ವಿಜಯಪುರ: ವ್ಯಾಪಾರಿಗಳಿಗೆ ಶುಭ ಶಕುನವಾಗಿದ್ದ ಮಂಗ ಇನ್ನಿಲ್ಲ..!
⦁ ಸಾವನ್ನಪ್ಪಿದ ಕೋತಿಗೆ ಶಾಸ್ತ್ರೋಕ್ತ ಅಂತ್ಯಕ್ರಿಯೆ..!
⦁ ಕೋಲ್ಹಾರ ಪಟ್ಟಣದಲ್ಲಿ ಮೃತ ಕಪಿರಾಯನ ಮೆರವಣಿಗೆ..!
⦁ ಮಂಗ ಬಂದ್ರೆ ಅಂಗಡಿಯಲ್ಲಿ ನಡೆಯುತ್ತಿತ್ತಂತೆ ಭರ್ಜರಿ ವ್ಯಾಪಾರ..!
⦁ ವ್ಯಾಪಾರಿಗಳಿಗೆ ಶುಭ ಶಕುನವಾಗಿದ್ದ ಮಂಗ ಇನ್ನಿಲ್ಲ..!
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಏ14) : ಈಗಿನ ದಿನಮಾನಗಳಲ್ಲಿ ಮನುಷ್ಯನಲ್ಲಿ ಮಾನವೀಯತೆ ಅನ್ನೋದು ಮರೆಯಾಗಿದೆ. ರಸ್ತೆಗಳಲ್ಲಿ ಯಾರಾದರೂ ಅಪಘಾತ ಉಂಟಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಅವರನ್ನ ಕಾಪಾಡೋ ಬದಲಿಗೆ ಮೊಬೈಲ್ ನಲ್ಲಿ ದೃಶ್ಯ ಸೆರೆಹಿಡಿಯೋ ಅಮಾನವೀಯ ಜನರೇ ಹೆಚ್ಚು. ಆದ್ರೆ ವಿಜಯಪುರ ಜಿಲ್ಲೆ ಕೋಲ್ಹಾರ ಪಟ್ಟಣದಲ್ಲಿ ಸಾವನ್ನಪ್ಪಿದ ಮಂಗನಿಗೆ ಜನರು, ವ್ಯಾಪಾರಸ್ಥರು ಸೇರಿ ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ..
ಕೋಲ್ಹಾರದಲ್ಲಿ ಮಂಗನಿಗೆ ಅಂತ್ಯಕ್ರಿಯೆ..!
ಕೋಲ್ಹಾರ ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ವಾಸವಿದ್ದ ಮಂಗ ಇಂದು (ಗುರುವಾರ) ಸಾವನ್ನಪ್ಪಿದೆ. ಸಾವನ್ನಪ್ಪಿದ ಮಂಗವನ್ನ ಮ್ಯಾಕ್ಸಿಕ್ಯಾಬ್ ವಾಹನದಲ್ಲಿಟ್ಟು ಜನರು ಮೆರವಣಿಗೆ ನಡೆಸಿ ಗಮನ ಸೆಳೆದಿದ್ದಾರೆ. ಮೊದಲು ಸಾವನ್ನಪ್ಪಿದ ಕಪಿಗೆ ಅಂತಿಮ ಸ್ನಾನಾಧಿಗಳನ್ನ ಮಾಡಿಸಲಾಗಿದೆ. ಪಟ್ಟಣದ ಕಲ್ಲಿನಾಥ ದೇಗುಲದ ಬಳಿ ಮೃತ ಕಪಿಗೆ ಭಜರಂಗದಳ ಕಾರ್ಯಕರ್ತರು, ಮಹಿಳೆಯರು ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ. ಬಳಿಕ ವಾಹನದ ಮೇಲಿಟ್ಟು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಗಿದೆ. ಮೃತ ಮಂಗನ ಶವದ ಮೆರವಣಿಗೆ ಹೊರಟಿದ್ದರೆ ರಸ್ತೆ ಬದಿಯಲ್ಲಿ ಜನರು ಕೈಮುಗಿದು ಬೀಳ್ಕೊಟ್ಟಿದ್ದಾರೆ. ಪಶು ಆಸ್ಪತ್ರೆಯ ಪಕ್ಕದ ವ್ಯಾಪಾರಿ ಸ್ಥಳದಲ್ಲಿ ಮಂಗನ ಅಂತ್ಯಕ್ರಿಯೆ ನೆರವೇರಿಸಲಾಗಿದೆ..
ಕೋತಿಗೆ ದೇಗುಲ ಕಟ್ಟಿದ್ರು ಸಾರಾ, ಮುದ್ದಾದ ಪ್ರತಿಮೆ ಪ್ರತಿಷ್ಠಾಪನೆ
6 ವರ್ಷಗಳಿಂದ ಜನರ ಒಡನಾಡಿಯಾಗಿದ್ದ ಮಂಗ..!
ಸರಿಸುಮಾರು 6 ವರ್ಷಗಳಿಂದ ಮಂಗ ಕೋಲ್ಹಾರ ಪಟ್ಟಣದಲ್ಲಿ ವಾಸವಿತ್ತು. ಪಟ್ಟಣದ ಜನರೊಂದಿಗೆ ಕಪಿ ವರ್ತನೆ ಸಾಕುಪ್ರಾಣಿಗಳಂತಿತ್ತು. ಹೀಗಾಗಿ ಗಾಂಧಿ ಸರ್ಕಲ್ ನಲ್ಲಿ ಹಣ್ಣು ಮಾರುತ್ತಿದ್ದ ವ್ಯಾಪಾರಿಗಳು ಕಪಿಗೆ ತಿನ್ನಲು ಹಣ್ಣು-ಹಂಪಲು ನೀಡುತ್ತಿದ್ದರು. ಹೊಟೇಲ್ ಗಳಲ್ಲು ಕಪಿಗೆ ಆಹಾರ ನೀಡಲಾಗ್ತಿತ್ತು. ಇದರಿಂದಾಗಿ ಮಂಗ ಇಲ್ಲಿನ ಜನರೊಂದಿಗೆ ಒಡನಾಡಿಯಾಗಿ ಬೆಳೆದಿತ್ತು.. ಇಂದು ಏಕಾಏಕಿ ಮಂಗ ಮೃತಪಟ್ಟಿದ್ದರಿಂದ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.
ಶುಭ ಶಕುನದಂತಿದ್ದ ಕಪಿರಾಯ..!
ಮಂಗಗಳನ್ನ ಆಂಜನೇಯ ಸ್ವಾಮಿಯ ಅಂಶವು ಎಂದು ಕರೆಯಲಾಗುತ್ತೆ. ಚಮತ್ಕಾರವೋ ಪವಾಡವೋ ಗೊತ್ತಿಲ್ಲ. ಮೃತಪಟ್ಟ ಕೋತಿ ತಾನಾಗಿಯೇ ಯಾವುದಾದರು ವ್ಯಾಪಾರಿಯ ಬಳಿ ಹೋಗಿ ಹಣ್ಣು ತೆಗೆದುಕೊಂಡು ತಿಂದರೇ ಅಂದು ಅವರ ವ್ಯಾಪಾರ ಹೆಚ್ಚಾಗುತ್ತಿತ್ತಂತೆ. ಇನ್ನು ಹೊಟೇಲ್-ಅಂಗಡಿಗಳಲ್ಲು ಮಂಗ ತಾನಾಗಿಯೇ ಬಂದು ಆಹಾರ ತಿಂದರೆ ಅಂದು ಭರ್ಜರಿ ವ್ಯಾಪಾರ ಸಹ ನಡೆಯುತ್ತಿತ್ತು ಎನ್ನಲಾಗಿದೆ.!
ಎರೆಡು ದಿನಗಳಿಂದ ಅನಾರೋಗ್ಯಗೊಂಡಿದ್ದ ಮಂಗ..!
ಕಳೆದ 6 ವರ್ಷಗಳಿಂದ ಕೋಲ್ಹಾರ ಪಟ್ಟಣದ ಜನರ ಜೊತೆಗೆ ಒಡನಾಡಿಯಂತಿದ್ದ ಕಪಿರಾಯ ಎರೆಡು ದಿನಗಳಿಂದ ಅಸ್ವಸ್ಥಗೊಂಡಿತ್ತು. ನಿನ್ನೆ ಭಜರಂಗದಳ ಕಾರ್ಯಕರ್ತರು ಮಂಗನನ್ನ ಸರ್ಕಾರಿ ಪಶು ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆ ಕೊಡಿಸಿದ್ದರು. ಇಂದು ಕೂಡ ಅಸ್ವಸ್ಥಗೊಂಡ ಸ್ಥಿತಿಯಲ್ಲೆ ಮಂಗ ಇತ್ತು. ಮಧ್ಯಾಹ್ನ ಕಲ್ಲಿನಾಥ ದೇಗುಲದ ಆವರಣದಲ್ಲಿ ಸಾವನ್ನಪ್ಪಿದೆ ಎನ್ನಲಾಗಿದೆ..
ಕೋತಿಸಾವಿಗು ಕಂಬನಿ, ವ್ಯಾಪಾರಿಗಳಲ್ಲು ದುಃಖ..!
ದೈವಿ ಅಂಶದಂತಿದ್ದ ಕೋತಿ ಸಾವನ್ನಪ್ಪಿದ್ದರಿಂದ ಕೋಲ್ಹಾರ ಪಟ್ಟಣ ಗಾಂಧಿ ಸರ್ಕಲ್ ವ್ಯಾಪಾರಿಗಳಲ್ಲಿ ದುಃಖ ಮಡುಗಟ್ಟಿತ್ತು. ಇದೆ ಜಾಗದಲ್ಲಿ ಖಾಸಗಿ ಕ್ಯಾಬ್ ನಿಲ್ದಾಣವಿದ್ದು, ಅಲ್ಲಿನ ಡೈವರ್ ಗಳು ಕೋತಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ಇನ್ನು ಕೋತಿಗೆ ಬೇಕೆಂದಾಗೆಲ್ಲ ಹಣ್ಣು, ಆಹಾರ ನೀಡುತ್ತ ಸಲುಗೆ ಬೆಳೆಸಿಕೊಂಡಿದ್ದ ಹಣ್ಣು ವ್ಯಾಪಾರಿಗಳು, ಹೊಟೇಲ್ ಮಾಲಿಕರಲ್ಲು ಕೋತಿ ಸಾವನ್ನಪ್ಪಿದ ದುಃಖ ಆವರಿಸಿತ್ತು