ದೇವರು ಕೊಟ್ಟಿದ್ದನ್ನು ಮರಳಿ ಸಮರ್ಪಿಸುವುದೇ ಸಾರ್ಥಕ್ಯ: ಪೇಜಾವರ ಶ್ರೀ
ದೇವರು ಕೊಟ್ಟಿದ್ದನ್ನು ನಾವು ಅನುಭವಿಸುತ್ತೇವೆ ಎನ್ನುವ ಅರ್ಪಣೆ, ಕೃತಜ್ಞತಾ ಮನೋಭಾವ ನಮಗಿದ್ದರೆ ಅದೇ ದೇವರ ಪೂಜೆಯಾಗುತ್ತದೆ: ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
ಉಡುಪಿ(ನ.16): ಬರಿಗೈಯಲ್ಲಿ ಈ ಭೂಮಿಗೆ ಬಂದಿರುವ ನಾವು ಭಗವಂತ ಕೊಟ್ಟಿದ್ದನ್ನು ಮರಳಿ ಸಮರ್ಪಿಸುವುದರಲ್ಲಿ ಬದುಕಿನ ಸಾರ್ಥಕ್ಯವಿದೆ. ದೇವರು ಕೊಟ್ಟಿದ್ದನ್ನು ನಾವು ಅನುಭವಿಸುತ್ತೇವೆ ಎನ್ನುವ ಅರ್ಪಣೆ, ಕೃತಜ್ಞತಾ ಮನೋಭಾವ ನಮಗಿದ್ದರೆ ಅದೇ ದೇವರ ಪೂಜೆಯಾಗುತ್ತದೆ ಎಂದು ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ವಿಶ್ವಸ್ತ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.
ಕಾಪು ತಾಲೂಕಿನ ಪೆರ್ಣಂಕಿಲ ಗ್ರಾಮದ ಶ್ರೀ ಮಹಾಗಪತಿ - ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಕಚೇರಿ ಉದ್ಘಾಟಿಸಿ, ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ದ.ಕ. ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ತಮ್ಮ ತಾಯಿಯ ನೆನಪಿನಲ್ಲಿ ದೇವಳದ ಜೀರ್ಣೋದ್ಧಾರಕ್ಕೆ 5 ಲಕ್ಷ ರು. ದೇಣಿಗೆ ಘೋಷಿಸಿದರು.
ಕಾಂತಾರ ಸಿನಿಮಾಗೆ ಐವತ್ತು ದಿನದ ಸಂಭ್ರಮ: ಕಡಲ ತೀರದಲ್ಲಿ ಅರಳಿದ ಪಂಜುರ್ಲಿ ಕಲಾಕೃತಿ
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ ಮಾತನಾಡಿ, ದೇವಳದ ಜೀರ್ಣೋದ್ಧಾರದ ಮೂರ್ನಾಲ್ಕು ದಶಕಗಳ ಕನಸು ಈಗ ಈಡೇರುತ್ತಿದೆ. ಪೇಜಾವರ ಮಠ ನೀಡಿರುವ 1.50 ಕೋಟಿ ರು.ಗಳನ್ನು ಠೇವಣಿಯಾಗಿರಿಸಿ, ಭಕ್ತರಿಂದ ಸಹಾಯ ಹಸ್ತ ನಿರೀಕ್ಷಿಸಲಾಗಿದೆ. ಗ್ರಾಮಸ್ಥರ ಕರಸೇವೆದಿಂದ ದೇವಳದ ತಳಪಾಯ ನಿರ್ಮಾಣವಾಗಲಿದೆ ಎಂದರು. ಕಾಪು ಶಾಸಕ ಲಾಲಾಜಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್, ಮಠದ ದಿವಾಣ ಸುಬ್ರಹ್ಮಣ್ಯ ಭಟ್ ಮತ್ತಿತರರು ಇದ್ದರು.