಹರಿಯುತ್ತಿತ್ತು. ಈ ಪ್ರದೇಶಕ್ಕೆ ಬರುವ ಭಕ್ತರು ವಿರೂಪಾಪುರಗಡ್ಡೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. 

ಜಿಲ್ಲಾಡಳಿತ ಕೆಂಗಣ್ಣಿಗೆ ಬಿದ್ದಿದ್ದ ವಿರೂಪಾಪುರಗಡ್ಡೆಯ ರೆಸಾರ್ಟ್‌ಗಳನ್ನು ಯಾವ ಸಮಯದಲ್ಲಾದರೂ ತೆರವುಗೊಳಿಸಬಹುದೆಂಬ ಕಾರಣಕ್ಕೆ ಮಾಲೀಕರು ಸ್ವಂಯಪ್ರೇರಿತರಾಗಿ ತೆರವುಗೊಳಿಸಿಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೆರವಿಗೆ ಆದೇಶ ನೀಡಿದ್ದರೂ ಮಾಲೀಕರು ಸುಪ್ರಿಂ ಆದೇಶ ಪ್ರಶ್ನಿಸಿ ತಡೆಯಾಜ್ಞೆ ತಂದಿದ್ದಕ್ಕೆ ಜಿಲ್ಲಾಡಳಿತ ರೆಸಾರ್ಟ್ ಮಾಲೀಕರ ಮೇಲೆ ನಿಗಾವಹಿಸಿದೆ. 

ಅಕ್ರಮ ಕಟ್ಟಡಗಳು, ಕಾನೂನುಬಾಹಿರ ಚಟುವಟಿಕೆ ಮತ್ತು ವಿದೇಶಿ ಪ್ರವಾಸಿಗರಿಂದ ಮನ ಬಂದಂತೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಜಿಲ್ಲಾಡಳಿತ ಹೇಗಾದರೂ ಮಾಡಿ ತೆರವುಗೊಳಿಸಲು ನಿರ್ಧಾರ ಕೈಗೊಂಡಿತ್ತು. 22 ಜನರ ವಿರುದ್ಧ ಪ್ರಕರಣ 6 ತಿಂಗಳ ಹಿಂದೆ ತುಂಗಭದ್ರಾ ನದಿ ಪ್ರವಾಹ ಬಂದಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತ 500 ಪ್ರವಾಸಿಗರನ್ನು ರಕ್ಷಣೆ ಮಾಡಿತ್ತು. ಇದಕ್ಕೆ ಹೊಣೆಯಾಗಿದ್ದ ಮಾಲೀಕರ ವಿರುದ್ಧ ದೂರು ದಾಖಲಿಸಿತ್ತು. 

ಹಂಪಿ ಮತ್ತು ಆನೆಗೊಂದಿ ಪವಿತ್ರ ಕ್ಷೇತ್ರವಾಗಿದೆ. ಈ ಪ್ರದೇಶಕ್ಕೆ ಅಂಟಿಕೊಂಡಿರುವ ವಿರೂಪಾಪುರಗಡ್ಡೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರಿಂದ ಪವಿತ್ರ ಕ್ಷೇತ್ರ ಕಲುಷಿತಗೊಂಡಿತ್ತು. ಈಗ ನ್ಯಾಯಾಲಯ ರೆಸಾರ್ಟ್‌ಗಳನ್ನು ತೆರವುಗೊಳಿಸುವುದಕ್ಕೆ ಸೂಚನೆ ನೀಡಿದ್ದರಿಂದ ಪವಿತ್ರ ಕ್ಷೇತ್ರ ಪ್ರಗತಿಗೆ ಪೂರಕವಾಗಲಿದೆ ಎಂದು ಉತ್ತರ ಭಾರತದ ಭಕ್ತ ಮಹೇಶ್ವರ್ ಹೇಳಿದ್ದಾರೆ.