Asianet Suvarna News Asianet Suvarna News

ವಿಜಯನಗರ ನೆಲ ರಾಜಕೀಯ ಕೇಂದ್ರ ಬಿಂದು..!

*  ಆನಂದ ಸಿಂಗ್‌ ರಾಜಕೀಯ ನಡೆ ಹಿನ್ನೆ​ಲೆ​ಯಲ್ಲಿ ಮತ್ತೊಮ್ಮೆ ಜನತೆ ಚಿತ್ತ ವಿಜ​ಯ​ನ​ಗ​ರ​ದ​ತ್ತ
*  2008ರಿಂದ ಸಕ್ರಿಯ ರಾಜಕಾರಣಕ್ಕೆ ಬಂದ ಆನಂದ್‌ ಸಿಂಗ್‌
*  ವಿಜಯನಗರ ಜಿಲ್ಲೆಯ ಬೆಳವಣಿಗೆ ಹಿತದೃಷ್ಟಿಯಿಂದ ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟ ಸಿಂಗ್‌
 

Vijayanagara is now Political Center in Karnataka grg
Author
Bengaluru, First Published Aug 12, 2021, 10:53 AM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಆ.12): ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿ ವಿಜಯನಗರದ ನೆಲ ಬುಧವಾರ ಮಾರ್ಪಟ್ಟಿತು. ಸಚಿವ ಆನಂದ್‌ ಸಿಂಗ್‌ ಅವರು ರಾಜೀನಾಮೆ ಪ್ರಕಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದರಿಂದ ಇಡೀ ರಾಜ್ಯದ ಜನರ ಚಿತ್ತ ಹೊಸಪೇಟೆಯತ್ತ ತಿರುಗಿತ್ತು.

ಪ್ರಬಲ ಖಾತೆಗೆ ಪಟ್ಟು ಹಿಡಿದಿರುವ ಆನಂದ್‌ ಸಿಂಗ್‌ ಅವರು ಆ. 10ರಂದು ಕಚೇರಿಯ ಬೋರ್ಡ್‌ ತೆರವುಗೊಳಿಸಿದ್ದರು. ಜತೆಗೆ ಕಚೇರಿ ಕೂಡ ಬಂದ್‌ ಮಾಡಿದ್ದರು. ಆ. 11ರಂದು ಕೂಡ ಕಚೇರಿ ತೆರೆಯಲಿಲ್ಲ. ಹೀಗಾಗಿ, ಈ ದಿನ ರಾಜೀನಾಮೆಯನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿತ್ತು.

ಸಿಎಂ ಕರೆ:

ನಗರದ ವೇಣುಗೋಪಾಲಕೃಷ್ಣ ದೇಗುಲದಲ್ಲಿ ಸಚಿವ ಆನಂದ್‌ ಸಿಂಗ್‌ ಅವರು ಪೂಜೆ ಕೈಂಕರ್ಯದಲ್ಲಿ ತೊಡಗಿದ್ದಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿ ಮನವೊಲಿಸುವ ಕಾರ್ಯ ಮಾಡಿದರು. ಈ ಮಧ್ಯೆ ಸುರಪುರ ಶಾಸಕ ರಾಜುಗೌಡ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಆನಂದ್‌ ಸಿಂಗ್‌ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಬಳಿಕ ಜಿಂದಾಲ್‌ನಿಂದ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ತೆರಳಿದರು.

ಹಠ ಬಿಡಲಾರೆ.. ಇಟ್ಟ ಹೆಜ್ಜೆ ಹಿಂದಿಡಲಾರೆ: ಆನಂದ ಸಿಂಗ್‌ ಮಾಡಿದ ಶಪಥವೇನು?

ಮನೆಯಿಂದ ದೇಗುಲಕ್ಕೆ:

ತಮ್ಮ ದ್ವಾರಕಾ ನಿವಾಸದಿಂದ ನೇರ ನಗರದ ಶ್ರೀವೇಣುಗೋಪಾಲಸ್ವಾಮಿ ದೇಗುಲಕ್ಕೆ ಬೆಳಗ್ಗೆ 9:15ಕ್ಕೆ ಆಗಮಿಸಿದರು. ಈ ವೇಳೆ ಅವರ ನಿವಾಸದ ಬಳಿ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡರು. ಪೂಜಾ ಕಾರ್ಯ ಮುಗಿದ ಬಳಿಕ ಮಧ್ಯಾಹ್ನ 1:15ಕ್ಕೆ ಸುದ್ದಿಗಾರರೊಂದಿಗೆ ಸುದೀರ್ಘವಾಗಿ ಹೇಳಿಕೆ ನೀಡಿದರು. ಬಳಿಕ ಅವರು ಬೆಂಗಳೂರಿನತ್ತ ತೆರಳಿದರು.

ಬೆಂಗಳೂರಿಗೆ ಬುಲಾವ್‌:

ಆನಂದ್‌ ಸಿಂಗ್‌ ಅವರು ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ಖಾತೆ ಬದಲಾವಣೆ ಬಗ್ಗೆ ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬುಲಾವ್‌ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದರು.

ಬೊಮ್ಮಾಯಿ ಭೇಟಿ ನಂತರ ಬದಲಾದ 'ಆನಂದ'...ರಾಜೀನಾಮೆ ಚಾನ್ಸೇ ಇಲ್ಲ!

ಬೆಂಬಲಿಗರ ಆಗಮನ:

ನಗರದ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಸಚಿವರು ಇರುವ ವಿಷಯ ತಿಳಿದು ಅವರ ಬೆಂಬಲಿಗರು ದೇಗುಲಕ್ಕೆ ಆಗಮಿಸಿದರು. ಈ ವೇಳೆ ಪೂಜೆಯಲ್ಲಿ ಭಾಗಿಯಾಗಿದ್ದರಿಂದ ಬೆಂಬಲಿಗರ ಬಳಿಯೂ ಅವರು ಮಾತನಾಡಲಿಲ್ಲ. ಹಲವು ನಾಯಕರು ಕರೆ ಮಾಡಿದ್ದರೂ ಪೂಜೆ ಸಮಯದಲ್ಲಿ ಅವರು ಕರೆ ಸ್ವೀಕರಿಸಲಿಲ್ಲ. ಮಧ್ಯದಲ್ಲಿ ಒಂದೆರಡು ಬಾರಿ ಸಿಎಂ ಹಾಗೂ ಮಾಜಿ ಸಿಎಂ ಕರೆ ಮಾತ್ರ ಸ್ವೀಕರಿಸಿ ಮಾತನಾಡಿರುವುದು ಬಿಟ್ಟರೆ ಉಳಿದ ನಾಯಕರ ಕರೆಯನ್ನು ಅವರು ಸ್ವೀಕರಿಸಲಿಲ್ಲ.

ಆನಂದ್‌ ಸಿಂಗ್‌ ಅವರು 2008ರಿಂದ ಸಕ್ರಿಯ ರಾಜಕಾರಣಕ್ಕೆ ಬಂದಿದ್ದು, ಅಲ್ಲಿಂದ ಅವರು ರಾಜಕೀಯದಲ್ಲಿ ಸೋಲಿಲ್ಲದ ಸರದಾರ ಆಗಿ ಬೆಳೆದಿದ್ದಾರೆ. ವಿಜಯನಗರ ಜಿಲ್ಲೆ ರಚನೆ ರೂವಾರಿಯೂ ಆಗಿರುವ ಅವರು, ಜಿಲ್ಲೆಯ ಬೆಳವಣಿಗೆ ಹಿತದೃಷ್ಟಿಯಿಂದ ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಇದನ್ನು ವರಿಷ್ಠರ ಗಮನಕ್ಕೂ ತಂದಿದ್ದಾರೆ. ಜತೆಗೆ ತಮ್ಮ ಪಟ್ಟು ಸಡಿಸಲಿಸದೇ ರಾಜಕೀಯ ಜೀವನ ಅಂತ್ಯವಾಗಬಹುದು ಎಂದು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.
 

Follow Us:
Download App:
  • android
  • ios