ಕರ್ನಾಟಕದ 7 ಅದ್ಭುತಗಳಲ್ಲೊಂದು ವಿಜಯಪುರದ ಗೋಲಗುಮ್ಮಟ..!
ಸಿಎಂ ಬೊಮ್ಮಾಯಿ ಅಧಿಕೃತ ಘೋಷಣಾ ಪತ್ರ ಪಡೆದ ವಿಜಯಪುರ ಜಿಲ್ಲಾಧಿಕಾರಿ, ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯಕ್ಕೆ ವಿಜಯಪುರ ಜನತೆಯ ಶ್ಲಾಘನೆ
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಫೆ.25): ಕರ್ನಾಟಕದ 7 ಅದ್ಭುತಗಳಲ್ಲಿ ನಮ್ಮ ವಿಜಯಪುರ ಜಿಲ್ಲೆಯ ಗೋಳಗುಮ್ಮಟ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಪ್ರಮಾಣ ಪತ್ರ ಹಾಗೂ ಘೋಷಣಾ ಫಲಕ ನೀಡಿದರು.
7 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಘೋಷಣಾ ಪತ್ರ..!
ಇಂದು(ಶನಿವಾರ) ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಇವರ ಸಂಯುಕ್ತಾಶ್ರದಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯದ 7 ಜಿಲ್ಲಾಧಿಕಾರಿಗಳನ್ನು ಪ್ರಮಾಣ ಪತ್ರ ನೀಡಲಾಯಿತು.
ಕರ್ನಾಟಕದ 7 ಅದ್ಭುತಗಳ ಅಧಿಕೃತ ಪಟ್ಟಿ ಬಿಡುಗಡೆ, ಇಲ್ಲಿದೆ ಸಪ್ತ ತಾಣಗಳ ಸುಂದರ ಲೋಕ!
ಕರ್ನಾಟಕದ 7 ಅದ್ಭುತ’ಗಳಲ್ಲೊಂದು ಬಿಜಾಪುರದ ಗೋಲಗುಮ್ಮಟ ಸ್ಥಾನ ಪಡೆದಿದ್ದು, ಜಿಲ್ಲೆಯ ಜನರಿಗೆ ಸಂತಸದ ವಿಷಯವಾಗಿದ್ದು, ಜಾಗತಿಕ ಹೆಗ್ಗುರುತುಗಳಾಗಿ ‘ಪ್ರಪಂಚದ 7 ಅದ್ಭುತಗಳು’ ಇರುವ ರೀತಿಯಲ್ಲೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ‘ಕರ್ನಾಟಕದ 7 ಅದ್ಭುತಗಳು’ ಘೋಷಣೆಯಾಗಿದೆ. ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕರ್ನಾಟಕದ 7 ಅದ್ಭುತಗಳು’ ಎಂದು ಘೋಷಿಸಿದ್ದಾರೆ.
ಆದಿಲ್‌ಶಾಹಿ ಸುಲ್ತಾನರ ಅದ್ಭುತ ರಚನೆ ಗೋಳಗುಮ್ಮಟ..!
ಈ ಪೈಕಿ 17ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನ ಆದಿಲ್ ಶಾಹ್ನಿಂದ ನಿರ್ಮಾಣಗೊಂಡ ಜಗದ್ವಿಖ್ಯಾತ ಗೋಲಗುಮ್ಮಟವೂ ಒಂದಾಗಿದೆ. ಆದಿಲ್‌ಶಾಹಿಗಳ ಕಾಲದಲ್ಲಿ ನಿರ್ಮಾಣಗೊಂಡ ಗೋಳಗುಮ್ಮಟಕ್ಕೆ ತನ್ನದೇ ಯಾದ ವೈಶಿಷ್ಟ್ಯತೆ ಇದೆ. ಎತ್ತರದ ಕಟ್ಟಡದ ಜೊತೆಗೆ ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಗುಮ್ಮಟ ಹೊಂದಿರುವ ಪ್ರಖ್ಯಾತಿ ಗೋಳಗುಮ್ಮಟಕ್ಕಿದೆ. ಸಂಖ್ಯಾಶಾಸ್ತ್ರ, ಧ್ವನಿ ವಿಜ್ಞಾನವನ್ನ ಆಧಾರಾವಾಗಿಟ್ಟುಕೊಂಡು ಶತನಮಾನಗಳ ಹಿಂದೆಯೆ ಆದಿಲ್ ಶಾಹಿಗಳು ನಿರ್ಮಿಸಿದ ಗೋಳಗುಮ್ಮಟ ಅತ್ಯಾಕರ್ಷಕವಾಗಿದೆ. ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಕರ್ನಾಟಕದ 7 ಅದ್ಭುತಗಳು ಅಭಿಯಾನದ ರಾಯಭಾರಿ, ಖ್ಯಾತ ನಟ ರಮೇಶ ಅರವಿಂದ, ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ, ಕರ್ನಾಟಕ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ ಸೇರಿದಂತೆ ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರವಾಸಿತಾಣಗಳ ಅಭಿವೃದ್ಧಿಗೆ ಸದಾಸಿದ್ಧ ಎಂದ ಡಿಸಿ ದಾನಮ್ಮನವರ್..!
ಕರ್ನಾಟಕದ ಎಳು ಅದ್ಭುತಗಳ ಅಧಿಕೃತ ಘೋಷಣೆ ಬಳಿಕ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಸಮಾರಂಭವನ್ನ ಉದ್ದೇಶಿಸಿ ಮಾತನಾಡಿದರು. ಸಿಎಂ ಬೊಮ್ಮಾಯಿಯವರು ಹೇಳಿದಂತೆ ಪ್ರವಾಸಿತಾಣಗಳ ಅಭಿವೃದ್ಧಿ ಪಡೆಸಲು ಎಲ್ಲ ರೀತಿಯಿಂದಲು ಸಿದ್ದವಾಗಿದ್ದೇವೆ. ಪುರಾತನ ಸ್ಮಾರಕಗಳ ರಕ್ಷಣೆ ಮಾಡಲು ಸದಾಕಾಲ ಸಿದ್ದರಾಗಿದ್ದೇವೆ ಎಂದರು. ಇನ್ನು ಕರ್ನಾಟಕದ ಅಸಂಖ್ಯಾತ ಅದ್ಭುತಗಳಲ್ಲಿ ಎಳು ಅದ್ಭುತಗಳನ್ನ ಹುಡುಕಿ ಅಧಿಕೃತಗೊಳಿಸಲು ಶ್ರಮಿಸಿದ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡದ ಕಾರ್ಯವನ್ನ ಜಿಲ್ಲಾಧಜಿಲ್ಲಾಧಿಕಾರಿಗಳು ಶ್ಲಾಘಿಸಿದರು.