ಪಟ್ಟಣದ ಊರಮ್ಮದೇವಿ ದೇವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಹಳೆಯ ದೇವಸ್ಥಾನವನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗುತ್ತಿದೆ. ನೆಲಸಮಗೊಳಿಸುವ ಕಾರ್ಯಾಚರಣೆ ಕಳೆದ ನಾಲ್ಕು ದಿನಗಳಿಂದ ನಿರಂತರ ಸಾಗಿದೆ.
ವಿಜಯನಗರ: ಕೊಟ್ಟೂರು ಪಟ್ಟಣದ ಗ್ರಾಮದೇವತೆ ಊರಮ್ಮದೇವಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ ದೈವಸ್ಥ ಬಳಗ ಮತ್ತು ಸಮಿತಿಯವರು ಚಾಲನೆ ನೀಡಿದ್ದು, ಈ ಕಾರಣದಿಂದ ದೇವಿಯ ಹಳೆಯ ದೇವಸ್ಥಾನ ನೆಲಸಮಗೊಳಿಸುವ ಕಾರ್ಯಾಚರಣೆ ಕಳೆದ ನಾಲ್ಕು ದಿನಗಳಿಂದ ನಿರಂತರ ಸಾಗಿದೆ.
ನೂತನ ದೇವಸ್ಥಾನ ನಿರ್ಮಾಣ
ಊರಮ್ಮ ದೇವಿಯ ದೇವಸ್ಥಾನ ನೂತನವಾಗಿ ಪುನರ್ ನಿರ್ಮಿಸಲು ದೈವಸ್ಥರು ಮತ್ತು ಸಮಿತಿಯವರು ದಶಕಗಳಿಂದ ನಿರ್ಧರಿಸಿದ್ದರು. ಈ ಕಾರ್ಯಕ್ಕೆಂದೆ ಹಲವು ಬಗೆಯ ಪ್ರಯತ್ನ ಸಾಗಿದ್ದವು. ನಾನಾ ಕಾರಣಗಳಿಂದ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಇದೀಗ ದೇವಿಯ ದೇವಸ್ಥಾನ ನಿರ್ಮಾಣ ಕಾರ್ಯ ಚಾಲನೆ ಪಡೆದುಕೊಳ್ಳುತ್ತದೆ ಎಂಬ ಸಮಾಧಾನ ಮತ್ತು ಸಂತಸ ಭಕ್ತರು ವ್ಯಕ್ತಪಡಿಸ ತೊಡಗಿದ್ದಾರೆ.
6-7 ತಿಂಗಳಲ್ಲಿ ಹೊಸ ದೇಗುಲ ನಿರ್ಮಾಣದ ಭರವಸೆ
ಕಾರ್ಕಳದ ಶಿಲ್ಪಿಯೊಬ್ಬರು ಊರಮ್ಮ ದೇವಿಯ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲು ಹೊಣೆಗಾರಿಕೆ ಹೊತ್ತಿದ್ದು, ಈಗಾಗಲೇ ಕಲ್ಲುಗಳ ಕೆತ್ತನೆ ಕಾರ್ಯ ಭರದಿಂದ ಗಚ್ಚಿನಮಠ ಜಾಗದ ಪ್ರದೇಶದಲ್ಲಿ ಸಾಗಿದೆ. ಇನ್ನೂ 6-7 ತಿಂಗಳಲ್ಲಿ ನೂತನ ದೇವಸ್ಥಾನ ಸುಂದರ ಮತ್ತು ಸುಸಜ್ಜಿತವಾಗಿ ನಿರ್ಮಿಸಿ ಕೊಡುವ ಭರವಸೆ ಶಿಲ್ಪಿಯವರು ದೈವಸ್ಥ ಬಳಗ ಮತ್ತು ಸಮಿತಿಯವರಿಗೆ ನೀಡಿದ್ದಾರೆ ಎನ್ನಲಾಗಿದೆ.
ಊರಮ್ಮ ದೇವಿಯ ಹಳೆಯ ದೇವಸ್ಥಾನವನ್ನು ನೆಲಸಮಗೊಳಿಸುವ ಜೆಸಿಬಿ ಕಾರ್ಯಾಚರಣೆ ನಿರಂತರವಾಗಿ ಸಾಗಿದೆ.










