ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹನುಮನಹಳ್ಳಿ ಪ್ರದೇಶದಲ್ಲಿ 12 ಸಾಲುಗಳ ಅಪರೂಪದ ಕನ್ನಡ ಶಿಲಾಶಾಸನ ಪತ್ತೆಯಾಗಿದೆ. ವಿಜಯನಗರೋತ್ತರ ಕಾಲಕ್ಕೆ ಸೇರಿರಬಹುದಾದ ಈ ಶಾಸನದಲ್ಲಿ ಭೂದಾನ ಮತ್ತು ಅದನ್ನು ಉಲ್ಲಂಘಿಸುವವರಿಗೆ ಕತ್ತೆಯ ಜನ್ಮದ ಶಾಪ ನೀಡಿರುವ ಉಲ್ಲೇಖವಿದೆ.

ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ಪತನದ ನಂತರದ ಕಾಲಘಟ್ಟದಲ್ಲಿ ಗ್ರಾಮೀಣ ಸಮಾಜದಲ್ಲಿ ಭೂದಾನ, ಕೃಷಿ ಮತ್ತು ಧಾರ್ಮಿಕ ನಂಬಿಕೆಗಳಿಗೆ ಎಷ್ಟು ಮಹತ್ವವಿತ್ತು ಎಂಬುದನ್ನು ತಿಳಿಸುವ ಅಪರೂಪದ ಕಲ್ಲಿನ ಶಾಸನವೊಂದು ಬಳ್ಳಾರಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇಲ್ಲಿನ ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಗೆ ಸೇರಿದ ಮೆಟ್ರಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಳುಬಿದ್ದ ಹನುಮನಹಳ್ಳಿಯ (ಡಿ. ಅಂತಾಪುರ) ಹೊಲವೊಂದರಲ್ಲಿ ಅತ್ಯಂತ ಅಪರೂಪದ ಅಪ್ರಕಟಿತ 'ದಾನ ಶಾಪಶಯ ಶಿಲಾಶಾಸನ'ವೊಂದು ಪತ್ತೆಯಾಗಿದೆ.

ಬಳ್ಳಾರಿಯ ಪ್ರಸಿದ್ಧ ಇತಿಹಾಸ ಉಪನ್ಯಾಸಕರಾದ ಓಬಯ್ಯ ಅವರು ಈ ಅಪರೂಪದ ಶಾಸನವನ್ನು ಪತ್ತೆಹಚ್ಚಿದ್ದು, ಇದು ವಿಜಯನಗರ ಸಾಮ್ರಾಜ್ಯದ ಪತನಾನಂತರದ ಕಾಲಘಟ್ಟದ ಕೃಷಿ ಸಂಸ್ಕೃತಿ, ಭೂ ಆಡಳಿತ ಮತ್ತು ಗ್ರಾಮೀಣ ಸಮಾಜದ ನಂಬಿಕೆಗಳ ಮೇಲೊಂದು ಹೊಸ ಬೆಳಕು ಚೆಲ್ಲಿದೆ.

ಶಾಸನದ ಭೌತಿಕ ಸ್ವರೂಪ ಮತ್ತು ಲಕ್ಷಣಗಳು

ಈ ಶಾಸನವನ್ನು ಪ್ರಕೃತಿಯೇ ಸುದೀರ್ಘ ಕಾಲದಿಂದ ರಕ್ಷಿಸಲ್ಪಟ್ಟಿದ್ದು, ಕೆಂಪು ಮಿಶ್ರಿತ ಬಣ್ಣದ ತುಂಡು ಶಿಲೆಯ ಮೇಲ್ಭಾಗದಲ್ಲಿ ಈ ಶಾಸನವನ್ನು ಕೆತ್ತಲಾಗಿದೆ. ಶಾಸನವು ಎರಡು ಭಾಗಗಳಲ್ಲಿ ಒಟ್ಟು 12 ಸಾಲುಗಳ ಸ್ಪಷ್ಟ ಕನ್ನಡ ಅಕ್ಷರಗಳನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳನ್ನು ಕೆತ್ತಲಾಗಿದ್ದು, ಇದು ಕೊಡುಗೆ ಅಥವಾ ಆಜ್ಞೆಯು ಶಾಶ್ವತವಾಗಿರಲಿ ಎಂಬುದನ್ನು ಸಂಕೇತಿಸುತ್ತದೆ.

ಶಾಸನದ ವಿವರ

ಶಾಸನದ ಪಾಠವನ್ನು ಅಧ್ಯಯನ ಮಾಡಿದಾಗ ಆ ಕಾಲದ ಕೃಷಿ ಹಾಗೂ ಭೂ ಒಡೆತನದ ಅಪರೂಪದ ಸಂಗತಿಗಳು ಬೆಳಕಿಗೆ ಬಂದಿವೆ. ಸೂರ್ಯ ಮತ್ತು ಚಂದ್ರರು ಆಕಾಶದಲ್ಲಿ ಇರುವವರೆಗೂ 'ಹನುಮಾದಯ ಗಿಡಯ ಮತೆಯ ಅಂಕಿತಂಮಯ' ಎಂಬುವವರಿಗೆ ಈ ಭೂಮಿಯನ್ನು ತೆರಿಗೆ ವಿನಾಯಿತಿ ಇರುವ (ಮಾನ್ಯದ) ಹೊಲವನ್ನಾಗಿ ಅಥವಾ ದಾನವಾಗಿ ನೀಡಲಾಗಿದೆ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಈ ದಾನವಾಗಿ ನೀಡಿದ ಭೂಮಿಯನ್ನು ಯಾರಾದರೂ ಅತಿಕ್ರಮಿಸಿದರೆ, ಕಬಳಿಸಿದರೆ, ಅಥವಾ ಬೆಳೆ ಕದ್ದು ನಾಶಪಡಿಸಿದರೆ ಅವರಿಗೆ 'ಕತ್ತೆ ಜನ್ಮ ಎತ್ತಲಿ' ಎಂದು ಕಠಿಣವಾಗಿ ಶಾಪ ಹಾಕಲಾಗಿದೆ. ಈ ರೀತಿಯಾಗಿ ಅತಿಕ್ರಮಣದಾರರಿಗೆ ಶಾಪ ನೀಡುವ ಶಾಸನಗಳನ್ನು ಇತಿಹಾಸದಲ್ಲಿ ‘ಶಾಪಾಶಯ ಶಾಸನಗಳು’ ಎಂದು ಕರೆಯಲಾಗುತ್ತದೆ.

ಶಾಸನದ ಕೊನೆಯ ಸಾಲಿನಲ್ಲಿ 'ಶ್ರೀ' ಎಂಬ ಪವಿತ್ರ ಅಕ್ಷರವನ್ನು ಕೆತ್ತಲಾಗಿದ್ದು, ಈ ಧಾರ್ಮಿಕ ಮತ್ತು ಕಾನೂನಾತ್ಮಕ ಒಪ್ಪಂದವನ್ನು ಮಂಗಳಮಯವಾಗಿ ಮುಕ್ತಾಯಗೊಳಿಸಲಾಗಿದೆ.

ಶಾಸನದ ಕಾಲಾವಧಿ ಮತ್ತು ಐತಿಹಾಸಿಕ ಮಹತ್ವ

ವಿಜಯನಗರ ಸಾಮ್ರಾಜ್ಯದ ವೈಭವ ಕಮರಿದ ನಂತರ 16ನೇ ಅಥವಾ 17ನೇ ಶತಮಾನದ ಉತ್ತರಾರ್ಧದಲ್ಲಿ ಈ ಭಾಗವನ್ನು ಆಳಿದ ಸ್ಥಳೀಯ ಪಾಳೆಗಾರರ ಕಾಲಕ್ಕೆ ಈ ಶಾಸನ ಸೇರಿದ್ದಾಗಿದೆ ಎಂದು ಅಂದಾಜಿಸಲಾಗಿದೆ. ಆ ಕಾಲದಲ್ಲಿ ರಾಜಕೀಯ ಏರುಪೇರುಗಳ ನಡುವೆಯೂ ಕೃಷಿ ಭೂಮಿಗೆ ಅಪಾರ ಮೌಲ್ಯವಿತ್ತು. ದೇವಸ್ಥಾನಗಳು, ಮಠಗಳು ಅಥವಾ ಅರ್ಚಕರ ನಿರ್ವಹಣೆಗಾಗಿ ತೆರಿಗೆ ರಹಿತ ಭೂಮಿಯನ್ನು ನೀಡುವ ಪದ್ಧತಿಯಿತ್ತು. ಭೂಮಿಯನ್ನು ಯಾರೂ ಆಕ್ರಮಿಸಬಾರದು ಮತ್ತು ಕೃಷಿ ಫಸಲನ್ನು ಕದಿಯಬಾರದು ಎಂಬ ಮುಂಜಾಗ್ರತೆಯಿಂದ ಇಂತಹ ಶಾಪಾಶಯ ಉಲ್ಲೇಖಗಳನ್ನು ಕೆತ್ತಿಸಲಾಗುತ್ತಿತ್ತು. ಡಿ. ಅಂತಾಪುರದಲ್ಲಿ ದೊರೆತಿರುವ ಈ ಪುಟ್ಟ ಶಿಲಾಶಾಸನವು ಮಧ್ಯಕಾಲೀನ ಕರ್ನಾಟಕದ ಗ್ರಾಮೀಣ ಸಮಾಜದ ಕಾನೂನು, ಭೂ ಆಡಳಿತ ಮತ್ತು ಜನರ ಧಾರ್ಮಿಕ ನಂಬಿಕೆಗಳಿಗೆ ಜೀವಂತ ಸಾಕ್ಷಿಯಾಗಿದೆ.