Asianet Suvarna News Asianet Suvarna News

ವಿಜಯಪುರ: ಅತಂತ್ರ ಸ್ಥಿತಿಯಲ್ಲಿ ಪಾಲಿಕೆ ಸದಸ್ಯರು..!

ಫಲಿತಾಂಶ ಹೊರಬಿದ್ದು 25 ದಿನಗಳು ಗತಿಸಿದರೂ ಇನ್ನೂ ಚುನಾಯಿತ ಸದಸ್ಯರಿಗೆ ಅಧಿಕಾರ ಲಭಿಸಿಲ್ಲ. 

Vijayapura City Corporation Members in Precarious Position grg
Author
First Published Nov 25, 2022, 11:00 AM IST

ರುದ್ರಪ್ಪ ಆಸಂಗಿ

ವಿಜಯಪುರ(ನ.25):  ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಡೆದು ಪಾಲಿಕೆ ಸದಸ್ಯರು ಆಯ್ಕೆಯಾಗಿ ಒಂದು ತಿಂಗಳು ಸಮೀಪಿಸಿದರೂ ಇನ್ನು ಸದಸ್ಯರಿಗೆ ಅಧಿಕಾರವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದಕ್ಕೂ ಮುಂಚೆ ವಾರ್ಡ್‌ಗಳ ವಿಂಗಡಣೆ ತಕರಾರು ಕೋರ್ಟ್‌ ಮೆಟ್ಟಲೇರಿದ್ದರಿಂದಾಗಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ. ಅಕ್ಟೋಬರ್‌ 28ರಂದು ಪಾಲಿಕೆ ಆರಂಭವಾದ ನಂತರ ಪ್ರಪ್ರಥಮ ಚುನಾವಣೆ ನಡೆಯಿತು. ಅಕ್ಟೋಬರ್‌ 31ರಂದು ಫಲಿತಾಂಶ ಹೊರ ಬಿತ್ತು. ಬಿಜೆಪಿ- ಕಾಂಗ್ರೆಸ್‌ ಪಕ್ಷಗಳ ಮಧ್ಯೆ ತೀವ್ರ ಹಣಾಹಣಿ ನಡೆದು ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು.

ಬಿಜೆಪಿ-17, ಕಾಂಗ್ರೆಸ್‌-10, ಎಂಐಎಂ-2, ಪಕ್ಷೇತರರು-5, ಜೆಡಿಎಸ್‌-1 ಪಕ್ಷಗಳು ಆಯ್ಕೆಯಾಗಿವೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಹುತೇಕ ಹೊಸ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ ಫಲಿತಾಂಶ ಹೊರಬಿದ್ದು 25 ದಿನಗಳು ಗತಿಸಿದರೂ ಇನ್ನೂ ಚುನಾಯಿತ ಸದಸ್ಯರಿಗೆ ಅಧಿಕಾರ ಲಭಿಸಿಲ್ಲ. ಸರ್ಕಾರ ಈ ಚುನಾವಣೆಗೆ ಸಂಬಂಧಿಸಿದಂತೆ ನೊಟಿಫಿಕೇಶನ್‌ ಹೊರಡಿಸಬೇಕು. ಬೆಳಗಾವಿ ಆಯುಕ್ತರು ಮೇಯರ್‌, ಉಪ ಮೇಯರ್‌ ಚುನಾವಣೆ ನಡೆಸುವುದರ ಜೊತೆ ಜೊತೆಯಲ್ಲಿ ಚುನಾಯಿತ ಸದಸ್ಯರಿಗೆ ಅಧಿಕಾರ ವಹಿಸಿಕೊಡಬೇಕು. ಆದರೆ ಇನ್ನೂ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಿಲ್ಲ. ಹಾಗಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೇಯರ್‌, ಉಪ ಮೇಯರ್‌ ಚುನಾವಣೆಗೆ ದಿನಾಂಕ ನಿಗದಿ ಮಾಡುವಂತಿಲ್ಲ.

ವಿಜಯಪುರ: ಪೌರ ಕಾರ್ಮಿಕರ ಮಗಳು ಈಗ ಮಹಾನಗರ ಪಾಲಿಕೆ ಸದಸ್ಯೆ..!

ಮೇಯರ್‌, ಉಪ ಮೇಯರ್‌ ಮೀಸಲಾತಿ ಕೂಡಾ ಆಗಲೇ ಹೊರ ಬಿದ್ದಿದೆ. ಮೇಯರ್‌ ಸ್ಥಾನ 2ಎ ಮಹಿಳೆ, ಉಪ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದಾಗ್ಯೂ ಪಾಲಿಕೆಯ ಚುನಾಯಿತ ಸದಸ್ಯರಿಗೆ ಅಧಿಕಾರ ವಹಿಸಿ ಕೊಡಲು ವಿಳಂಬವಾಗುತ್ತಿರುವುದರ ಕಾರಣ ಇನ್ನೂ ಯಾರಿಗೂ ಗೊತ್ತಿಲ್ಲ ಸದಸ್ಯರು ಅಧಿಕಾರವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಕಾಲ ಕಳೆಯುವಂತಾಗಿದೆ.

ಚುನಾಯಿತ ಸದಸ್ಯರ ಮನೆ ಬಾಗಿಲಿಗೆ ಜನರು ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಪಾಲಿಕೆ ಸದಸ್ಯರಿಗೆ ಆಯ್ಕೆಯಾದ ಪ್ರಮಾಣ ಪತ್ರ ನೀಡಿದ್ದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಅಧಿಕಾರ ಇಲ್ಲ. ಮೇಯರ್‌, ಉಪ ಮೇಯರ್‌ ಚುನಾವಣೆ ಬಳಿಕವೇ ಅದೇ ದಿನ ನೂತನ ಸದಸ್ಯರಿಗೆ ಅಧಿಕಾರ ದೊರೆಯಲಿದೆ. ಆದರೆ ಶೀಘ್ರದಲ್ಲಿಯೇ ಮೇಯರ್‌, ಉಪ ಮೇಯರ್‌ ಚುನಾವಣೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ.ಹೀಗಾಗಿ ನಗರದಲ್ಲಿ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಂತಾಗಿವೆ.

ಅಧಿಕಾರವಿಲ್ಲದೆ ಪಾಲಿಕೆ ನೂತನ ಸದಸ್ಯರಿಗೆ ಯಾವುದೇ ಕೆಲಸ ಮಾಡಲು ಬರುವುದಿಲ್ಲ. ಈಗ ಪಾಲಿಕೆ ಸದಸ್ಯರಿಗೆ ಜನರನ್ನು ಸಮಾಧಾನ ಪಡಿಸಿ ಕಳಿಸುವುದು ಹರ ಸಾಹಸವಾಗಿದೆ. ಕಳೆದ ಮೂರು ವರ್ಷಗಳಿಂದ ಪಾಲಿಕೆಗೆ ಚುನಾವಣೆಯಿಲ್ಲದೆ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡು ನಗರವು ಸಮಸ್ಯೆಗಳ ಆಗರವಾಗಿತ್ತು. ಹೊಸದಾಗಿ ಪಾಲಿಕೆಗೆ ಚುನಾವಣೆ ನಡೆದಿದೆ. ಇನ್ನು ನಗರದ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡು ನಗರ ಸರ್ವಾಂಂಗ ಸುಂದರವಾಗುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ಜನರ ಈ ಭಾವನೆಗಳು ಹುಸಿಯಾಗಿ ಭ್ರಮ ನಿರಸನವಾಗಿವೆ.

ವಿಜಯಪುರ ಮಹಾನಗರ ಪಾಲಿಕೆ ಚುಕ್ಕಾಣಿ ಬಿಜೆಪಿಗೆ!?

ಮಹಾನಗರಪಾಲಿಕೆಗೆ ಚುನಾವಣೆ ನಡೆಯಿತು. ಇನ್ನು ನಮ್ಮ ಸಮಸ್ಯೆ ಹೇಳಿಕೊಳ್ಳಲು ಸದಸ್ಯರು ಇರುತ್ತಾರೆ ಎಂದು ಬಹಳ ಖುಷಿಯಾಗಿತ್ತು. ಆದರೆ ನೂತನ ಸದಸ್ಯರು ಚುನಾಯಿತರಾಗಿ 25 ದಿನಗಳು ಗತಿಸಿವೆ. ಆದರೂ ಅವರಿಗೆ ಅಧಿಕಾರವಿಲ್ಲ. ಸದಸ್ಯರು ನಮ್ಮ ಕೈಯಲ್ಲಿ ಇನ್ನು ಅಧಿಕಾರವಿಲ್ಲ. ಸ್ವಲ್ಪು ದಿನ ತಡೆದುಕೊಳ್ಳಬೇಕು. ಶೀಘ್ರದಲ್ಲಿಯೇ ನಿಮ್ಮ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ಭರವಸೆ ನೀಡುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಅಂತ ವಿಜಯಪುರ ನಿವಾಸಿ ಇಬ್ರಾಹಿಂ ಶಿವಣಗಿ ಹೇಳಿದ್ದಾರೆ.

ಸಾಹೇಬ್ರ... ಚುನಾಯಿತರಾಗಿ ಒಂದು ಕಡೆ ಸಂತೋಷವಾಗುತ್ತದೆ. ಇನ್ನೊಂದು ಕಡೆ ಮನಸಿಗೆ ಬೇಜಾರವಾಗುತ್ತದೆ. ಆಯ್ಕೆಯಾಗಿ 1 ತಿಂಗಳು ಸಮೀಪಿಸಿದರೂ ಇನ್ನುವರೆಗೆ ಮೇಯರ್‌, ಉಪ ಮೇಯರ್‌ ಚುನಾವಣೆ ನ‚ಡೆದಿಲ್ಲ. ನಮಗೆ ಅಧಿಕಾರವನ್ನು ನೀಡಿಲ್ಲ. ಇದರಿಂದಾಗಿ ಸಮಸ್ಯೆ ಹೇಳಿಕೊಂಡು ಮನೆ ಬಾಗಿಲಿಗೆ ಬರುವ ಜನರಿಗೆ ಉತ್ತರಿಸುವುದು ಬಹಳ ಕಷ್ಟವಾಗಿದೆ ಅಂತ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ತಿಳಿಸಿದ್ದಾರೆ. 
 

Follow Us:
Download App:
  • android
  • ios