ವಿಜಯಪುರದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹುಚ್ವಪ್ಪ ಶಿಂಗೆಗೋಳ ಅವರ ನಿವಾಸ, ಕಚೇರಿ ಮತ್ತು ತೋಟದ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ವಿವಿಧ ಸ್ಥಳಗಳಲ್ಲಿ ಆಸ್ತಿ ಮತ್ತು ಮಹತ್ವದ ದಾಖಲಾತಿಗಳ ತೀವ್ರ ಪರಿಶೀಲನೆ ಮುಂದುವರಿದಿದೆ.
ವಿಜಯಪುರ (ನ.26): ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹುಚ್ವಪ್ಪ ಶಿಂಗೆಗೋಳ ಅವರಿಗೆ ಸಂಬಂಧಿಸಿದ ನಿವಾಸಗಳು, ಕಚೇರಿ ಹಾಗೂ ತೋಟದ ಮನೆ ಮೇಲೆ ವಿಜಯಪುರ ಜಿಲ್ಲಾ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ದಾಖಲಾತಿಗಳ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಎಸ್ಪಿ ಮಹಾನಿಂಗರಾಯ ನಂದಗಾವಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸಿಪಿಐ ಆನಂದ ಟಕ್ಕಣ್ಣವರ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ವಿವಿಧ ತಂಡಗಳಲ್ಲಿ ದಾಳಿಯಲ್ಲಿ ಭಾಗಿಯಾಗಿದ್ದಾರೆ.
ದಾಳಿ ನಡೆದ ಸ್ಥಳಗಳು
ಸುಕೂನ್ ಕಾಲೋನಿ ನಿವಾಸ: ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರುವ ಅಧಿಕಾರಿಯ ನಿವಾಸದಲ್ಲಿ ಪರಿಶೀಲನೆ.
ಚಾಲುಕ್ಯ ನಗರ ನಿವಾಸ: ನಗರದ ಚಾಲುಕ್ಯ ನಗರದಲ್ಲಿರುವ ನಿವಾಸದಲ್ಲೂ ಅಧಿಕಾರಿಗಳಿಂದ ಶೋಧ.
ಹಿಟ್ನಳ್ಳಿ ಕಚೇರಿ: ಹಿಟ್ನಳ್ಳಿಯಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದ ಕಚೇರಿಯಲ್ಲಿ ದಾಖಲೆಗಳ ತಪಾಸಣೆ.
ಪಡಗಾನೂರು ತೋಟದ ಮನೆ: ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದಲ್ಲಿರುವ ತೋಟದ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ.
ಮುಂದುವರಿದ ಪರಿಶೀಲನೆ
ಎಲ್ಲಾ ಸ್ಥಳಗಳಲ್ಲಿಯೂ ಆಸ್ತಿ, ಹಣಕಾಸು ಹಾಗೂ ಇತರ ಮಹತ್ವದ ದಾಖಲಾತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ. ಆದರೆ, ಈವರೆಗೆ ಏನೇನು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.
















