ಕಾರಟಗಿ(ಮಾ.29): ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗೇದಾಳ ಗ್ರಾಮದಲ್ಲಿ ಕಳೆದ ವಾರದಿಂದ ಕೋತಿಯೊಂದು ಗ್ರಾಮಸ್ಥರ ಮೇಲೆ ದಾಳಿ ಮಾಡಿ ಕಚ್ಚುತ್ತಿದ್ದರಿಂದ ಕೋತಿ ಕಾಟಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಹಳ್ಳದ ದಂಡೆ ಬಟ್ಟೆತೊಳೆಯಲು ಹೋಗುವ ಮಹಿಳೆಯರು ಮೇಲೆ, ಕೃಷಿ ಕೆಲಸ, ಹೊಲದಲ್ಲಿ ಕಳೆ ತೆಗೆಯಲು ಹೋಗುವ ಗುಂಪಿನ ಮೇಲೆ ಏಕಾಏಕಿ ಎಲ್ಲಿಂದಲೋ ಬರುವ ಕೋತಿ ದಾಳಿ ಮಾಡುತ್ತಿದ್ದರಿಂದ ಕೋತಿ ಕಾಟಕ್ಕೆ ಇಡೀ ಗ್ರಾಮ ಬೆಚ್ಚಿ ಬಿದ್ದಿದೆ.

ಕೋತಿ ಕಾಟ ದಿನದಿಂದ ದಿನಕ್ಕೆ ಮೀತಿ ಮೀರಿದ್ದರಿಂದ ಈಗ ಮಹಿಳೆಯರು ಮತ್ತು ಮಕ್ಕಳು ಮನೆ ಬಿಟ್ಟು ಹೊರ ಬರಲು ತೀರಾ ಹಿಂದೇಟು ಹಾಕುತ್ತಿದ್ದು, ಕೃಷಿ ಕೆಲಸಗಳಿಗೆ ಮಹಿಳೆಯರು ಹೋಗಲು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಈ ಕೋತಿ ಸುಮಾರು ಜನರಿಗೆ ಕಚ್ಚಿದ್ದು, ಕೃಷಿ ಕೆಲಸಕ್ಕೆ ತೆರಳುತ್ತಿದ್ದ ಗ್ರಾಮದ ಖಾದರ್‌ಪಾಶಾ ಎನ್ನುವವರ ಮೇಲೆ ಭಾನುವಾರ ಬೆಳಗ್ಗೆ ಹಳ್ಳದ ದಂಡೆಯ ಬಳಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಬೋಗಾಪುರ ದೊಡ್ಡಪ್ಪ, ಲಕ್ಷ್ಯಪ್ಪ, ದುರುಗಪ್ಪ ನಾಯಕ ಸೇರಿದಂತೆ ಇನ್ನಿತರು ಕೋತಿ ದಾಳಿಗೊಳಗಾದವರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅರ್ಧ ಕಿಮೀ ಸಂಚರಿಸುವವರೂ ಟೋಲ್‌ ಕಟ್ಟಬೇಕು..!

ಭಾನುವಾರ ಬೆಳಗ್ಗೆ ಗ್ರಾಮದ ಯುವಕರ ತಂಡವೊಂದು ಕೋತಿ ಹಿಡಿಯಲು ತೀವ್ರ ಪ್ರಯತ್ನ ಪಟ್ಟು ವಿಫಲವಾಯಿತು. ಸಂಜೆ ಗ್ರಾಮದ ದರ್ಗಾದ ಬಳಿ ಕೋತಿ ಕಾಣಿಸಿಕೊಂಡು ದರ್ಗಾಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕೋತಿ ಕಾಟ ತಪ್ಪಿಸುವಂತೆ ಗ್ರಾಮದ ಯುವಕರು ಹುಳ್ಕಿಹಾಳ ಪಂಚಾಯಿತಿ ಗಮನಕ್ಕೆ ತಂದ ಹಿನ್ನೆಲೆ ಪಿಡಿಒ ಗಂಗಾವತಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕೋತಿ ಕಾಟ ತಪ್ಪಿಸುವಂತೆ ಅರಣ್ಯ ಇಲಾಖೆ ಆರ್‌ಎಫ್‌ಒ ಶಿವರಾಜ್‌ ಮೇಟಿ ಎಂಬವರಿಗೆ ವಿಷಯ ತಿಳಿಸಿದರೆ ಇದು ನಮ್ಮ ಕೆಲಸವಲ್ಲ ಎಂದು ಸಬೂಬು ಹೇಳಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗಿಡ ನೆಡುವುದು ಮಾತ್ರ ನಮ್ಮ ಕೆಲಸ, ಕೋತಿ ಹಿಡಿಯುವುದಲ್ಲ. ಬೇಕಾದರೆ ಗ್ರಾಮಸ್ಥರು ಸೇರಿ ಹಣ ಕೊಟ್ಟರೆ ಹೊಸಪೇಟೆಯಿಂದ ಕೋತಿ ಹಿಡಿಯುವವರನ್ನು ಕಳಿಸುವುದಾಗಿ ಅರಣ್ಯಾಧಿಕಾರಿ ಮೇಟಿ ತಿಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಣ್ಯ ಅಧಿಕಾರಿಗಳು ಹಿಂಗೆಂದರೆ ಹೇಗೆ ಎಂದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಪಂಚಾಯಿತಿ ಮತ್ತು ಅರಣ್ಯ ಇಲಾಖೆಯವರು ಬೇಜವಾಬ್ದಾರಿ ತೋರಿದ್ದರಿಂದ ಗ್ರಾಮಸ್ಥರೆ ಖುದ್ದಾಗಿ ಕಲ್ಲು, ಬಡಿಗೆ ಹಿಡಿದು ಗ್ರಾಮದ ಹಳ್ಳದ ದಂಡೆ ಸೇರಿದಂತೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವಿವಿಧ ರಸ್ತೆಗಳಲ್ಲಿ ಕೋತಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.