* ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ದೇವಗಾಂವ ಗ್ರಾಮದಲ್ಲಿ ಸಂಭವಿಸಿದ ಘಟನೆ* ಮಹಿಳೆಗೆ ಅಶ್ಲೀಲ ಸಂಭಾಷಣೆ, ಸಂದೇಶ ಕಳುಹಿಸಿದ್ದರಿಂದ ತೀವ್ರ ಆಕ್ರೋಶ* ಮುಖ್ಯಾಧ್ಯಾಪಕನ ವಿರುದ್ಧ ಕ್ರಮ: ಬಿಇಒ ಆರ್‌.ಟಿ. ಬಳಿಗಾರ  

ಚನ್ನಮ್ಮನ ಕಿತ್ತೂರು(ಆ.05): ಮಹಿಳೆಯೋರ್ವಳಿಗೆ ಅಶ್ಲೀಲ ಸಂಭಾಷಣೆ ಹಾಗೂ ಸಂದೇಶಗಳನ್ನು ಕಳುಹಿಸಿದ್ದರಿಂದ ರೊಚ್ಚಿಗೆದ್ದ ಮಹಿಳೆ, ಅವಳ ಪತಿ ಮತ್ತು ಗ್ರಾಮಸ್ಥರು ಮುಖ್ಯಾಧ್ಯಾಪಕನೋರ್ವನನ್ನು ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಕಿತ್ತೂರು ತಾಲೂಕಿನ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ದೇವಗಾಂವ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಸಿ. ಚೌಲಗಿ ಎಂಬಾತನೇ ಅಶ್ಲೀಲ ಸಂಭಾಷಣೆ ಹಾಗೂ ಸಂದೇಶ ಕಳುಹಿಸಿ ಧರ್ಮದೇಟು ತಿಂದಾತ. ವಾಕ್ಸಿನ್‌ ಹಾಕಿಸಿಕೊಳ್ಳಲು ಹೋದ ಮುಖ್ಯಾಧ್ಯಾಪಕ ಮಹಿಳೆಯನ್ನು ಪರಿಚಯಿಸಿಕೊಂಡಿದ್ದಾನೆ. ನಂತರ ಎಲ್ಲ ಶಿಕ್ಷಕರಿಗೆ ವಾಕ್ಸಿನ್‌ ಹಾಕಬೇಕು ನಿಮಗೆ ಫೋನ್‌ ಮಾಡುತ್ತೇನೆಂದು ಹೇಳಿ ಮೊಬೈಲ್‌ ನಂಬರ್‌ ಪಡೆದಿದ್ದಾನೆ. ಇದನ್ನೇ ದುರುಪಯೋಗಪಡಿಸಿಕೊಂಡ ಮುಖ್ಯಾಧ್ಯಾಪಕ ದಿನನಿತ್ಯವೂ ಮೆಸೆಜ್‌ ಮಾಡಲು ಆರಂಭಿಸಿದ್ದಾನೆ. ಮಹಿಳೆ ಬುದ್ಧಿ ತಿಳಿ ಹೇಳಿದರೂ ಅದೇ ಚಾಳಿ ಮುಂದುವರಿಸಿದ್ದಾನೆ. ಅಶ್ಲೀಲ ಸಂಭಾಷಣೆಯಲ್ಲಿ ತೊಡಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ ಗ್ರಾಮಸ್ಥರಿಗೆ ಈ ವಿಷಯ ತಿಳಿಸಿದ್ದಾಳೆ. ಇದರಿಂದ ಗ್ರಾಮಸ್ಥರೆಲ್ಲ ಸೇರಿ ಮುಖ್ಯಾಧ್ಯಾಪಕನನ್ನು ಹಿಗ್ಗಾ-ಮುಗ್ಗಾ ಥಳಿಸಿ ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. 

ಬಿಜೆಪಿ ವಕ್ತಾರನ ಮೊಬೈಲ್‌ನಿಂದ ಅಶ್ಲೀಲ ಫೋಟೋ ವೈರಲ್‌..!

ಬಿಇಒ ಆರ್‌ಟಿ ಬಳಿಗಾರ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಗ್ರಾಮದ ಎಲ್ಲ ಮುಖ್ಯಸ್ಥರು ಮುಖ್ಯಾಧ್ಯಾಪಕನನ್ನು ತಕ್ಷಣ ಸಸ್ಪೆಂಡ್‌ ಮಾಡುವಂತೆ ಹಠ ಹಿಡಿದರು. ಗ್ರಾಮಸ್ಥರ ಎಲ್ಲ ದೂರು ಆಲಿಸಿದ ಬಿಇಒ ಲಿಖಿತ ರೂಪದಲ್ಲಿ ಗ್ರಾಮಸ್ಥರು, ಮಹಿಳೆ ಹಾಗೂ ಎಸ್‌ಡಿಎಂಸಿ ಸದಸ್ಯರು ನೀಡಿದ ಮನವಿ ಪಡೆದರು. ನಂತರ ಮಾತನಾಡಿ, ಎಲ್ಲ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಕೊಳ್ಳುವದಾಗಿ ಭರವಸೆ ನೀಡಿದರು. ನಂತರ ಮುಖ್ಯಾಧ್ಯಾಪಕನನ್ನು ಕೊಠಡಿಯಿಂದ ಹೊರಗೆ ಹಾಕಲಾಯಿತು.

ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯೆಯರೂ ಕೂಡ ಬಿಇಒ ಜತೆ ಮಾತನಾಡಿ, ನಮ್ಮ ಜೊತೆ ಕೂಡ ಈ ಮುಖ್ಯಾಧ್ಯಾಪಕ ಅಶ್ಲೀಲವಾಗಿ ಏಕವಚನದಲ್ಲಿ ಮಾತನಾಡುತ್ತಾನೆ. ಫೋನ್‌ ಮಾಡಿ ಸುಖಾಸುಮ್ಮನೆ ಸತಾಯಿಸುತ್ತಾನೆ. ಈತನ ನಡವಳಿಕೆ ಸರಿಯಾಗಿಲ್ಲ ಎಂದು ಆರೋಪಿಸಿ, ಈತನನ್ನು ಇಲ್ಲಿಂದ ವರ್ಗ ಮಾಡಿ ಮನವಿ ಸಲ್ಲಿಸಿದರು. ಶಾಲೆಯಲ್ಲಿ ನೆರೆದಿದ್ದ ನೂರಾರು ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಅನುಚಿತ ವರ್ತನೆಯಿಂದಾಗಿ ಮುಖ್ಯಾಧ್ಯಾಪಕನನ್ನು ಗ್ರಾಮಸ್ಥರು ಥಳಿಸಿದ್ದಾರೆ. ಇದಕ್ಕೆ ಸಂಬಂಧಿತ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ನೊಂದ ಮಹಿಳೆ ಹಾಗೂ ಎಸ್‌ಡಿ ಎಂಸಿ ಸದಸ್ಯರು ಮುಖ್ಯಾಧ್ಯಾಪಕನ ಮೇಲೆ ಕ್ರಮ ಕೈಗೊಳ್ಳುವಂತೆ ವಿನಂತಿಸಿ ಮನವಿ ಸಲ್ಲಿಸಿದ್ದಾರೆ. ಮನವಿಗಳಲ್ಲಿನ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಮುಖ್ಯಾಧ್ಯಾಪಕ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಿತ್ತೂರು ಬಿಇಒ ಆರ್‌.ಟಿ. ಬಳಿಗಾರ ತಿಳಿಸಿದ್ದಾರೆ.