Tumakuru: ಕೊಲೆ ಕೇಸ್ ಬೇಧಿಸಿದ ಪೊಲೀಸರಿಗೆ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ
ಕೊಲೆ ಕೇಸ್ ಬೇಧಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಗ್ರಾಮಸ್ಥರೆಲ್ಲಾ ಸೇರಿ ಅದ್ಧೂರಿಯಾಗಿ ಸನ್ಮಾನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ವರದಿ : ಮಹಂತೇಶ್ ಕುಮಾರ್ ಏಷನೆಟ್ ಸುವರ್ಣ ನ್ಯೂಸ್
ತುಮಕೂರು (ಫೆ. 23): ಕೊಲೆ ಕೇಸ್ ಬೇಧಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಗ್ರಾಮಸ್ಥರೆಲ್ಲಾ ಸೇರಿ ಅದ್ಧೂರಿಯಾಗಿ ಸನ್ಮಾನಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ಪೊಲೀಸ್ ಠಾಣೆಯ ಇನ್ಸೆಪೆಕ್ಟರ್, ಸಬ್ ಇನ್ಸೆಪೆಕ್ಟರ್, ಸಿಬ್ಬಂದಿಗಳು ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾದವರು. ಕೊಲೆ ಕೇಸ್ ಅನ್ನು ಶೀಘ್ರವಾಗಿ ಬಗೆಹರಿಸಿ ಕೊಲೆ ಮಾಡಿದವರನ್ನು ಜೈಲಿಗಟ್ಟುವಲ್ಲಿ ಪೊಲೀಸರು ತೋರಿದ ವೃತ್ತಿಪರತೆಯನ್ನು ಜನರು ಕೊಂಡಾಡಿದ್ದಾರೆ. ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ನನ್ನು ಫೆ 3 ರಂದು ಆತನ ಪತ್ನಿ ಹರ್ಷಿತಾ, ಪ್ರೀಯಕರ ಹಾಗೂ ಆತನ ಸಹಚರರೊಂದಿಗೆ ಸೇರಿ ಬರ್ಬರವಾಗಿ ಹತ್ಯೆಗೈದು ಯಾರಿಗೂ ಅನುಮಾನ ಬರಬಾರದೆಂದು ಶವ ಹಾಗೂ ಬೈಕ್ ಅನ್ನು ಕೆರೆಯಲ್ಲಿ ಎಸೆದಿದ್ದರು.
ಪ್ರಕರಣ ದಾಖಲಿಸಿಕೊಂಡ ಕುಣಿಗಲ್ ಪೊಲೀಸರು ತನಿಖೆ ನಡೆಸಿ, ಶೀಘ್ರವಾಗಿ ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನಲೆಯಲ್ಲಿ ತಾಲೂಕಿನ ಸೀನಪ್ಪನಹಳ್ಳಿ ಹೊಸಕೆರೆ ಮೊದಲಾದ ಊರಿನ ಗ್ರಾಮಸ್ಥರು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಶಹಪುರ್‌ವಾದ್, ಡಿವೈಎಸ್‌ಪಿ ಲಕ್ಷ್ಮಿಕಾಂತ್, ಸಿಪಿಐಗಳಾದ ಗುರುಪ್ರಸಾದ್, ಅರುಣ್‌ಸಾಲಂಕಿ, ಪಿಎಸ್‌ಐ ಜಮಲ್‌ಅಹಮದ್ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಿದರು.
ಪೊಲೀಸ್ ಸಿಬ್ಬಂದಿ ಹೀರೋ:
ಎಸ್ಪಿ ರಾಹುಲ್ ಕುಮಾರ್ ಶಹಪುರ್‌ವಾದ್ ಮಾತನಾಡಿ ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಪೊಲೀಸ್ ಸಿಬ್ಬಂದಿಗಳ ಪಾತ್ರ ಅತ್ಯ ಅಮೂಲ್ಯವಾಗಿದೆ ಹಾಗಾಗಿ ಇದರ ಶ್ರೇಯಸ್ಸು ಪೊಲೀಸ್ ಸಿಬ್ಬಂದಿಗೆ ಸಲ್ಲಬೇಕಾಗಿದೆ ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗಳೇ ಹೀರೋ ಆಗಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಆಟದಲ್ಲಿ ಸೋತಿದ್ದಕ್ಕೆ ನಕ್ಕ 7 ಮಂದಿಗೆ ಗುಂಡಿಕ್ಕಿ ಕೊಂದ: ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ
ಆರೋಪಿಗಳಿಗೆ ಶಿಕ್ಷೆಯಾಗಲು ಸಾಕ್ಷಿ ಮುಖ್ಯ :
ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಲಿದ್ದಾರೆ, ಆದರೆ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ ಸಾಕ್ಷಿಗಳ ಮುಖ್ಯವಾಗಿರುತ್ತದೆ, ಹಾಗಾಗಿ ಯಾರು ಸಾಕ್ಷಿಗಳಿಗೆ ಸಹಿ ಹಾಕಿದ್ದೀರ ಅವರು ಯಾವುದೇ ಆಸೆ ಆಮಿಷ ಹಾಗೂ ಬೆದರಿಕೆಗೆ ಅಂಜದೇ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಿದರೇ, ನೂರಕ್ಕೆ ನೂರರಷ್ಟು ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು.
ಬೆಳಗಾವಿ ಜನರನ್ನೇ ಬೆಚ್ಚಿ ಬೀಳಿಸಿದ್ದ ಖತರ್ನಾಕ್ ಕಿಡ್ನಾಪ್ ಗ್ಯಾಂಗ್ ಕೊನೆಗೂ ಅರೆಸ್ಟ್!
ಇದೇ ವೇಳೆ ಅನಾಥ ಶವಗಳ ಶವ ಸಂಸ್ಕಾರಕ್ಕೆ ಸೇವೆ ಸಲ್ಲಿಸುತ್ತಿರುವ ಅಂಬ್ಯೂಲೆನ್ಸ್ ಚಾಲಕರು, ಆಸ್ಪತ್ರೆ ಸಿಬ್ಬಂದಿ ಅವರನ್ನು ಪೊಲೀಸ್ ಇಲಾಖೆಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಬಿಳಿಲಿಂಗೇಗೌಡ, ಸ್ವಾಮಿ ಹಾಲುವಾಗಿಲು, ಮಾಜಿ ಸದಸ್ಯ ಬೈರಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ಬೋರೇಗೌಡ, ಮಂಜುನಾಥ್ ಅವರ ಅಕ್ಕ ವಿದ್ಯಾಶ್ರೀ, ವಿಂದ್ಯಾಶ್ರೀ, ಗ್ರಾಮಸ್ಥರಾದ ಶಂಕರ್, ಬೈರಪ್ಪ ಮತ್ತಿತರರು ಇದ್ದರು.