ವಿಜಯಪುರದ ಮುಳವಾಡದಲ್ಲಿ ₹1,600 ಕೋಟಿ ವೆಚ್ಚದ ರಿಲಯನ್ಸ್‌ನ ಕ್ಯಾಂಪಾ ಕೋಲಾ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಇದರಿಂದ 5,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದ್ದು, ಸ್ಥಳೀಯರಿಗೆ ಮತ್ತು ಜಮೀನು ನೀಡಿದ ರೈತರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲು ಸೂಚಿಸಲಾಗಿದೆ.

ವಿಜಯಪುರ (ನ.16): ಐತಿಹಾಸಿಕ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿಯ ನವಯುಗ ಆರಂಭವಾಗಿದೆ. ನಗರದ ಹೊರವಲಯದಲ್ಲಿರುವ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ 109 ಎಕರೆ ವಿಸ್ತಾರದಲ್ಲಿ, ಬರೋಬ್ಬರಿ ₹1,600 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ನಿರ್ಮಾಣವಾಗಲಿರುವ ರಿಲಯನ್ಸ್ ಸಮೂಹದ ಪ್ರತಿಷ್ಠಿತ 'ಕ್ಯಾಂಪಾ ಕೋಲಾ' (Campa Cola) ತಂಪು ಪಾನೀಯ ತಯಾರಿಕಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

5,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ; ರೈತ ಕುಟುಂಬಗಳಿಗೆ ಮೊದಲ ಆದ್ಯತೆ:

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, 'ಕ್ಯಾಂಪಾ ಕೋಲಾ ಘಟಕದ ಸ್ಥಾಪನೆಯಿಂದ 2,000 ನೇರ ಹಾಗೂ ಪರೋಕ್ಷವಾಗಿ 3,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ರಿಲಯನ್ಸ್ ಕಂಪನಿಯು ಮೊದಲು ಭೂಮಿ ಕಳೆದುಕೊಂಡ ಸಂತ್ರಸ್ತ ರೈತ ಕುಟುಂಬಗಳ ಸದಸ್ಯರಿಗೆ ಖಾಯಂ ಉದ್ಯೋಗ ನೀಡಬೇಕು. ಬಳಿಕ 25 ಕಿ.ಮೀ. ವ್ಯಾಪ್ತಿಯ ಅರ್ಹರಿಗೆ ಹಾಗೂ ಜಿಲ್ಲೆಯ ಪ್ರತಿಭಾವಂತರಿಗೆ ಆದ್ಯತೆ ಕೊಡಬೇಕು. ವಿಶೇಷವಾಗಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ.100ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ಕಡ್ಡಾಯವಾಗಿ ನೀಡಬೇಕು' ಎಂದು ಕಂಪನಿಗೆ ಸೂಚನೆ ನೀಡಿದರು.

ಬಾರಾಮತಿ ಮಾದರಿಯಲ್ಲಿ ವಿಜಯಪುರ ಅಭಿವೃದ್ಧಿ

"ಮಹಾರಾಷ್ಟ್ರದ ಬಾರಾಮತಿಯಲ್ಲಿ ಶರದ್ ಪವಾರ್ ಅವರು ನೀರಾವರಿ, ಹೈನುಗಾರಿಕೆ ಹಾಗೂ ಕೈಗಾರಿಕೆಯನ್ನು ಸಮಾನವಾಗಿ ಬೆಳೆಸಿದ್ದಾರೆ. ಅದೇ ಮಾದರಿಯಲ್ಲಿ ಮುಂಬರುವ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯೂ ಸಮಗ್ರ ಅಭಿವೃದ್ಧಿ ಹೊಂದಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಮುಳವಾಡದಲ್ಲಿ 2009ರಲ್ಲೇ ಸಾವಿರಾರು ಎಕರೆ ಭೂಸ್ವಾಧೀನವಾಗಿದ್ದರೂ ಒಂದೇ ಒಂದು ಕೈಗಾರಿಕೆ ಬಂದಿರಲಿಲ್ಲ. ತಾವು ಸಚಿವರಾದ ಬಳಿಕ ಕಳೆದ ಮೂರು ವರ್ಷಗಳಿಂದ ನಡೆಸಿದ ನಿರಂತರ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ ಎಂದರು.

ಹರಿದುಬರಲಿವೆ ದಿಗ್ಗಜ ಕಂಪನಿಗಳು; ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ:

ಕ್ಯಾಂಪಾ ಕೋಲಾ ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಹಿಂದೂಸ್ಥಾನ್ ಕೋಕಾ-ಕೋಲಾ, ವಿಂಗ್ಸ್ ವಿಟೇರಾ, ಹೈಟೆಕ್ ಫೈಬ್ಸ್, ಬ್ಯಾಟರಿ ಉತ್ಪಾದನಾ ಕ್ಷೇತ್ರದ ಸರ್ವರ್ ಟೆಕ್ ಪವರ್ ಸಿಸ್ಟಂ, ಮೆಟಾಗ್ರೂಪ್ ಹಾಗೂ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಟೋನ್ಬೋ ಇಮೇಜಿಂಗ್ ಸೇರಿದಂತೆ ಹಲವು ದಿಗ್ಗಜ ಕಂಪನಿಗಳು ಜಿಲ್ಲೆಯಲ್ಲಿ ಹೂಡಿಕೆ ಮಾಡಲಿವೆ ಎಂದು ಪಾಟೀಲ ತಿಳಿಸಿದರು. ಜಿಲ್ಲೆಯಲ್ಲಿ ಈಗ ನೀರಾವರಿ ಸೌಲಭ್ಯ ಸಮೃದ್ಧವಾಗಿದ್ದು, ದಾಳಿಂಬೆ, ನಿಂಬೆ ಮತ್ತು ದ್ರಾಕ್ಷಿಯಂತಹ ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ತೊಟ್ಟಿಲಾಗಿದೆ. ರಿಲಯನ್ಸ್ ಕಂಪನಿಯು ಇದನ್ನು ಸದುಪಯೋಗಪಡಿಸಿಕೊಂಡು ಆಹಾರ ಸಂಸ್ಕರಣಾ ಘಟಕವನ್ನೂ ಆರಂಭಿಸಬೇಕು, ಕಚ್ಚಾವಸ್ತುವಿನ ಕೊರತೆಯಾಗದಂತೆ ನಮ್ಮ ರೈತರು ಬೆಳೆ ಬೆಳೆಯಲು ಸಿದ್ಧರಿದ್ದಾರೆ ಎಂದು ಭರವಸೆ ನೀಡಿದರು. ಅಲ್ಲದೆ, ಬಂಡವಾಳ ಹೂಡಿಕೆ ಕೇವಲ ಬೆಂಗಳೂರಿಗೆ ಸೀಮಿತವಾಗದೆ ಉತ್ತರ ಕರ್ನಾಟಕದಂತಹ ಪ್ರದೇಶಗಳಿಗೂ ವಿಸ್ತರಣೆಯಾಗಬೇಕು ಎಂದು ತಿಳಿಸಿದರು.