ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದೆ. ರಾಜ್ಯದಲ್ಲಿ ಕೇವಲ 42 ಪುಸ್ತಕ ಮಾರಾಟ ಮಳಿಗೆಗಳಿವೆ. ಕೋಲಾರದಂತಹ ಜಿಲ್ಲೆಗಳಲ್ಲಿ ಒಂದೂ ಪುಸ್ತಕ ಮಳಿಗೆಗಳಿಲ್ಲ. ಆದರೆ, ರಾಜ್ಯದಲ್ಲಿ 24 ಸಾವಿರ ಮದ್ಯ ಮಾರಾಟ ಮಳಿಗೆಗಳಿವೆ. ಸರ್ಕಾರಕ್ಕೆ ಪುಸ್ತಕ ರಂಗದಿಂದ ಯಾವುದೇ ಆದಾಯ ಬರುವುದಿಲ್ಲ. ಮದ್ಯ ಮಾರಾಟದಿಂದ ಸರ್ಕಾರಕ್ಕೆ ಆದಾಯ ಬರುತ್ತದೆ: ವಿಶ್ವೇಶ್ವರ ಭಟ್ 

ಬೆಂಗಳೂರು(ಜು.22):  ಹಿರಿಯ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರ ಸಂಪಾದಕ ಸದ್ಯಶೋಧನೆ ಮೂರು ಕೃತಿಗಳು, ರೂಪಾ ಗುರುರಾಜ್ ಅವರ ಒಂದೊಳ್ಳೆ ಮಾತು, ಕಿರಣ್ ಉಪಾಧ್ಯಾಯ ಅವರ ಹೊರ ದೇಶವಾಸಿ, ಶಿಶಿರ್ ಹೆಗಡೆ ಅವರ ಶಿಶಿರ ಕಾಲ ಕೃತಿಗಳನ್ನು ಇಂದು(ಶನಿವಾರ) ಲೋಕಾರ್ಪಣೆ ಮಾಡಲಾಯಿತು.

ಇಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ವಿಶ್ವವಾಣಿ ಪುಸ್ತಕ ಪ್ರಕಾಶನ ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಿತ್ತು.‌ ಶಾಸಕ ಪ್ರದೀಪ್ ಈಶ್ವರ್, ಕನ್ನಡಪ್ರಭ- ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಏಷಿಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್, ಹಿರಿಯ ಪತ್ರಕರ್ತರಾದ ಗಿರೀಶ್ ರಾವ್ ಹತ್ತಾವರ್, ಹರಿಪ್ರಕಾಶ್ ಕೋಣೆಮನೆ, ಕೆ.ಎನ್. ಚನ್ನೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಉದ್ಯಮಿಗಳಾದ ಸದಾನಂದ ಮಯ್ಯಾ, ಷಡಕ್ಷರಿ ಮೊದಲಾದವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

Shivamogga Karnataka Sangha ಕರ್ನಾಟಕ ಸಂಘದಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ

ಹಿರಿಯ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಮಾತನಾಡಿ, ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದೆ. ರಾಜ್ಯದಲ್ಲಿ ಕೇವಲ 42 ಪುಸ್ತಕ ಮಾರಾಟ ಮಳಿಗೆಗಳಿವೆ. ಕೋಲಾರದಂತಹ ಜಿಲ್ಲೆಗಳಲ್ಲಿ ಒಂದೂ ಪುಸ್ತಕ ಮಳಿಗೆಗಳಿಲ್ಲ. ಆದರೆ, ರಾಜ್ಯದಲ್ಲಿ 24 ಸಾವಿರ ಮದ್ಯ ಮಾರಾಟ ಮಳಿಗೆಗಳಿವೆ. ಸರ್ಕಾರಕ್ಕೆ ಪುಸ್ತಕ ರಂಗದಿಂದ ಯಾವುದೇ ಆದಾಯ ಬರುವುದಿಲ್ಲ. ಮದ್ಯ ಮಾರಾಟದಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮದ್ಯ ಮಾರಾಟ ಮಳಿಗೆಗಳೇ ಸರ್ಕಾರವನ್ನು ನಡೆಸುತ್ತಿವೆ ಎಂಬ ಅನುಮಾನ ಕಾಡುತ್ತಿದೆ. ಪುಸ್ತಕೋದ್ಯಮ ಬೆಳವಣಿಗೆಗೆ ರಾಜ್ಯ ಸರ್ಕಾರದ ನೆರವು ಅತ್ಯಗತ್ಯ ಎಂದು ತಿಳಿಸಿದರು.

ಇನ್ನು ಪುಸ್ತಕ ಬಿಡುಗಡೆ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರತಿಯೊಬ್ಬ ಪತ್ರಕರ್ತನೂ ರಾಜಕಾರಣಿ ಜತೆಗೆ ಒಡನಾಟ ಹೊಂದಿರಬೇಕು. ಆಗ ಮಾತ್ರ ರಾಜಕೀಯ ವಿದ್ಯಮಾನಗಳ ಬಗ್ಗೆ ನಿಖರ ಮಾಹಿತಿಯನ್ನು ಪಡೆದುಕೊಂಡು ವರದಿ ಮಾಡಬಹುದು. ರಾಜಕಾರಣವು ಪತ್ರಿಕೆ ಹಾಗೂ ಪತ್ರಕರ್ತರಿಲ್ಲದೆ ಇರಲು ಸಾಧ್ಯವಿಲ್ಲ. ಅದೇ ರೀತಿ ರಾಜಕಾರಣಿಗಳಿಲ್ಲದಿದ್ದರೆ ಪತ್ರಕರ್ತರು ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಇಬ್ಬರ ನಡುವೆ ಅವಿನಾಭಾವ ಸಂಬಂಧವಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಹಿಂದಿನಿಂದಲೂ ಸಂಕಷ್ಟದಲ್ಲಿದೆ. ಓದುಗರು ಪುಸ್ತಕ ಕೊಂಡು ಅದಕ್ಕೆ ನೀಡುವ ಹಣ ಸಾಹಿತಿಗಳಿಗೆ ಸರಿಯಾಗಿ ತಲುಪುವವರೆಗೆ ಕನ್ನಡ ಸಾಹಿತ್ಯದ ಸಮಸ್ಯೆ ನೀಗುವುದಿಲ್ಲ. ಸಮಾಜ ಮತ್ತು ಸರ್ಕಾರ ಸಾಹಿತ್ಯವನ್ನು ಬೆಂಬಲಿಸಬೇಕು. ಆಗ ಮಾತ್ರ ಉತ್ತಮ ಸಾಹಿತ್ಯ ಹೊರಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ರಾಜಕಾರಣಿಗಳಿಗೆ ಅವರ ಪತ್ನಿ ಮತ್ತು ಮಕ್ಕಳೇ ಮೊದಲ ವಿರೋಧಿಗಳು. ರಾಜಕಾರಣ ಮಾಡುತ್ತಾ ಕುಟುಂಬದವರಿಗೆ ಸಮಯವನ್ನೇ ನೀಡುವುದಿಲ್ಲ. ಹೀಗಾಗಿ ಅವರು ನಮ್ಮ ಮೇಲೆ ಕೋಪ ವ್ಯಕ್ತಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣ ಬಹಳ ಕಷ್ಟದ ಕೆಲಸ ಎಂಬಂತಾಗಿದೆ. ಆದರೂ, ನಾವೆಲ್ಲ ರಾಜಕಾರಣದಲ್ಲಿಯೇ ಮುಂದುವರಿಯಬೇಕಿದೆ ಎಂದರು.