ರಘುಪತಿ ಭಟ್ ಬೀಳುವುದಕ್ಕೂ ಪ್ರಮೋದ್ ಮಧ್ವರಾಜ್ ಬಿಜೆಪಿಯೊಳಗೆ ಕಾಲಿಡುವುದಕ್ಕೂ ಸಂಬಂಧ?
* ಉಡುಪಿ ಶಾಸಕ ರಘುಪತಿ ಭಟ್ ಅವರು ಕಾಲು ಜಾರಿ ಬಿದ್ದ ವಿಡಿಯೋ ವೈರಲ್
* ರಘುಪತಿ ಭಟ್ ಬೀಳುವುದಕ್ಕೂ ಪ್ರಮೋದ್ ಮಧ್ವರಾಜ್ ಬಿಜೆಪಿಯೊಳಗೆ ಕಾಲಿಡುವುದಕ್ಕೂ ಸಂಬಂಧ?
* ಬಿಜೆಪಿಯ ಹಾಲಿ ಶಾಸಕ ರಘುಪತಿ ಭಟ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್
ಉಡುಪಿ(ಮೇ.08): ಉಡುಪಿ ಶಾಸಕ ರಘುಪತಿ ಭಟ್ ಅವರು ಕಾಲು ಜಾರಿ ಬಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ, ಬಿಜೆಪಿಯ ಹಾಲಿ ಶಾಸಕ ರಘುಪತಿ ಭಟ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ರಘುಪತಿ ಭಟ್ ಕಾಲುಜಾರಿ ಬೀಳುವುದಕ್ಕೂ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗುವುದಕ್ಕೂ ಸಂಬಂಧವಿಲ್ಲ ತಾನೆ?! ಎಂದು ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ.
ಕಳೆದ ಶುಕ್ರವಾರ ಉಡುಪಿಯ ಮಲ್ಪೆ ಬೀಚ್ ನಲ್ಲಿ ತೇಲುವ ಸೇತುವೆ ಉದ್ಘಾಟನಾ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದ ಉದ್ಘಾಟನೆಗೆ ಹಾಲಿ ಶಾಸಕ ರಘುಪತಿ ಭಟ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇಬ್ಬರು ಅತಿಥಿಗಳಾಗಿ ಆಹ್ವಾನಿತರಾಗಿದ್ದರು. ಇಬ್ಬರು ಜಂಟಿಯಾಗಿ ಈ ತೇಲುವ ಸೇತುವೆಯನ್ನು ಉದ್ಘಾಟನೆ ಮಾಡಿದ ನಂತರ, ಜಾಕೆಟ್ ಧರಿಸಿಕೊಂಡು ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ಸಾಹಸಯಾತ್ರೆ ನಡೆಸಿದ್ದರು.
ರಘುಪತಿ ಭಟ್ ಅವರಂತೂ ಚುರುಕಿನ ನಡೆಯಿಂದ ತರಾತುರಿಯಲ್ಲಿ ಓಡೋಡಿ ಬ್ರಿಡ್ಜ್ ನ ತುದಿ ತಲುಪುವುದಕ್ಕೆ ಪ್ರಯತ್ನಿಸಿದರು. ಈ ವೇಳೆ ಅಲೆಯ ಅಬ್ಬರಕೆ ಸೇತುವೆ ಮೇಲಕ್ಕೆ ಹಾರಿದಾಗ ಬ್ಯಾಲೆನ್ಸ್ ಕಳೆದುಕೊಂಡ ರಘುಪತಿಭಟ್ ಕಾಲುಜಾರಿ ಬೀಳುವಂತಾಯಿತು.
ತೇಲುವ ಸೇತುವೆಯಲ್ಲಿ ಈ ರೀತಿ ಬಿದ್ದು ಎಂಜಾಯ್ ಮಾಡುವುದನ್ನೇ ಪ್ರವಾಸಿಗರು ಖುಷಿಪಡುತ್ತಾರೆ. ಶಾಸಕ ಭಟ್ ಕೂಡ ಬಿದ್ದು ಎದ್ದು ಸುಧಾರಿಸಿಕೊಂಡು ಕೊನೆಗೂ ಸೇತುವೆಯ ತುದಿ ತಲುಪಿದ್ದರು. ರಘುಪತಿ ಭಟ್ ಬಿದ್ದಿರುವುದನ್ನು ಕಂಡ ಪ್ರಮೋದ್ ಮಧ್ವರಾಜ್, ಇಬ್ಬರ ನೆರವಿನೊಂದಿಗೆ ಸುಧಾರಿಸಿಕೊಂಡು ನಿಧಾನವಾಗಿ ನಡೆಯುತ್ತಲೇ ಬಂದು ದಡ ಸೇರಿದ್ದರು. ಬಿದ್ದರೂ ತೊಂದರೆ ಇಲ್ಲ ಮಾಧ್ಯಮದವರ ಕ್ಯಾಮೆರಾ ಕಣ್ಣಿಗೆ ಕಾಣುವ ಭಯ ಇತ್ತು ಎಂದು ಹೇಳಿ ನಗುನಗುತ್ತಲೇ ಹೋಗಿದ್ದರು.
ಈ ಘಟನೆ ನಡೆದ ಮರುದಿನವೇ ಪ್ರಮೋದ್ ಮಧುರಾಜ್ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಒಂದೇ ಗಂಟೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕರಾವಳಿಯ ರಾಜಕೀಯ ಸಮೀಕರಣಗಳು ಪ್ರಮೋದ್ ಮಧ್ವರಾಜ್ ಸೇರ್ಪಡೆಯಿಂದ ಸಾಕಷ್ಟು ಪ್ರಭಾವಗೊಳ್ಳುವ ಸಾಧ್ಯತೆಗಳಿವೆ. ತಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಹೇಳಿದರೂ ಚುನಾವಣೆಯ ಸಂದರ್ಭದಲ್ಲಿ ಪಕ್ಷದೊಳಗೆ ರಘುಪತಿ ಭಟ್ ಗೆ ಪ್ರಮೋದ್ ಮಧ್ವರಾಜ್ ಎದುರಾಳಿಯಾದರೂ ಆಶ್ಚರ್ಯವಿಲ್ಲ. ಅಥವಾ ಮೊಗವೀರ ಸಮುದಾಯದ ಪ್ರಾಬಲ್ಯ ಇರುವ ಕರಾವಳಿಯ ಯಾವುದೇ ಕ್ಷೇತ್ರದಲ್ಲಿ ನಿಲ್ಲುವ ಬೇಡಿಕೆಯನ್ನು ಪ್ರಮೋದ್ ಮಧ್ವರಾಜ್ ಇರಿಸಬಹುದು.
ಶಾಸಕ ರಘುಪತಿ ಭಟ್ ಸೇರಿದಂತೆ ಬಿಜೆಪಿಯೊಳಗಿನ ಮೊಗವೀರ ಸಮುದಾಯದ ನಾಯಕರಿಗೆ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯನ್ನು ಅಷ್ಟೊಂದು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ
ರಘುಪತಿ ಭಟ್ ಪ್ರಮೋದ್ ಮಧ್ವರಾಜ್ ಬಾಲ್ಯದ ಗೆಳೆಯರು!
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ರಘುಪತಿಭಟ್ ಬಾಲ್ಯದ ಗೆಳೆಯರು. ಇಬ್ಬರೂ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಒಂದೇ ಶಾಲೆಯಲ್ಲಿ ಪೂರೈಸಿದ್ದಾರೆ. ಮೇಲಾಗಿ ಇಬ್ಬರೂ ಒಂದೇ ತರಗತಿಯಲ್ಲಿ ಪಾಠ ಕೇಳಿದ್ದಾರೆ. ಒಂದು ಕಾಲದ ಕ್ಲಾಸ್ಮೇಟ್ಸ್ ನಂತರ ರಾಜಕೀಯ ಎದುರಾಳಿ ಗಳಾಗಿದ್ದಾರೆ. ಸೋಲಿಲ್ಲದ ಸರದಾರ ಎಂಬ ಖ್ಯಾತಿಗೆ ಪಾತ್ರವಾದ ರಘುಪತಿ ಭಟ್ ಗೆ, ಕ್ಲಾಸ್ಮೇಟ್ ಗೆಳೆಯ ಪ್ರಮೋದ್ ಮಧ್ವರಾಜ್ ಗೆಲುವಿನ ಓಟದಲ್ಲಿ ಸಾತ್ ನೀಡುತ್ತಾರೋ ಅಥವಾ ಎದುರಾಳಿ ಆಗುತ್ತಾರೋ ಕಾದು ನೋಡಬೇಕು!