ಸನಾತನ ಉಳಿದರೆ ಮಾತ್ರ ಹಿಂದೂ, ದಲಿತರು ಉಳಿಯಲು ಸಾಧ್ಯ: ಯತ್ನಾಳ
ಈ ಹಿಂದೆ ಮೀಡಿಯಾ ಎಡ ಪಂಥೀಯ ಸಿದ್ಧಾಂತದವರ ಕೈಯಲ್ಲಿತ್ತು. ಮೋದಿ ಬೆಂಬಲಿಸುವ ಮಾಧ್ಯಮಗಳಿಗೆ ಮೋದಿ ಮೀಡಿಯಾ ಎನ್ನುತ್ತಿದ್ದಾರೆ. 14 ನಿರೂಪಕರನ್ನು ಇಂಡಿಯಾ ಅಲೈನ್ಸ್ ನಿಷೇಧಿಸಿರುವುದು ಏಕೆ ಎಂದು ಪ್ರಶ್ನಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ.
ವಿಜಯಪುರ(ಸೆ.17): ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಶ್ವಾಸ ವ್ಯಕ್ತಪಡಿಸಿದರು. ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿರೋಧಿಗಳ ಪೋಸ್ಟ್‌ಗೆ ಅಲ್ಲಿಯೇ ಕಾಮೆಂಟ್ ಮಾಡಿ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.
ಹಿಂದೂ ಸನಾತನ ಧರ್ಮ ಕಾಗೆ ಇದ್ದ ಹಾಗೆ ಎಂದು ಪ್ರಕಾಶ ರಾಜ್ ಹೇಳಿದ್ದ. ಅದಕ್ಕೆ ಪ್ರಕಾಶ ರಾಜ್ ಹಂದಿ ಎಂದು ನಾನು ಉತ್ತರ ಕೊಟ್ಟಿದ್ದೆ. ನೀವು ಕೂಡ ಸುಖಾ ಸುಮ್ಮನೆ ಮಾತನಾಡದೇ ತಕ್ಕ ಉತ್ತರ ನೀಡಬೇಕು ಎಂದರು.
ಈ ಹಿಂದೆ ಮೀಡಿಯಾ ಎಡ ಪಂಥೀಯ ಸಿದ್ಧಾಂತದವರ ಕೈಯಲ್ಲಿತ್ತು. ಮೋದಿ ಬೆಂಬಲಿಸುವ ಮಾಧ್ಯಮಗಳಿಗೆ ಮೋದಿ ಮೀಡಿಯಾ ಎನ್ನುತ್ತಿದ್ದಾರೆ. 14 ನಿರೂಪಕರನ್ನು ಇಂಡಿಯಾ ಅಲೈನ್ಸ್ ನಿಷೇಧಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಸನಾತನ ಉಳಿದರೆ ಮಾತ್ರ ಹಿಂದುಗಳು, ದಲಿತರು ಹಾಗೂ ಸಂವಿಧಾನ ಉಳಿಯಲು ಸಾಧ್ಯ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಮನುವಾದ ಮತ್ತು ಮನುಸ್ಮೃತಿ ಬಗ್ಗೆ ಚರ್ಚೆ ಮಾಡುತ್ತಾರೆ. ನಾವು ಎಂದಾದರೂ ಮನುಸ್ಮೃತಿ ಬಗ್ಗೆ ಚರ್ಚೆ ಮಾಡಿದ್ದೇವಾ? ನಾವು ಸಂವಿಧಾನ ಬದಲು ಮಾಡುವುದಾಗಿಯೂ ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.
ಚೈತ್ರಾ ಕುಂದಾಪುರಳಿಂದ ಕೋಟಿ ರೂ. ಕೇಳಿದ್ರಾ ಬಿಜೆಪಿ ಸಂಸದ?
ಮೀಸಲಾತಿ ಪ್ರಮಾಣ ಹೆಚ್ಚು ಮಾಡಿದ್ದೇ ಬಿಜೆಪಿ. ಕಾಂಗ್ರೆಸ್ಸಿನವರು ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲ. ಅವರು ನಿಧನರಾದಾಗ ಅಂತ್ಯಕ್ರಿಯೆಗೂ ಜಾಗ ನೀಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕೇಸರಿ ಪಡೆ ರಣತಂತ್ರ ರೂಪಿಸಿದೆ. ಬಿಜೆಪಿ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಅಹೋರಾತ್ರಿ ಶ್ರಮಿಸಬೇಕು ಎಂದು ಕರೆ ನೀಡಿದ ಅವರು, ಸಾಮಾಜಿಕ ಜಾಲತಾಣಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳು ನೈಜ ಸುದ್ದಿ ಬಿತ್ತರಿಸಬೇಕು ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೀವಂತ ಸಿದ್ದರಾಮಯ್ಯ ಬಂದರೂ ಬಿಜೆಪಿಗೆ ಸೇರಿಸಲ್ಲ: ಯತ್ನಾಳ
ಮಾತನಾಡದ ಜಿಗಜಿಣಗಿ-ಯತ್ನಾಳ
ಬಿಜೆಪಿ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅಕ್ಕ ಪಕ್ಕದಲ್ಲಿಯೇ ವೇದಿಕೆ ಹಂಚಿಕೊಂಡರು. ಆದರೂ ಇಬ್ಬರೂ ಒಬ್ಬರನೊಬ್ಬರು ಮಾತನಾಡದೇ ಹಾಗೇ ಕುಳಿತಿದ್ದರು. ಜಿಗಜಿಣಗಿ, ಯತ್ನಾಳ ಒಂದೇ ಪಕ್ಷದವರಾಗಿದ್ದರೂ ಆಗಾಗ ಒಬ್ಬರ ಮೇಲೆ ಒಬ್ಬರು ಟೀಕೆ, ಟಿಪ್ಪಣೆ ಮಾಡುತ್ತಿರುತ್ತಾರೆ. ಆದರೆ ಇಂದು ಸಮಾರಂಭದ ವೇದಿಕೆಯಲ್ಲಿ ಅಕ್ಕ ಪಕ್ಕದಲ್ಲಿ ಕುಳಿತರೂ ಸೌಜನ್ಯಕಾಗಿಯೂ ಇಬ್ಬರು ಮಾತನಾಡಲಿಲ್ಲ.
ಕಾರ್ಯಕ್ರಮದ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಜಿಗಜಿಣಗಿ, ಶಾಸಕ ಯತ್ನಾಳ ಅವರು ನನ್ನ ಸ್ನೇಹಿತರು. ಅವರು ನನ್ನ ಪಕ್ಕದಲ್ಲಿಯೇ ವೇದಿಕೆಯಲ್ಲಿ ಕುಳಿತಿದ್ದರು. ನಾವಿಬ್ಬರು ಚೆನ್ನಾಗಿಯೇ ಇದ್ದೇವೆ. ಇದಕ್ಕೆ ಬಣ್ಣ ಬಳೆಯುವುದು ಸರಿಯಲ್ಲ ಎಂದು ಮಾಧ್ಯಮದವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.