ವಿಜಯಪುರ: ಸರ್ಕಾರಿ ಸಭೆ-ಸಮಾರಂಭಕ್ಕೆ ಹಾರ-ಶಾಲು, ಸನ್ಮಾನಕ್ಕೆ ಬ್ರೇಕ್, ಡಿಸಿ ಖಡಕ್ ಸೂಚನೆ..!
ಸುತ್ತೋಲೆ ಹೊರಡಿಸಿದ ಬಳಿಕವೂ ಕೆಲವೆಡೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಶಾಲು, ಕಾಣಿಕೆ ನೀಡುವ ಪ್ರಕ್ರಿಯೆ ಮುಂದುವರೆದಿದ್ದವು. ಇದನ್ನ ಗಮನಿಸಿದ ಜಿಲ್ಲಾಧಿಕಾರಿ ಟಿ ಭೂಬಾಲನ್ ಈಗ ಮತ್ತೆ ಖಡಕ್ ಸಂದೇಶವನ್ನ ಸರ್ಕಾರಿ ಕಚೇರಿಗಳು, ಅಧಿಕಾರಿ ವಲಯ, ಸಿಬ್ಬಂದಿ, ಶಾಲೆಗಳಿಗೆ ಹೊರಡಿಸಿದ್ದಾರೆ.
-ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಜು.25): ಯಾವುದೇ ಸರ್ಕಾರಿ ಸಮಾರಂಭಗಳಲ್ಲಿ ಹಾರ, ಶಾಲು ಮತ್ತು ತುರಾಯಿ ಇತ್ಯಾದಿ ವಸ್ತುಗಳಿಂದ ಸನ್ಮಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿರುವುದರಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಆದೇಶ ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಕೆ.ಸಿ.ಎಸ್.ಆರ್. 1957ರನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಖಡಕ್ ಸಂದೇಶ ನೀಡಿದ್ದಾರೆ.
ಇನ್ಮುಂದೆ ಹಾರ, ತುರಾಯಿಗೆ ಬ್ರೇಕ್..!
ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲಿ ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಮತ್ತು ಇತರೆ ಸರ್ಕಾರಿ ಸಮಾರಂಭಗಳಲ್ಲಿ ಅನಗತ್ಯವಾಗಿ ಹಣ ಖರ್ಚು ಮಾಡಲಾಗುತ್ತೆ. ಇದಕ್ಕೆ ಕೊಕ್ಕೆ ಹಾಕಲು ಜಿಲ್ಲಾಧಿಕಾರಿಗಳು ತೀರ್ಮಾನಿಸಿದ್ದಾರೆ. ಶಾಲಾ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ಶಾಲು, ನೆನಪಿನ ಕಾಣಿಕೆಗಳನ್ನು ಕೊಟ್ಟು ಸನ್ಮಾನಿಸುವುದು ವಾಡಿಕೆಯಾಗಿತ್ತು. ಇದರಿಂದ ಹಣ, ಸಮಯ ವ್ಯರ್ಥವೇ ಹೊರತು ಮತ್ತೇನು ಲಾಭವಿರಲಿಲ್ಲ. ಹೀಗಾಗಿ ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ ವ್ಯರ್ಥ ಖರ್ಚಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಶಾಲಾ ಕಾರ್ಯಕ್ರಮಗಳಲ್ಲಿ ಶಾಲು, ತುರಾಯಿ ಅದ್ದೂರಿ ಸನ್ಮಾನ ಮಾಡದಂತೆ ತಾಕೀತು ಮಾಡಿದ್ದಾರೆ.
ವಿಜಯಪುರ: ಕುರಿ ಮರಿ ರಕ್ಷಿಸಿ ತಾನು ನೀರಲ್ಲಿ ಮುಳುಗಿ ಅಸುನೀಗಿದ..!
ಈ ಹಿಂದೆ ಸೂಚನೆ ನೀಡಿದ್ದ ಸ್ವತಃ ಉಸ್ತುವಾರಿ ಮಂತ್ರಿಗಳು.!
ಶಾಲಾ ಕಾರ್ಯಕ್ರಮಗಳಲ್ಲಿ, ಅಥವಾ ಸರ್ಕಾರಿ ಕಚೇರಿಗಳಿಗೆ ಗಣ್ಯರ ಭೇಟಿ ವೇಳೆ ಅದ್ದೂರಿ ಸನ್ಮಾನ, ಸ್ವಾಗತದಿಂದ ಸಮಯದ ವ್ಯರ್ಥ ಹಾಗೂ ಅನಗತ್ಯ ಖರ್ಚು. ಇದನ್ನ ಅರಿತ ಸಚಿವ ಎಂ.ಬಿ. ಪಾಟೀಲರು ಶಾಲ ತೂರಾಯಿ ಬದಲಾಗಿ ಕಾಣಿಕೆಗಳಿಗೆ ತಗಲುವ ಮೊತ್ತದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ಶೈಕ್ಷಣಿಕ ವಸ್ತುಗಳನ್ನು ನೀಡುವುದು ಸೂಕ್ತ ಎಂದಿದ್ದರು. ಈ ಬಗ್ಗೆ ಈಗಾಗಲೇ ನಿರ್ದೇಶನವನ್ನು ನೀಡಿದ್ದರು. ಹೀಗಾಗಿ ಈ ನಿರ್ದೇಶನವನ್ನ ಕಟ್ಟು ನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಈಗ ಖಡಕ್ಕಾಗಿ ಸೂಚನೆ ನೀಡಿದ್ದಾರೆ.
ಹೂಗುಚ್ಚ ಬದಲಿಗೆ ಬುಕ್ಸ್ ನೀಡಿ..!
ಈ ಹಿಂದೆ ಸಭೆಯೊಂದರಲ್ಲಿ ಸಚಿವ ಎಂಬಿ ಪಾಟೀಲ ಮೇಲಾಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನೀಡಿದಾಗ ಅಥವಾ ಅಧಿಕಾರಿ-ನೌಕರರು ಮೇಲಾಧಿಕಾರಿಗಳನ್ನು ಭೇಟಿಯಾಗಲು ಕಚೇರಿಗೆ ಬಂದಾಗ ಹೂಗುಚ್ಛ, ಹಾರ, ಹಣ್ಣಿನ ಬುಟ್ಟಿ, ಶಾಲು ಬದಲಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಪುಸ್ತಕ, ಬುಕ್ ನೀಡಲು ಈಗಾಗಲೇ ಸೂಚನೆ ನೀಡಿದ್ದರು. ಜೊತೆಗೆ ಸಾಮಾನ್ಯ ಜ್ಞಾನ, ಮಹಾನ್ ಪುರುಷರ, ಸ್ವತಂತ್ರ ಹೋರಾಟಗಾರರ, ವಿಜ್ಞಾನಿಗಳ, ಎನ್ ಸೈಕ್ಲೋಪೀಡಿಯಾ, ನಿಘಂಟು ಇತ್ಯಾದಿ ಪುಸ್ತಕಗಳನ್ನು ನೀಡಿ ಅಧಿಕಾರಿಗಳನ್ನು ಗೌರವಿಸುವಂತೆ ಸೂಚಿಸಿದ್ದರು. ಬಳಿಕ ಸಂಗ್ರಹವಾದ ನೋಟ್ ಬುಕ್ ಹಾಗೂ ಪುಸ್ತಕಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲು ಸುತ್ತೋಲೆ ಹೊರಡಿಸಿ ತಿಳಿಸಲಾಗಿತ್ತು.
ವಿಜಯಪುರ: ಆಲಮಟ್ಟಿ ಡ್ಯಾಂಗೆ ಒಳಹರಿವು ಹೆಚ್ಚಳ, 2 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ, ಪ್ರವಾಹ ಭೀತಿ..!
ಸುತ್ತೋಲೆ ಪಾಲಿಸದವರಿಗೆ ಖಡಕ್ ಎಚ್ಚರಿಕೆ..!
ಹೀಗೆ ಸುತ್ತೋಲೆ ಹೊರಡಿಸಿದ ಬಳಿಕವೂ ಕೆಲವೆಡೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಶಾಲು, ಕಾಣಿಕೆ ನೀಡುವ ಪ್ರಕ್ರಿಯೆ ಮುಂದುವರೆದಿದ್ದವು. ಇದನ್ನ ಗಮನಿಸಿದ ಜಿಲ್ಲಾಧಿಕಾರಿ ಟಿ ಭೂಬಾಲನ್ ಈಗ ಮತ್ತೆ ಖಡಕ್ ಸಂದೇಶವನ್ನ ಸರ್ಕಾರಿ ಕಚೇರಿಗಳು, ಅಧಿಕಾರಿ ವಲಯ, ಸಿಬ್ಬಂದಿ, ಶಾಲೆಗಳಿಗೆ ಹೊರಡಿಸಿದ್ದಾರೆ.
ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ..!
ಇನ್ನೂ ಮುಂದೆ ಈ ಆದೇಶವನ್ನು ಕಡ್ಡಾಯಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ ಜಿಲ್ಲಾಧಿಕಾರಿಗಳು. ಸಾರ್ವಜನಿಕರು ಸಹ ಅಧಿಕಾರಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹಾರ, ಶಾಲು ಮತ್ತು ತುರಾಯಿಗಳ ಬದಲಾಗಿ ಕಲಿಕೆಗೆ ಪೂರಕವಾದ ವಸ್ತುಗಳನ್ನು ನೀಡುವ ಮೂಲಕ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲು ಮನವಿ ಮಾಡಿಕೊಂಡಿದ್ದಾರೆ.