ವಿಜಯಪುರಕ್ಕೆ ಲಗ್ಗೆ ಇಟ್ಟಿದೆ ಹಳದಿ ಕಲ್ಲಂಗಡಿ, ತೈವಾನ್ ತಳಿ ಬೆಳೆದು ಯಶಸ್ಸು ಕಂಡ ಉಮೇಶ ಕಾರಜೋಳ!
ಕಲ್ಲಂಗಡಿ ಹಣ್ಣು ಹೇಗಿರುತ್ತೆ ಅಂತಾ ಕೇಳಿದ್ರೆ ಥಟ್ ಅಂತಾ ಬರುವ ಉತ್ತರ ಕೆಂಪು ಅಂತಾ. ಆದ್ರೆ ಗುಮ್ಮಟನಗರಿ ವಿಜಯಪುರದಲ್ಲಿ ರಾಜಕೀಯ ಮುಖಂಡರೊಬ್ಬರು ಹಳದಿ ಕಲ್ಲಂಗಡಿ ಬೆಳೆದು ಯಶಸ್ಸು ಕಂಡಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.31): ಕಲ್ಲಂಗಡಿ ಹಣ್ಣು ಹೇಗಿರುತ್ತೆ ಅಂತಾ ಕೇಳಿದ್ರೆ ಥಟ್ ಅಂತಾ ಬರುವ ಉತ್ತರ ಕೆಂಪು ಅಂತಾ. ಆದ್ರೆ ಗುಮ್ಮಟನಗರಿ ವಿಜಯಪುರದಲ್ಲಿ ರಾಜಕೀಯ ಮುಖಂಡರೊಬ್ಬರು ಹಳದಿ ಕಲ್ಲಂಗಡಿ ಬೆಳೆದು ಯಶಸ್ಸು ಕಂಡಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಉಮೇಶ್ ಕಾರಜೋಳ ಅವರು ನಗರದ ಹೊರವಲಯದ ಜುಮನಾಳದಲ್ಲಿರುವ ತಮ್ಮ ಜಮೀನಿನಲ್ಲಿ ಪ್ರಾಯೋಗಿಕವಾಗಿ ಕೆಲ ವಿಶೇಷ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದಾರೆ. ಅದರಲ್ಲಿ ಹಳದಿ ತಿರುಳಿನ ಈ ಕಲ್ಲಂಗಡಿ ತಳಿಯ ಹೆಸರು ಆರೋಹಿಯಾಗಿದೆ. ಈಗಾಗಲೆ ಕಟಾವು ಕಾರ್ಯವನ್ನು ಮುಗಿಸಿದ್ದು, ಹಣ್ಣಿನ ಮಾರಾಟದ ಬಗ್ಗೆ ಕುತೂಹಲ ಮನೆ ಮಾಡಿದೆ.
ಅಚ್ಚರಿ ಮೂಡಿಸಿದ ಕಲ್ಲಂಗಡಿ ಬಣ್ಣ!
ಬೇಸಿಗೆ ಬಂತು ಅಂದ್ರೆ ಮೊದಲು ನೆನಪಾಗೋದು ಕಲ್ಲಂಗಡಿ ಹಣ್ಣು. ಅದ್ರಲ್ಲೂ ವಿಜಯಪುರದ ಗಲ್ಲಿಗಲ್ಲಿಗಳಲ್ಲಿ ಕಲ್ಲಂಗಡಿ ಹಣ್ಣಿನ ರಾಶಿ ಮಾರೋಕೆ ಬಂದಿರುತ್ತೆ. ಎಷ್ಟು ಸವಿದರೂ ಸಾಲದು ಎನ್ನುವಂತೆ ಎಲ್ರೂ ಖುಷಿಯಿಂದ ಕಲ್ಲಂಗಡಿ ಹಣ್ಣನ್ನು ಕೊಳ್ಳುವವರೇ, ತಿನ್ನುವವರೇ. ಆದ್ರೆ ಈ ಸಲ ನಗರದ ಜನ ಇವ್ರು ಬೆಳೆದ ಕಲ್ಲಂಗಡಿ ಹಣ್ಣನ್ನು ಸ್ವಲ್ಪ ವಿಶೇಷ ಆಸಕ್ತಿ ಇಂದಲೇ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಈ ಬಾರಿ ಕಲ್ಲಂಗಡಿ ಹಣ್ಣಿನ ಬಣ್ಣ ಬದಲಾಗಿದೆ. ಆಶ್ಚರ್ಯ ಆಯ್ತಾ? ಇದು ಸತ್ಯ.
ಹೊರಗೆ ಹಸಿರು ಬಣ್ಣ ಇರೋ ಈ ಹಣ್ಣು ಕೊಯ್ದಾಗ ಒಳಗೆ ಕೆಂಪು ಬಣ್ಣದ ರಸಭರಿತವಾದ ತಿರುಳು ಹೊಂದಿರುತ್ತೆ. ಇದರಲ್ಲಿ ಸಾಕಷ್ಟು ಕಪ್ಪು ಬಣ್ಣದ ಬೀಜಗಳಿದ್ದರೂ ಹಣ್ಣಿನ ರುಚಿಗೇನೂ ಅದು ಅಡ್ಡಿ ಬರೋಲ್ಲ. ಆದ್ರೂ ಬೀಜಗಳ ಪ್ರಮಾಣ ಕಡಿಮೆ ಇರುವ ಕಿರಣ್ ಜಾತಿಯ ಕಲ್ಲಂಗಡಿ ಕೂಡಾ ಇದೆ. ಆದರೆ, ಇದು ಬಹುತೇಕ ವರ್ಷ ಪೂರ್ತಿ ಸಿಗುತ್ತದೆ. ಆದ್ರೆ ನಾವು ಹೇಳ್ತಿರೋದು ಇವುಗಳ ಬಗ್ಗೆ ಅಲ್ಲ. ಹಸಿರು ಹೊರಮೈ ತೆಗೆದರೆ ಒಳಗಿರುವ ತಿರುಳಿನ ಬಣ್ಣವೇ ಬದಲಾಗಿರುವ ಹಣ್ಣುಗಳ ಬಗ್ಗೆ.
ಹಳದಿ ಬಣ್ಣದ ಕಲ್ಲಂಗಡಿ ಹಣ್ಣು!
ಹೌದು ಈ ವಿಶೇಷ ಕಲ್ಲಂಗಡಿ ಹಣ್ಣಿನ ತಿರುಳು ಹಳದಿ ಬಣ್ಣದ್ದು.. ಯಾವ್ದೋ ಎಕ್ಸಾಟಿಕ್ ಖಾದ್ಯದಲ್ಲಿ ನೀವು ಹಳದಿ ಕಲ್ಲಂಗಡಿ ಬಳಸ್ತಾರೆ ಅನ್ನೋದನ್ನ ಕೇಳಿ ತಿಳಿದಿರಬಹುದು. ಆದ್ರೆ ಈ ಸಲ ನಗರದ ಜನ ಈ ವಿಶೇಷ ಹಣ್ಣುಗಳನ್ನು ಸ್ವತಃ ಸವಿಯುವ ಸುವರ್ಣಾವಕಾಶ ಪಡೆದಿದ್ದಾರೆ.
ಹಳದಿ ಕಲ್ಲಂಗಡಿ ಹೆಸರು ಆರೋಹಿ, ತೈವಾನ್ ತಳಿ!
ಕೃಷಿಯಲ್ಲಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಪ್ರಯೋಗಕ್ಕೆ ಹೆಸರಾಗಿರುವ ಉಮೇಶ ಕಾರಜೋಳ ಅವರು, ಪ್ರಾಯೋಗಿಕವಾಗಿ ಕೆಲ ವಿಶೇಷ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದಾರೆ. ಅದರಲ್ಲಿ ಹಳದಿ ತಿರುಳಿನ ಈ ಕಲ್ಲಂಗಡಿ ತಳಿಯ ಹೆಸರು ಆರೋಹಿ. ಅಂದ್ಹಾಗೆ ಇದು ಮೂಲ ತೈವಾನ್ ನ ತಳಿ. ನೋನ್ ಯೂ ಎನ್ನುವ ಸಂಸ್ಥೆಯೊಂದು ಕೆಲ ರೈತರ ಮನವೊಲಿಸಿ ವಿಭಿನ್ನ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯೋಕೆ ಪ್ರೋತ್ಸಾಹ ನೀಡಿದೆ.
ಒಂದೇ ಒಂದು ಕಲ್ಲಂಗಡಿಗಾಗಿ ರಕ್ತಸಿಕ್ತ ಯುದ್ಧ, ಸಾವಿರಾರು ಸೈನಿಕರ ಬಲಿ: ಕಾರಣವೇನು ಗೊತ್ತಾ?
ಆರಂಭದಲ್ಲಿ ಕಲ್ಲಂಗಡಿ ಬೀಜದ ಮೇಲೆ ಅನುಮಾನ!
ಸಂಸ್ಥೆಯೇನೋ ಈ ತಳಿಗಳ ಬಗ್ಗೆ ವಿವರಿಸಿ ಬೀಜಗಳನ್ನು ಮಾರಿದೆ, ಆದ್ರೆ ಹೇಗೋ ಏನೋ ಅಂತ ಮೊದಮೊದಲು ಸ್ವಲ್ಪ ಅನುಮಾನದಲ್ಲೇ ಸ್ವಲ್ಪೇ ಪ್ರದೇಶದಲ್ಲಿ ಮಾತ್ರ ತಾವು ಸದಾ ಬೆಳೆಯುತ್ತಿದ್ದ ಕೆಂಪು ಕಲ್ಲಂಗಡಿ ಬದಲು ಈ ಆರೋಹಿ ತಳಿಯ ಬೀಜ ಬಿತ್ತಿದ್ದಾರೆ. ಈಗ ಸಮೃದ್ಧವಾಗಿ ಫಸಲು ಬಿಟ್ಟಿವೆ
ಹಾಗಂತ ಇವೇನೂ ದುಬಾರಿಯಲ್ಲ. ಉಳಿದ ಕಲ್ಲಂಗಡಿ ರೀತಿಯಲ್ಲೇ ಒಂದು ಕೆಜಿಗೆ 20 ರೂಪಾಯಿ ಬೆಲೆ ಇದಕ್ಕಿದೆ. ಕೆಂಪು ಹಣ್ಣುಗಳಿಗಿಂತ ಹಳದಿ ಹಣ್ಣುಗಳು ಸ್ವಲ್ಪ ಹೆಚ್ಚೇ ಸಿಹಿಯಾಗಿವೆ. ಸಲಾಡ್, ಜ್ಯೂಸ್ ಎಲ್ಲವಕ್ಕೂ ಇವು ಸೂಕ್ತವಾಗುತ್ತದೆ. ಹಳದಿ ಹಣ್ಣುಗಳ ಜೊತೆಗೆ ಬೂದು ಬಣ್ಣದ, ಕೆಂಪು ತಿರುಳಿನ ಜನ್ನತ್ ವೆರೈಟಿ ಕಲ್ಲಂಗಡಿ ಕೂಡಾ ಹೊಸಾ ಪ್ರಯೋಗವೇ.
ಬಿಸಿಲು ಇರುವ ವಾತಾವರಣದಿಂದ ಕಲ್ಲಂಗಡಿಯಲ್ಲಿ ಅತ್ಯಧಿಕ ಇಳುವರಿ
ಹಳದಿ ಕಲ್ಲಂಗಡಿ ಶುರುವಾಗ್ತಿದೆ ಬೇಡಿಕೆ!
ಈಗಂತೂ ನಗರದ ಜನರಿಗೆ ಈ ವಿಶೇಷ ಹಣ್ಣುಗಳ ಪರಿಚಯವಾಗಿದೆ. ಬಹುಶಃ ಒಳ್ಳೆ ಪ್ರತಿಕ್ರಿಯೆ ನೋಡಿ ಮುಂದಿನ ವರ್ಷ ಹೆಚ್ಚು ರೈತರು ಇವುಗಳನ್ನು ಬೆಳೆದು ಹೆಚ್ಚು ವೆರೈಟಿ ಕಲ್ಲಂಗಡಿ ಹಣ್ಣುಗಳನ್ನು ಸವಿಯುವ ಅವಕಾಶ ಸಿಕ್ಕರೂ ಆಶ್ಚರ್ಯವಿಲ್ಲ. ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಮಾತನಾಡಿದ ಉಮೇಶ ಕಾರಜೋಳ ಪ್ರಾಯೋಗಿಕವಾಗಿ ಕೆಲ ವಿಶೇಷ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದೆನೆ. ಅದರಲ್ಲಿ ಹಳದಿ ತಿರುಳಿನ ಈ ಕಲ್ಲಂಗಡಿ ತಳಿಯ ಹೆಸರು ಆರೋಹಿ. ಅಂದ್ಹಾಗೆ ಇದು ಮೂಲ ತೈವಾನ್ ನ ತಳಿ. ನೋನ್ ಯೂ ಎನ್ನುವ ಸಂಸ್ಥೆಯೊಂದು ಕೆಲ ರೈತರ ಮನವೊಲಿಸಿ ವಿಭಿನ್ನ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯೋಕೆ ಪ್ರೋತ್ಸಾಹ ನೀಡಿದೆ ನಾನು ಸಹ ನನ್ನ ಜುಮನಾಳ ತೋಟದಲ್ಲಿ ಬೆಳೆದಿದ್ದೇನೆ ಎಂದಿದ್ದಾರೆ.