ಕೋರ್ಟ್‌ನಲ್ಲಿ ಜಡ್ಜ್ ಮುಂದೆ ಹೋಗುವ ಮೊದಲೇ ಕತ್ತು ಕೊಯ್ದುಕೊಂಡ ಆರೋಪಿ
ವಿಜಯಪುರ ಜಿಲ್ಲಾ ಕೋರ್ಟ್ ಆವರಣದಲ್ಲಿ ಆರೋಪಿ ಶಿವಾನಂದ ಹೊಸಮನಿ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಲವು ಕೇಸ್‌ಗಳಲ್ಲಿ ಆರೋಪಿಯಾಗಿದ್ದ ಶಿವಾನಂದನನ್ನು ಪೊಲೀಸರು ಬಂಧಿಸಿ ಕೋರ್ಟ್‌ಗೆ ಕರೆತಂದಿದ್ದರು.
ವಿಜಯಪುರ (ಡಿ.20): ನಮ್ಮ ದೇಶದ ಸಂವಿಧಾನದ ಪ್ರಕಾರ ಯಾರೇ ತಪ್ಪು ಮಾಡಿದರೂ ಅವರು ಮಾಡಿದ ತಪ್ಪಿಗೆ ಅನುಸಾರ ಶಿಕ್ಷೆ ಆಗುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ತಾನು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲೇ ಕೋರ್ಟ್ ಆವರಣದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ನಡೆದಿದೆ.
ಈ ಘಟನೆ ವಿಜಯಪುರ ಜಿಲ್ಲಾ ಕೋರ್ಟ್ ಆವರಣದಲ್ಲಿ ಶುಕ್ರವಾರ ನಡೆದಿದೆ. ಶಿವಾನಂದ ಹೊಸಮನಿ ಕುತ್ತಿಗೆ ಕೊಯ್ದುಕೊಂಡ ಆರೋಪಿ ಆಗಿದ್ದಾರೆ. ಹಲವು ಕೇಸ್‌ಗಳಲ್ಲಿ ಆರೋಪಿಯಾಗಿದ್ದ ಶಿವಾನಂದನನ್ನು ಬಂಧಿಸಲು ನ್ಯಾಯಾಲಯದ ವಾರಂಟ್ ಸಹ ಇತ್ತು. ಹೀಗಾಗಿ, ಪೊಲೀಸರು ಆರೋಪಿ ಶಿವಾನಂದನನ್ನು ಕೆಇಬಿ ಬಳಿ ಬಂಧಿಸಿ ಕೋರ್ಟ್‌ಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಮುಂದಾಗಿದ್ದರು. ಈ ವೇಳೆ ನ್ಯಾಯಾಧೀಶರಿರುವ ಕೋರ್ಟ್ ಸಭಾಂಗಣದೊಳಗೆ ಕರೆಯ್ಯುವ ಮೊದಲೇ ಜೇಬಲ್ಲಿದ್ದ ಬ್ಲೇಡ್ ತೆಗೆದುಕೊಂಡು ತನ್ನ ಕುತ್ತಿಗೆಯನ್ನು ಕೊಯ್ದುಕೊಂಡಿದ್ದಾನೆ.
ತಕ್ಷಣವೇ ಮತ್ತೊಮ್ಮೆ ಹಾನಿ ಮಾಡಿಕೊಳ್ಳುವ ಮುನ್ನ ಪೊಲೀಸರು ಆತನ ಕೈಯಲ್ಲಿದ್ದ ಬ್ಲೇಡ್ ಅನ್ನು ಕಿತ್ತುಕೊಂಡಿದ್ದಾರೆ. ಈ ಮೂಲಕ ತನಗೆ ಹಾನಿ ಮಾಡಿಕೊಳ್ಳುವುದು ಹಾಗೂ ಇತರೆ ಸಾರ್ವಜನಿಕರಿಗೆ ಹಾನಿ ಉಂಟಾಗುವುದನ್ನು ತಪ್ಪಿಸಿದ್ದಾರೆ. ನಂತರ ಸ್ಥಳದಲ್ಲಿದ್ದ ಜನರ ಸಹಾಯದಿಂದ ಗಾಯಾಳು ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಒಬ್ಬ ಆರೋಪಿ ಬಳಿ ಹರಿತವಾದ ಬ್ಲೇಡ್ ಹೇಗೆ ಬಂದಿತು ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ. ರವಿ ಅರೆಸ್ಟ್ ಮಾಡಿ, ಎತ್ಹಾಕೊಂಡು ಹೋದ ಪೊಲೀಸರು!
ಕೋರ್ಟ್ ಆವರಣದಲ್ಲಿಯೇ ವಕೀಲನನ್ನು ಕೊಚ್ಚಿ ಹಾಕಿದ್ದ ಸಿಬ್ಬಂದಿ:
ಬೆಂಗಳೂರಿನ ನೆರೆಹೊರೆ ಪ್ರದೇಶ ಹೊಸೂರು ಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬನ ಹೆಂಡತಿಯೊಂದಿಗೆ ಇದೇ ಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ವಕೀಲರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಹಲ್ಲೆಗೆ ಸಮಯ ಸಾಧಿಸುತ್ತಿದ್ದ ವ್ಯಕ್ತಿ, ವಕೀಲರು ಕೇಸ್ ಮುಗಿಸಿಕೊಂಡು ಹೊರಗೆ ಬಂದ ಕೂಡಲೇ ಮಾರಕಾಸ್ತ್ರದಿಂದ ಭೀಕರವಾಗಿ ಕೊಚ್ಚಿ ಹಾಕಿದ್ದನು. ಕುತ್ತಿಗೆ, ಕಣ್ಣು, ಎದೆ ಹಾಗೂ ಇತರೆ ಭಾಗಗಳಲ್ಲಿ ಹಲ್ಲೆ ಮಾಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದರು.