ಚಿತ್ರದುರ್ಗ(ಫೆ.26): ಶಿವಮೊಗ್ಗದ ಕೂಡಲಿಯಲ್ಲಿರುವ ಶ್ರೀಮದ್‌ ಶಂಕರಾಚಾರ್ಯ ಶ್ರೀಕೂಡಲಿ ಶೃಂಗೇರಿ ಮಹಾ ಸಂಸ್ಥಾನಂ ಮಠಕ್ಕೆ ಈಗಲೂ ನಾನೇ ಸ್ವಾಮೀಜಿ. ಬೇರೆ ಸ್ವಾಮೀಜಿ ನೇಮಿಸು​ತ್ತಾ​ರೆಂಬ ಸಂಗತಿಯಲ್ಲಿ ಯಾವುದೇ ಹುರುಳಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿ​ತು ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು ಹೇಳಿದ್ದಾರೆ. 

ಇಲ್ಲಿನ ಕೂಡಲಿ ಶೃಂಗೇರಿ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಠದ ಆಸ್ತಿ ಕಬಳಿಸಲು ಗುಂಪೊಂದು ಯತ್ನಿಸುತ್ತಿದೆ. ಇದೇ ಗುಂಪು ಮಠಕ್ಕೆ ನುಗ್ಗಿ ಶಿಷ್ಯರ ಮೇಲೆ ಹಲ್ಲೆ ನಡೆಸಿತ್ತು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸ್ಥಳೀಯರು ಭಾಗಿಯಾಗಿದ್ದಾರೆಂದು ದೂರಿದರು.

15ನೇ ಶತಮಾನದಿಂದ ಈ ಮಠ ಕಾರ್ಯ ನಿರ್ವಹಿಸುತ್ತಿದ್ದು, ರಾಜ ಮಹಾರಾಜರು ಮಠಕ್ಕೆ ನಡೆದುಕೊಂಡು ಬಂದಿದ್ದಾರೆ. ಕೆಲ ವರ್ಷಗಳ ಕಾಲ ಸರ್ಕಾರ ಈ ಮಠವನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು. ಹಿರಿಯ ಗುರುಗಳ ಹೋರಾಟದ ಫಲ ಸರ್ಕಾರದಿಂದ ವಾಪಸ್ಸು ಪಡೆದುಕೊಳ್ಳಲಾಗಿದೆ ಎಂದರು.

ಮುರುಘಾ ಶರಣರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮಠಕ್ಕೆ ಸೇರಿದ ಸಾವಿರಾರು ಎಕರೆ ಜಮೀನು ಇದೆ. ಹೀಗಾಗಿ ಮಠ​ದಲ್ಲಿ ಸ್ವಾಮೀಜಿ ಹೊರತು ಪಡಿಸಿದ ಸಮಿತಿಯೊಂದನ್ನು ರಚಿಸಿಕೊಂಡರೆ ಆಸ್ತಿ ಕಬಳಿಸಲು ಸುಲಭವಾಗುತ್ತದೆ ಎಂದು ಕೆಲವರು ಹುನ್ನಾರ ನಡೆಸಿದ್ದಾರೆ. ಇದಕ್ಕೆ ತಾವು ಒಪ್ಪಿಗೆ ಸೂಚಿಸಿರಲಿಲ್ಲ. ಈ ಕಾರಣಕ್ಕಾಗಿಯೇ ಮಠಕ್ಕೆ ನುಗ್ಗಿ ದಾಂಧಲೆ ಮಾಡಲಾಗಿತ್ತು. ಸಂಸ್ಥಾನದ ಸಮಿತಿ ವಿಚಾರ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ ಎಂದರು. ದಾಂಧಲೆ ಹಿನ್ನೆಲೆಯಲ್ಲಿ ಕೂಡಲಿ ಮಠದಲ್ಲಿ ಅಶಾಂತಿ ಇದೆ. ಮತ್ತೆ ಗಲಾಟೆಯಾಗುವ ಸಾಧ್ಯತೆಯಿಂದಾಗಿ ತಾವು ಚಿತ್ರದುರ್ಗದ ಶಾಖಾ ಮಠದಲ್ಲಿ ಕೆಲ ದಿನಗಳ ಕಾಲ ಮೊಕ್ಕಾಂ ಹೂಡಿ ನಂತರ ಮೂಲಮಠಕ್ಕೆ ತೆರಳಲಿದ್ದೇನೆ ಎಂದರು.

ಗುಂಪೊಂದು ಮಠಕ್ಕೆ ಬಂದು ಮಠವನ್ನು ಬಿಟ್ಟು ಹೋಗಿ ಎಂದು ಕೂಗಾಡುತ್ತಿದ್ದಾಗ ಮಾತಿನ ಭರದಲ್ಲಿ ಏನಾದರು ಮಾಡಿಕೊಳ್ಳಿ ಎಂದಿದ್ದೆ. ಇದನ್ನೇ ಆಧಾರವಾಗಿಟ್ಟು ಕೊಂಡ ಗುಂಪು ಶ್ರೀಗಳು ಉತ್ತರಾಧಿಕಾರಿ ನೇಮಿಸಲು ನಮಗೆ ಆಧಿಕಾರ ನೀಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಾ ಭಕ್ತರ ದಾರಿ ತಪ್ಪಿಸುತ್ತಿದ್ದಾರೆ ಎಂದ​ರು.