ವಿಜಯಪುರ(ಜು.12): ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣದಿಂದ ಬೇಸತ್ತು ಬಿಜೆಪಿಯ ನಾಲ್ವರು ಜಿಪಂ ಸದಸ್ಯರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಜಿಪಂ ಸದಸ್ಯರಂತೆ ಪಕ್ಷ ದ್ರೋಹ ಕೆಲಸ ಮಾಡಿಲ್ಲ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿ​ದ್ದಾರೆ.

ಶನಿವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣದ ಜತೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷಾಂತರ ರು. ದುಡ್ಡಿನ ಡಿಮ್ಯಾಂಡ್‌​ನಿಂದ ಬಿಜೆಪಿ ಜಿಪಂ ಸದಸ್ಯ ಬಿಂದುರಾಯಗೌಡ ಪಾಟೀಲ ಬೇಸತ್ತಿದ್ದರು. ಬಿಜೆಪಿ ಮಹಿಳಾ ಜಿಪಂ ಸದಸ್ಯರನ್ನು ಕಡೆಗಣಿಸಲಾಗಿತ್ತು. ಈ ಬಗ್ಗೆ ಸ್ವತಃ ಬಿಜೆಪಿ ಸದಸ್ಯರೇ ಬಹಿರಂಗವಾಗಿ ಹೇಳಿರುವ ವೀಡಿಯೋ ಕ್ಲಿಪಿಂಗ್‌ನ್ನು ಪ್ರದರ್ಶಿಸುವ ಮೂಲಕ ಕಳ್ಳಿಮನಿ ಅವರು ಬಿಜೆಪಿ ವಿರುದ್ಧ ಆರೋಪಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಬಗೆದು ಜಿಪಂ ಸದಸ್ಯತ್ವ ಸ್ಥಾನಕ್ಕೆ ಉಮೇಶ ಕೋಳಕೂರ ನೀಡಿ​ರುವ ರಾಜೀನಾಮೆ ಅಂಗೀಕಾರವಾಗಲಿದೆ. ಚುನಾವಣೆ ಹಿಂದಿನ ದಿನದ ರಾತ್ರಿವರೆಗೆ ನಮ್ಮ ಜತೆಯೇ ಇದ್ದು, ಚುನಾವಣೆ ದಿನ ದಿಢೀರ್‌ನೆ ಬಿಜೆಪಿಗೆ ಬೆಂಬಲಿಸಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಉಮೇಶ ಕೋಳಕೂರ, ಶಿವಯೋಗೇಪ್ಪ ನೇದಲಗಿ ಅವರು ಕಾಂಗ್ರೆಸ್‌ ಪಕ್ಷದಲ್ಲಿಯೇ ಅಧಿಕಾರ ಅನುಭವಿಸಿ ಪಕ್ಷ ದ್ರೋಹ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.

ಫಲಿಸದ ಬಿಜೆಪಿ ರಣತಂತ್ರ: ಕಾಂಗ್ರೆಸ್‌ಗೆ ಒಲಿದ ಅದೃಷ್ಟ

ಬಿಜೆಪಿ ಸದಸ್ಯರ ಬೆಂಬಲ ಪಡೆದು ಕಾಂಗ್ರೆಸ್‌ ಅಧಿಕಾರ ಗದ್ದುಗೆ ಹಿಡಿಯಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಕಳ್ಳಿಮನಿ, ಬಿಜೆಪಿಯಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದಾಗಿಯೇ ಅಲ್ಲಿನ ಸದಸ್ಯರು ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಬಿಂದುರಾಯ ಪಾಟೀಲರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಲಕ್ಷಾಂತರ ರು. ಡಿಮ್ಯಾಂಡ್‌ ಮಾಡಿರುವುದು ಈಗಾಗಲೇ ಬಹಿರಂಗಗೊಂಡಿದೆ ಎಂದು ಈ ಕುರಿತಾದ ವೀಡಿಯೋವೊಂದನ್ನು ಸಹ ಪ್ರದರ್ಶಿಸಿದರು.
ಅದೇ ತೆರನಾಗಿ ಬಿಜೆಪಿ ಜಿಪಂ ಸದಸ್ಯೆ ಜ್ಯೋತಿ ಅಸ್ಕಿ ಅವರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಅವರಿಗೆ ಅಧ್ಯಕ್ಷ ಸ್ಥಾನ ಕೊಡಲಿಲ್ಲ, ಮಹಿಳೆಯರಿಗೆ ಬಿಜೆಪಿಯಲ್ಲಿ ಪ್ರಾತಿನಿಧ್ಯವೇ ಇಲ್ಲದ ಕಾರಣದಿಂದಾಗಿ ಅವರು ಪಕ್ಷದಿಂದ ಹೊರ ಬಂದಿದ್ದಾರೆ. ಅದೇ ತೆರನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಾಂತಗೌಡ ಪಾಟೀಲರಿಗೆ ಅಲ್ಲಿನ ಮಾಜಿ ಶಾಸಕ ರಮೇಶ ಭೂಸನೂರ ಪ್ರತಿ ಹಂತದಲ್ಲೂ ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ಅವರು ಬೇಸತ್ತು ಅಭಿವೃದ್ಧಿಗಾಗಿ ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದರು.

ಇದು ಜವಾಬ್ದಾರಿ:

ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ತಾನು ಒಂದು ಅಧಿಕಾರವೆಂದು ಭಾವಿಸಿಲ್ಲ. ಅದೊಂದು ಗುರುತರ ಜವಾಬ್ದಾರಿ ಎಂದು ತಿಳಿದು ಕಾರ್ಯ ನಿರ್ವಹಿಸುತ್ತೇನೆ. ಕೊರೋನಾ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಅನಿರೀಕ್ಷಿತವಾಗಿ ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸ​ಲಾ​ಗು​ತ್ತಿದೆ. ಕೊರೋನಾ ಚಿಕಿತ್ಸೆಗೆ ಅಗತ್ಯದ ವ್ಯವಸ್ಥೆ ಮಾಡಿದ ಬಗ್ಗೆ ಪರಿಶೀಲಿಸ​ಲಾ​ಗು​ತ್ತಿದೆ. ಈಗಾಗಲೇ ಹಲವು ಸಲ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕೊರೋನಾ ಎದುರಿಸಲು ಅಗತ್ಯದ ಸಿದ್ಧತೆ ಮಾಡಿಕೊಳ್ಳಲು ಸೂಚಿಸ​ಲಾ​ಗಿದೆ. ನಂತರ ಬರುವ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿ​ದರು.

ಚಡಚಣ ಭಾಗದಲ್ಲಿ ಕೋವಿಡ್‌ ಕೇಂದ್ರಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ಜಿಪಂ ಕಚೇರಿಗೆ ಅಧಿಕಾರಿಗಳನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸೂಚಿಸಿದ್ದೇವೆ. ಸಮಸ್ಯೆ ಇದ್ದರೆ ನನಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಚಿಕಿತ್ಸೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ರೋಗಿಗಳ ಚಿಕಿತ್ಸೆಗೆ ನಿರಾಕರಿಸುವ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದರು.

ಶಾಸಕರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಸಿ.ಎಸ್‌. ನಾಡಗೌಡ ಅಪ್ಪಾಜಿ, ಪಕ್ಷದ ಜಿಲ್ಲಾಧ್ಯಕ್ಷ ರಾಜು ಆಲಗೂರ ಸೇರಿದಂತೆ ಅನೇಕ ಹಿರಿಯ ನಾಯಕರ ಆಶೀರ್ವಾದ ಹಾಗೂ ಕಾರ್ಯಕರ್ತರ ಶುಭ ಹಾರೈಕೆಯ ಫಲವಾಗಿ ನಾನು ಅಧ್ಯಕ್ಷ ಸ್ಥಾನ ಗದ್ದುಗೆ ಏರಿದ್ದೇನೆ ಎಂದರು. ಪಕ್ಷದ ಮುಖಂಡರಾದ ಅಬ್ದುಲ್‌ಹಮೀದ್‌ ಮುಶ್ರೀಫ್‌, ಡಾ. ಗಂಗಾಧರ ಸಂಬಣ್ಣಿ, ಸಂಗಮೇಶ ಬಬಲೇಶ್ವರ, ಸೋಮನಾಥ ಕಳ್ಳಿಮನಿ ಇತರರು ಇದ್ದರು.