"

ಅಥಣಿ(ನ.24): ಉಪಚುನಾವಣೆಯ ನಿಮಿತ್ತ ಮತ ಕೇಳಲು ಬಂದ ಬಿಜೆಪಿ ಮುಖಂಡರಿಗೆ ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ಮತ ಕೇಳಲು ಇಂಗಳಗಾಂವ ಗ್ರಾಮಕ್ಕೆ ಬಂದ ವೇಳೆ ಕೋಪಗೊಂಡ ಗ್ರಾಮಸ್ಥರು ನೆರೆ ಬಂದಿದ್ದರಿಂದ ನಾವು ಮನೆ, ಮಠ ಎಲ್ಲವನ್ನೂ ಕಳೆದುಕೊಂಡಿದ್ದೇವೆ, ಆದರೆ ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ ಎಂದು ಉಭಯ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೂರು ತಿಂಗಳ ಹಿಂದೆ ಭೀಕರ ಪ್ರವಾಹ ಬಂದಿದ್ದರಿಂದ ಇಂಗಳಗಾಂವ ಸಂಪೂರ್ಣವಾಗಿ ಮುಳಗಡೆಯಾಗಿತ್ತು. ಪ್ರವಾಹ ಬಂದಾಗ ಕಷ್ಟ ಕೇಳದೇ ಈಗ ಮತ ಕೇಳೋಕೆ ಬಂದಿದ್ದೀರಾ, ಇರೋಕೆ‌ ಮನೆಯಿಲ್ಲ ಸತ್ರೆ‌ ಹೂಳೊಕೆ ಸ್ಮಶಾನವೂ ಇಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. 

ಪ್ರವಾಹ ಬಂದು ಹೋದರೂ ಏನೂ ಮಾಡಿಲ್ಲ ಅಂತಾ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ನಮಗೆ ಇರೋಕೆ ಮನೆಗಾಗಿ ಸೂಕ್ತ ಜಾಗ ಕೊಡಿಸಿ ಅಂತಾ ನೆರೆ ಸಂತ್ರಸ್ತರು ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಕೈ ಮುಗಿದು ಬೇಡಿಕೊಂಡಿದ್ದಾರೆ. 

ಗ್ರಾಮಸ್ಥರ ಆಕ್ರೋಶದಿಂದ ಉಭಯ ನಾಯಕರುಗಳು ಕೆಲ ಕ್ಷಣ ತಬ್ಬಿಬ್ಬಾಗಿದ್ದಾರೆ.