ಹುಬ್ಬಳ್ಳಿ(ಡಿ. 02): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿರುತ್ತದೆ ಎಂದು ಗೌರಿಗದ್ದೆಯ ಅವಧೂತ ವಿನಯ್‌ ಗುರೂಜಿ ಭವಿಷ್ಯ ನುಡಿದರು.

ಮಂಗಳವಾರ ನಗರದ ಶ್ರೀ ಸಿದ್ಧಾರೂಢ ಮಠ ಹಾಗೂ ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ಅವರ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮೇಲೆ ದೇವರ ಆಶೀರ್ವಾದವಿದೆ. ನಾನು ಭವಿಷ್ಯವನ್ನು ನಂಬುವುದಿಲ್ಲ. ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೇಳುತ್ತೇನೆ ಎಂದರು.

ವಿನಯ್‌ ಗುರೂಜಿ ಎಂಜಲು ಪ್ರಸಾದ ಟೀಕೆ : ಶರವಣ ಆಕ್ಷೇಪ

ಆರೋಗ್ಯಪೂರ್ಣ ಸಮಾಜಕ್ಕೆ ಶ್ರೀ ಸಿದ್ಧಾರೂಢರ ಆದರ್ಶ, ಚಿಂತನೆಗಳು ದಾರಿದೀಪವಾಗಿವೆ. ಸಿದ್ಧಾರೂಢರು ಶ್ರೇಷ್ಠ ಸಾಧಕರು, ಭೂತ, ವರ್ತಮಾನ, ಭವಿಷ್ಯ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಆಶಿಸುವ ಸಂತ ಶ್ರೇಷ್ಠರು ಎಂದರು.
ನನಗೂ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದೆ. ಉತ್ತರ ಕರ್ನಾಟಕದ ಜನತೆ ಶ್ರೇಷ್ಠ ಸಾಧು- ಸಂತರುಗಳ ತತ್ವಾದರ್ಶಗಳ ಬಗ್ಗೆ ನಂಬಿಕೆ ಇಟ್ಟು ಜೀವಿಸುವವರು ಮಾತ್ರವಲ್ಲದೆ, ಉತ್ತರ ಕರ್ನಾಟಕ ಗುರು ಭಕ್ತಿಗೆ ಫೇಮಸ್‌. ಯಾರಿಗಾದರೂ ಜ್ಞಾನ ಬೇಕು ಅಂದರೆ ಉತ್ತರ ಕರ್ನಾಟಕ ಸುತ್ತಿದ್ದರೆ ಸಾಕು. ಉತ್ತರ ಕರ್ನಾಟಕ ಜಗತ್ತಿಗೆ ಪಾಠ ಮಾಡುತ್ತದೆ. ಪ್ರತಿ ಮನೆಯಲ್ಲಿಯೂ ಭಾವನಾತ್ಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ನಾನು ಶರಣು ಶರಣಾರ್ಥಿ. ಪ್ರಸ್ತುತ ಕಾಲಘಟ್ಟದಲ್ಲಿ ವ್ಯಾಪಾರೀಕರಣವಿದೆ. ಇಂತಹ ಸಂದರ್ಭದಲ್ಲಿಯೂ ಹೃದಯ ಶ್ರೀಮಂತಿಕೆ ವ್ಯಕ್ತವಾಗುತ್ತದೆ ಎಂದರು. ಮನುಷ್ಯನಿಗೆ ಹಣದಿಂದ ತೋರುವ ಪ್ರೀತಿ ಯಾವ ಲೆಕ್ಕವೂ ಇಲ್ಲ. ಮನುಷ್ಯತ್ವ ಕಲಿಯಬೇಕು. ಸಮಾಜದಲ್ಲಿ ಒಗ್ಗಟ್ಟು ಕಲಿಯಬೇಕಾದರೆ ಉತ್ತರ ಕರ್ನಾಟಕ ಸುತ್ತಿದ್ದರೆ ಸಾಕು ಎಂದರು.