ಫೆ.5ಕ್ಕೆ ರಾಜ್ಯದ 31ನೇ ನೂತನ ಜಿಲ್ಲೆ ಅಧಿಕೃತ ಘೋಷಣೆ
ರಾಜ್ಯದ ನೂತನ ಜಿಲ್ಲೆಯೊಂದು ಇದೇ ಫೆಬ್ರವರಿ 5 ರಂದು ಘೋಷಣೆಯಾಗಲಿದೆ. ಅಧಿಕೃತವಾಗಿ ಕರ್ನಾಟಕ ಜಿಲ್ಲೆಗಳ ಪಟ್ಟಿಗೆ ಸೇರಲಿದೆ.
ಹೊಸಪೇಟೆ (ಫೆ.02): ರಾಜ್ಯದ 31ನೇ ನೂತನ ಜಿಲ್ಲೆಯಾಗಿ ವಿಜಯನಗರ ಜನ್ಮತಳೆಯಲಿದ್ದು, ಈ ಕುರಿತ ಅಂತಿಮ ಅಧಿಸೂಚನೆ ಫೆ. 5ರಂದು ಹೊರ ಬೀಳುವ ಸಾಧ್ಯತೆ ಇದೆ.
ಈಗಾಗಲೇ ವಿಜಯನಗರ ಜಿಲ್ಲೆಯ ವಿಚಾರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತಿದೆ. ಬಳ್ಳಾರಿ ಜಿಲ್ಲೆಯಿಂದ ಇಬ್ಭಾಗ ಮಾಡಿ ವಿಜಯನಗರ ಜಿಲ್ಲೆ ರಚನೆ ಮಾಡುವುದರ ಕುರಿತು ಸರ್ಕಾರ ಆಕ್ಷೇಪಣೆ ಹಾಗೂ ಸಲಹೆ ಕೇಳಿತ್ತು. ಇದಕ್ಕೆ 30 ಸಾವಿರ ಆಕ್ಷೇಪಣೆ ಅರ್ಜಿಗಳು ಬಂದಿವೆ. ಜತೆಗೆ ಪರವಾಗಿಯೂ ಸಾಕಷ್ಟುಅರ್ಜಿಗಳು ಬಂದಿದ್ದು, ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಫೆ. 5ರಂದು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಬಳ್ಳಾರಿ ಜಿಲ್ಲೆ ವಿಭಜಿಸಲು ಸಾಕಷ್ಟುವಿರೋಧಗಳು ವ್ಯಕ್ತವಾಗುತ್ತಿದ್ದರೂ, ಜಿಲ್ಲೆ ವಿಭಜನೆ ವಿಚಾರ ನಿರ್ಧಾರ ಹಿಂಪಡೆಯದಿರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಫೆ. 5ರಂದು ಅಧೀಕೃತವಾಗಿ ಘೋಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಶೀಘ್ರವೇ ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ: ಆನಂದ್ ಸಿಂಗ್
ಈಗಾಗಲೇ ಈ ಸಂಬಂಧ ಸಚಿವ ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಹುತೇಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಘೋಷಣೆ ಯಾಗೋದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಜಯನಗರ ಜಿಲ್ಲೆ ರಚನೆ ಕುರಿತು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಲ್ಲಿದ್ದೇವೆ. ಈ ಭಾಗದ ಬಹುದಿನದ ಬೇಡಿಕೆಯನ್ನು ಸರ್ಕಾರ ಈಡೇರಿಸುವ ಭರವಸೆ ಇದೆ. ವಿಜಯನಗರ ಜಿಲ್ಲೆ ರಚನೆಯಿಂದ ಪಶ್ಚಿಮ ತಾಲೂಕುಗಳ ಅಭಿವೃದ್ಧಿಗೆ ಅನುಕೂಲ ಆಗಲಿದೆ.
ಬಿ.ಎಸ್. ಜಂಬಯ್ಯ ನಾಯಕ, ಕಟಿಗಿ ವಿಜಯಕುಮಾರ, ವಿಜಯನಗರ ಜಿಲ್ಲಾ ಹೋರಾಟಗಾರರು, ಹೊಸಪೇಟೆ