Asianet Suvarna News Asianet Suvarna News

ಬಾಗಲಕೋಟೆ: ಸ್ಮಶಾನದ ಜಾಗಕ್ಕೆ ಬೀದಿಗಿಳಿದ ಗ್ರಾಮಸ್ಥರು..!

ಕಳೆದ ಎರಡ್ಮೂರು ವರ್ಷಗಳಿಂದ ಆಗಾಗ ರಸ್ತೆ ತಡೆ ನಡೆಸಿ ಪ್ರತಿಭಟನೆಗಳ ಮೂಲಕ ಜಿಲ್ಲಾಡಳಿತಕ್ಕೆ ಬಿಸಿ ತಟ್ಟಿಸಲು ಶೀಗಿಕೇರಿ ಗ್ರಾಮಸ್ಥರು ಮುಂದಾದ್ರೂ ಸಹ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಾರಿ ಶತಾಯಗತಾಯ ಸ್ಮಶಾನಕ್ಕೆ ಜಾಗೆ ಮೀಸಲು ಇಡಲೇಬೇಕೆಂದು ಗ್ರಾಮಸ್ಥರು ಹಠ ಹಿಡಿದಿದ್ದಾರೆ. 

Villagers Held Protest For Cemetery in Bagalkot grg
Author
First Published Aug 1, 2023, 8:49 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಆ.01):  ಅದು ಬಾಗಲಕೋಟೆ ನಗರಕ್ಕೆ ಹೊಂದಿಕೊಂಡಿರುವ ಗ್ರಾಮ, ಆ ಗ್ರಾಮಸ್ಥರು ಆಲಮಟ್ಟಿ ಹಿನ್ನೀರಿನಿಂದ ಭಾದಿತರಾದವ್ರಿಗೆ ನಿವೇಶನ ಕಲ್ಪಿಸಲು ಫಲವತ್ತಾದ ಜಮೀನುಗಳನ್ನ ತ್ಯಾಗ‌ ಮಾಡಿರುವ ತ್ಯಾಗಮಯಿಗಳು. ಆದರೆ ದುರಂತ ಅಂದ್ರೆ ಸಂತ್ರಸ್ಥರಿಗಾಗಿ ನೂರಾರು ಎಕರೆ ಭೂಮಿ ತ್ಯಾಗ ಮಾಡಿರುವ ಅವರಿಗೆ ಸತ್ತವರನ್ನ ಹೂಳಲು ಆರಡಿ, ಮೂರಡಿ ಜಾಗವಿಲ್ಲ. ಇದರಿಂದ ಹೂಳಲು ಜಾಗವಿಲ್ಲದೇ, ಪರದಾಡುವಂತಾಗಿದೆ. ಈ ಮಧ್ಯೆ ಆಕ್ರೋಶಗೊಂಡಿರೋ ಗ್ರಾಮಸ್ಥರು ನಮಗೆ ಸ್ಮಶಾನ ಜಾಗ ಬೇಕು ಅಂತ ಬೀದಿಗಿಳಿದಿದ್ದರು. ಈ ಕುರಿತ ವರದಿ ಇಲ್ಲಿದೆ.

ಒಂದೆಡೆ ತಮ್ಮೂರಿಗೆ ಸ್ಮಶಾನ ಜಾಗೆಗಾಗಿ ಆಗ್ರಹಿಸಿ ಬೀದಿಗಿಳಿದ ಗ್ರಾಮಸ್ಥರು. ಇತ್ತ ಮತ್ತೊಂದೆಡೆ ರಸ್ತೆ ಬಂದ್ ಮಾಡಿ ಆಕ್ರೋಶ ಹೊರ ಹಾಕುತ್ತಿರೋ ಜನ್ರು, ರಸ್ತೆ ತಡೆಯಾಗಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿ ಅತಂತ್ರರಾದ ಪ್ರಯಾಣಿಕರು. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ತಾಲೂಕಿನ ಶಿಕ್ಕೇರಿ ಅಂದ್ರೆ ಶೀಗಿಕೇರಿ ಗ್ರಾಮದಲ್ಲಿ.  ಹೌದು, ಬಾಗಲಕೋಟೆ ನಗರಕ್ಕೆ ಹತ್ತಿಕೊಂಡಿರುವ ಶೀಗಿಕೇರಿ ಗ್ರಾಮಸ್ಥರು ಯಾರಾದ್ರೂ ಊರಲ್ಲಿ ತೀರಿಹೋದ್ರೆ ತಮ್ಮ ಹೊಲಗದ್ದೆಗಳಲ್ಲಿ ಅಂತ್ಯಸಂಸ್ಕಾರ‌ ಮಾಡ್ತಿದ್ರು. ಆದರೆ ಆಲಮಟ್ಟಿ ಹಿನ್ನಿರಿನಿಂದ ಭಾದಿತವಾಗುವ ಕುಟುಂಬಗಳಿಗೆ ನಿವೇಶನ ಹಂಚಿಕೆ‌ ಮಾಡುವ ದೃಷ್ಟಿಯಿಂದ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಧಿಕಾರ ಸುಮಾರು ವರ್ಷಗಳ ಹಿಂದೆ ಈ ಗ್ರಾಮದ ನೂರಾರು ಎಕರೆ ಫಲವತ್ತಾದ ಜಮೀನು ವಶಪಡಿಸಿಕೊಂಡಿದೆ. ಬಾಗಲಕೋಟೆಯ ನವನಗರ  ಯುನಿಟ್ 3ರ ವ್ಯಾಪ್ತಿ  ಸಂತ್ತಸ್ಥರಿಗೆ  ಈ ಪ್ರದೇಶದಲ್ಲಿ ನಿವೇಶನ ಕಲ್ಪಿಸಲು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಇದರಿಂದ ಈ ಗ್ರಾಮಸ್ಥರು ಹೊಲಗದ್ದೆಗಳನ್ನ ಕಳೆದುಕೊಂಡಿದ್ದಾರೆ. ಆದರೆ ದುರಂತ ಅಂದ್ರೆ ಸಂತ್ರಸ್ತರಿಗಾಗಿ ಭೂಮಿ ತ್ಯಾಗ‌ಮಾಡಿದ ಈ ಜನರಿಗೆ, ಗ್ರಾಮದಲ್ಲಿ ಸತ್ತವರನ್ನ ಹೂಳಲು ಆರಡಿ‌-ಮೂರಡಿ ಜಾಗವಿಲ್ಲದಂತಾಗಿದೆ. ಇದ್ರಿಂದ ಸಾಕಷ್ಟು ರೋಷಿ ಹೋಗಿರೋ ಶೀಗಿಕೇರಿಯ ಗ್ರಾಮಸ್ಥರು ಇದೀಗ ಮತ್ತೊಮ್ಮೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಸ್ಮಶಾನ ಜಾಗೆ ನೀಡುವಂತೆ ಗ್ರಾಮದ ಶಿವಯ್ಯ ಹಿರೇಮಠ ಆಗ್ರಹಿಸಿದ್ದಾರೆ. 

ಆ.5ರಂದು ಗೃಹಜ್ಯೋತಿ ಯೋಜನೆಗೆ ಚಾಲನೆ: ಸಚಿವ ತಿಮ್ಮಾಪೂರ

ಪಟ್ಟು ಬಿಡದ ಗ್ರಾಮಸ್ಥರು, ಸ್ಮಶಾನ ಜಾಗಕ್ಕೆ ಬೀದಿಗಿಳಿದ ಮಹಿಳೆಯರು                      

ಇನ್ನು ಕಳೆದ ಎರಡ್ಮೂರು ವರ್ಷಗಳಿಂದ ಆಗಾಗ ರಸ್ತೆ ತಡೆ ನಡೆಸಿ ಪ್ರತಿಭಟನೆಗಳ ಮೂಲಕ ಜಿಲ್ಲಾಡಳಿತಕ್ಕೆ ಬಿಸಿ ತಟ್ಟಿಸಲು ಶೀಗಿಕೇರಿ ಗ್ರಾಮಸ್ಥರು ಮುಂದಾದ್ರೂ ಸಹ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಾರಿ ಶತಾಯಗತಾಯ ಸ್ಮಶಾನಕ್ಕೆ ಜಾಗೆ ಮೀಸಲು ಇಡಲೇಬೇಕೆಂದು ಗ್ರಾಮಸ್ಥರು ಹಠ ಹಿಡಿದಿದ್ದಾರೆ. ಇನ್ನು ಈ ಹಿಂದೆ ಶೀಗಿಕೇರಿ ಗ್ರಾಮಕ್ಕಾಗಿ ಸ್ಮಶಾನ ಜಾಗೆ ಅಂತ ಗುರುತಿಸಿದ್ದು, ಗ್ರಾಮದಿಂದ ಬರೋಬ್ಬರಿ 2 ಕಿಮೀ ದೂರವಿತ್ತಂತೆ ಹೀಗಾಗಿ ಅದು ಅನಾನುಕೂಲವಾಗಿದ್ದು, ಈ ಮಧ್ಯೆ ಗ್ರಾಮಕ್ಕೆ ಹೊಂದಿಕೊಂಡಂತೆ ನೂರಾರು ಎಕರೆ ಭೂಮಿಯನ್ನ ಸಂತ್ರಸ್ಥರಿಗಾಗಿ ಗ್ರಾಮಸ್ಥರು ಬಿಟ್ಟುಕೊಟ್ಟಿದ್ದು, ಅದ್ರಲ್ಲಿ ಸ್ವಲ್ಪ ಜಾಗೆಯನ್ನ ಗ್ರಾಮದ ಸ್ಮಶಾನಕ್ಕಾಗಿ ಬಿಟ್ಟು ಕೊಡಿ ಅಂತ ಪಟ್ಟು ಹಿಡಿದಿದ್ದು, ಈ ಬಾರಿ ರಸ್ತೆ ತಡೆ ನಡೆಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಬೀದಿಗಿಳಿದು ಹೋರಾಟ ಮಾಡಿದ್ದು, ಇದಕ್ಕೆ ಸ್ಥಳಕ್ಕೆ ಬಂದ ಅಧಿಕಾರಿಗಳು ಶೀಘ್ರ ಸ್ಮಶಾನ ಜಾಗೆ ಕೊಡಿಸುವ ಭರವಸೆ ನೀಡಿದ್ದಾರೆ, ಆದಷ್ಟು ಬೇಗ ಸ್ಮಶಾನಕ್ಕೆ ಜಾಗೆ ನೀಡಲಿ ಇಲ್ಲವೆ ಹೋರಾಟ ಅನಿವಾರ್ಯ ಅಂತಾರೆ ಗ್ರಾಮಸ್ಥ ಮಲ್ಲಪ್ಪ.                       

ಒಟ್ಟಿನಲ್ಲಿ ಸಂತ್ರಸ್ತರಿಗಾಗಿ ನೂರಾರು ಎಕರೆ ಭೂಮಿ ತ್ಯಾಗ ಮಾಡಿದ ಗ್ರಾಮಸ್ಥರೇ, ಆರಡಿ ಮೂರಡಿ ಜಾಗಕ್ಕಾಗಿ ಪರದಾಡಿದ್ದು, ವಿಪರ್ಯಾಸದ ಸಂಗತಿಯಾಗಿದ್ದು, ಇನ್ನಾದ್ರೂ ಜಿಲ್ಲಾಡಳಿತ ಇವರಿಗೆ ಸ್ಮಶಾನಕ್ಕಾಗಿ ಜಾಗೆ ನೀಡುವರೇ ಅಂತ ಕಾದು ನೋಡಬೇಕಿದೆ.

Follow Us:
Download App:
  • android
  • ios