ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ತಮ್ಮ ಸ್ವಕ್ಷೇತ್ರ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ವಿಠ್ಠಲ ಬೀರ ದೇವರ ಮತ್ತು ಬಾಗುಬಾಯಿ ದೇವಸ್ಥಾನ ನಿರ್ಮಿಸಿಕೊಟ್ಟಿದ್ದು, ಅದರ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ತಮ್ಮ ಸ್ವಕ್ಷೇತ್ರ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ವಿಠ್ಠಲ ಬೀರ ದೇವರ ಮತ್ತು ಬಾಗುಬಾಯಿ ದೇವಸ್ಥಾನ ನಿರ್ಮಿಸಿಕೊಟ್ಟಿದ್ದು, ಅದರ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ, ಗ್ರಾಮಸ್ಥರು ‘ನುಡಿದಂತೆ ನಡೆದ ತಾಯಿ’ ಎನ್ನುವ ಫ್ಲೆಕ್ಸ್ ಹಾಕಿ, ತೆರೆದ ವಾಹನದಲ್ಲಿ ಊರ ತುಂಬಾ ಸಚಿವರ ಮೆರವಣಿಗೆ ಮಾಡಿದರು. ಬಳಿಕ, ಉದ್ಘಾಟನಾ ಸಮಾರಂಭದಲ್ಲಿ ಸಚಿವರಿಗೆ ಚಿನ್ನದ ಸರ ಹಾಕಿ, ಸನ್ಮಾನ ಮಾಡಿದರು.

ಈ ವೇಳೆ, ಭಾವುಕರಾಗಿ ಮಾತನಾಡಿದ ಸಚಿವರು, ಈ ಹಿಂದೆ ಗ್ರಾಮದಲ್ಲಿ ಗುಡಿ ಕಟ್ಟಿಸಿಕೊಡುವುದಾಗಿ ಹೇಳಿದ ಸಂದರ್ಭದಲ್ಲಿ ನೀವೆಲ್ಲ ಚಪ್ಪಾಳೆ ಹೊಡೆದಿದ್ರಿ. ಆಗ ನಾನು ಗುಡಿ ಕಟ್ಟಿದ ಮೇಲೆ ಚಪ್ಪಾಳೆ ಹೊಡಿಯಿರಿ, ಈಗ ಬೇಡ ಎಂದಿದ್ದೆ. ಇಂದು ಗುಡಿ ಕಟ್ಟಿಸಿ, ಉದ್ಘಾಟನೆ ಮಾಡಿದ್ದೇನೆ. ಈಗ ನಿಮ್ಮ ಚಪ್ಪಾಳೆ ನಿಲ್ಲಿಸಲಾಗುತ್ತಿಲ್ಲ. ನೀವು ತೋರುತ್ತಿರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಊರಲ್ಲೆಲ್ಲ ಮೆರವಣಿಗೆ ಮಾಡಿದಿರಿ. ಚಿನ್ನದ ಸರ ಹಾಕಿ ಸನ್ಮಾನ ಮಾಡಿದ್ದೀರಿ. ನಿಮ್ಮ ಈ ಪ್ರೀತಿಯೇ ನನ್ನ ಶಕ್ತಿ ಎಂದು ಹೇಳಿದರು.

ಕೊಟ್ಟ ಅವಕಾಶವನ್ನು ಸೂಕ್ತವಾಗಿ ನಿರ್ವಹಿಸುತ್ತಿರುವೆ

ಶಾಸಕಿಯಾಗಿ ಕ್ಷೇತ್ರದ ಜನರು ಕೊಟ್ಟ ಅವಕಾಶವನ್ನು ಸೂಕ್ತವಾಗಿ ನಿರ್ವಹಿಸುತ್ತಿರುವೆ. ದಾನ, ಧರ್ಮ ಮಾಡಿದ ಕೈಯನ್ನು ದೇವರು ಕಾಪಾಡುತ್ತಾನೆ ಎನ್ನುವುದಕ್ಕೆ ದೊಡ್ಡ ಅಪಘಾತದಲ್ಲೂ ನಾನು ಬದುಕಿ ಬಂದಿದ್ದೇ ಸಾಕ್ಷಿ. ನಿಮ್ಮ ಸೇವೆ ಮಾಡುವ ಸೌಭಾಗ್ಯಕ್ಕಾಗಿ ದೇವರು ನನ್ನನ್ನು ಉಳಿಸಿದ. ಜನರ‌ ಸೇವೆ ಮಾಡುವ ಸೌಭಾಗ್ಯ ಈಗ ನನಗೆ ಸಿಕ್ಕಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ನನ್ನ ಕೈ-ಕಾಲಲ್ಲಿ ಶಕ್ತಿ ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಓಟು ಎಣಿಸಿ ರೊಕ್ಕ ಹಾಕುವ ಹೆಣ್ಣು ಮಗಳಲ್ಲ ನಾನು. 300 ಓಟು ಇದ್ದಲ್ಲಿ 15 ಕೋಟಿ ರೂ.ಕೆಲಸ ಮಾಡಿಸಿದ್ದೇನೆ. ಇಲ್ಲಿ 1,200 ಓಟು ಇದೆ. ಆದರೆ, ಯಾರು ನನಗೆ ಮತ ಹಾಕಿದ್ದೀರಿ ಎಂಬುದನ್ನು ನೋಡಿಲ್ಲ. ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ. ಬೇರೆಯವರ ಮೇಲೆ ಆರೋಪ ಮಾಡಲು ನನಗೆ ಸಮಯವಿಲ್ಲ. ಪ್ರೀತಿಯಿಂದ ಕೆಲಸ ಮಾಡುತ್ತೇನೆ. ಕೆಲಸ ಒಂದೇ ನನಗೆ ಗೊತ್ತು. ನಿಮ್ಮ ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ. ನಿಮ್ಮ ಪ್ರೀತಿಯ ಕಾಣಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಲಕ್ಷ್ಮೀ ಹೆಬ್ಬಾಳಕರ್ ನಿಜವಾಗಿ ಕೊಂಡಸಕೊಪ್ಪದ ಮಗಳು

ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಮಾಳಿಂಗ ಸಾಂಬ್ರೇಕರ್ ಮಾತನಾಡಿ, ಹಿಂದೆಲ್ಲಾ ಶಾಸಕರಾದವರು ಚಪ್ಪಾಳೆ ಹೊಡೆಸಿಕೊಂಡು ಹೋಗುತ್ತಿದ್ದರು. ಕೆಲಸ ಮಾಡುತ್ತಿರಲಿಲ್ಲ. ದೇವಸ್ಥಾನ ನಿರ್ಮಾಣ ಮಾಡಲು, ಊರಿನ ಅಭಿವೃದ್ಧಿ ಮಾಡಲು ಈ ಹಿಂದೆ ಮಾಡಿದ ನಮ್ಮ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಈಗ ಆಗಿದೆ.

ಲಕ್ಷ್ಮೀ ಹೆಬ್ಬಾಳಕರ್ ನಿಜವಾಗಿ ಕೊಂಡಸಕೊಪ್ಪದ ಮಗಳು ಎಂದು ಹೇಳಿದರು. ‌