ಕೊಡಗು: ಮೂಲಭೂತ ಸೌಕರ್ಯಗಳ ಕೊರತೆ, ನೂತನ ಮನೆಗಳಿಗೆ ಬಾರದ ಸಂತ್ರಸ್ತರು..!
ಒಂದೆಡೆ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸೇರಿದಂತೆ ವಿವಿಧ ಮೂಲಸೌಲಭ್ಯಗಳ ಕೊರತೆಯಿಂದ 90 ಕ್ಕೂ ಹೆಚ್ಚು ಮನೆಗಳು ಪಾಳುಬಿದ್ದಿವೆ. ಮನೆಗಳ ಸುತ್ತಮುತ್ತ ಗಿಡಗಂಟಿ, ಕಾಡುಗಳು ಬೆಳೆದುಕೊಂಡಿದ್ದು, ಯಾವುದೋ ಹಾಳುಕೊಂಪೆಯ ರೀತಿ ಬಾಸವಾಗುತ್ತಿದೆ. ಬಹುತೇಕ ಮನೆಗಳ ಸುತ್ತಮುತ್ತ ಕಾಡು ಬೆಳೆದು ಸದ್ಯ ವಾಸಿಸುತ್ತಿರುವ 25 ಕುಟುಂಬಗಳು ಭಯದಲ್ಲಿ ವಾಸಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುವುದು ಜನರ ಅಸಮಾಧಾನ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಜೂ.08): ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ನಡೆದಿದ್ದ ಭೀಕರ ಭೂಕುಸಿತ ಮತ್ತು ಪ್ರವಾಹದಿಂದ ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದು ಗೊತ್ತೇ ಇದೆ. ಈ ಕುಟುಂಬಗಳಿಗೆ ಸರ್ಕಾರ ತಲಾ 9.98 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟಿತ್ತು. ಅದರಲ್ಲಿ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಗೂಡು ಎಂಬಲ್ಲಿ ನಿರ್ಮಿಸಿರುವ 140 ಮನೆಗಳ ಪೈಕಿ 50 ಕ್ಕೂ ಹೆಚ್ಚು ಮನೆಗಳು ಕಾಡು ಪಾಲಾಗುತ್ತಿದೆ. ಅದಕ್ಕೆ ಕಾರಣ ಇಲ್ಲಿ ಜನರಿಗೆ ಮನೆ ನೀಡಿದರೂ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ಈ ಮನೆಗಳಿಗೆ ವಾಸಕ್ಕೆ ಬಾರದಿರುವುದು.
ಹೌದು, ಮಡಿಕೇರಿಯಿಂದ 10 ಕಿಲೋ ಮೀಟರ್ ದೂರದಲ್ಲಿ ಇರುವ ಈ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿ 2021 ರಲ್ಲಿ 75 ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂತ್ರಸ್ತ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು. ಅವರಲ್ಲಿ 25 ಕುಟುಂಬಗಳು ಮಾತ್ರವೇ ಮನೆಗಳಿಗೆ ಬಂದು ವಾಸ ಮಾಡುತ್ತಿವೆ. ಉಳಿದ 50 ಮನೆಗಳಿಗೆ ಜನರು ವಾಸಕ್ಕೆ ಬಂದಿಲ್ಲ. 2021 ರ ನಂತರ ಉಳಿದ 55 ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಅವುಗಳಲ್ಲಿ 40 ಮನೆಗಳಿಗೆ ಇಂದಿಗೂ ಫಲಾನುಭವಿಗಳನ್ನೇ ಆಯ್ಕೆ ಮಾಡಿಲ್ಲ.
'ಹಿಂದಿನ ಸಂಸದರ ರೀತಿ ಇರಬೇಡಿ' ಯದುವೀರ್ ಒಡೆಯರ್‌ಗೆ ಪರಾಜಿತ ಅಭ್ಯರ್ಥಿ ಎಂ ಲಕ್ಷ್ಮಣ್ ಕಿವಿಮಾತು
ಒಟ್ಟಿನಲ್ಲಿ ಒಂದೆಡೆ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸೇರಿದಂತೆ ವಿವಿಧ ಮೂಲಸೌಲಭ್ಯಗಳ ಕೊರತೆಯಿಂದ 90 ಕ್ಕೂ ಹೆಚ್ಚು ಮನೆಗಳು ಪಾಳುಬಿದ್ದಿವೆ. ಮನೆಗಳ ಸುತ್ತಮುತ್ತ ಗಿಡಗಂಟಿ, ಕಾಡುಗಳು ಬೆಳೆದುಕೊಂಡಿದ್ದು, ಯಾವುದೋ ಹಾಳುಕೊಂಪೆಯ ರೀತಿ ಬಾಸವಾಗುತ್ತಿದೆ. ಬಹುತೇಕ ಮನೆಗಳ ಸುತ್ತಮುತ್ತ ಕಾಡು ಬೆಳೆದು ಸದ್ಯ ವಾಸಿಸುತ್ತಿರುವ 25 ಕುಟುಂಬಗಳು ಭಯದಲ್ಲಿ ವಾಸಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುವುದು ಜನರ ಅಸಮಾಧಾನ.
ಮನೆಗಳನ್ನು ಹಂಚಿಕೆ ಮಾಡಿದ್ದರೂ ಮನೆ ಪಡೆದಿರುವ ಫಲಾನುಭವಿಗಳು ಮನೆಗಳಿಗೆ ಬರಲು ಹಿಂದೇಟು ಹಾಕುತ್ತಿರುವುದಕ್ಕೆ ಮುಖ್ಯ ಕಾರಣ ಗ್ರಾಮಕ್ಕೆ ರಸ್ತೆ ಸಂಪರ್ಕ ಸರಿಯಾಗಿಲ್ಲದೆ ಇರುವುದು. ರಸ್ತೆ ಬಹುತೇಕ ಹೊಂಡ ಗುಂಡಿಗಳಿಂದ ಹಾಳಾಗಿದ್ದು ಕನಿಷ್ಠ ಬೈಕ್ ಕೂಡ ಸಂಚರಿಸುವುದಕ್ಕೆ ಸಾಧ್ಯವಿಲ್ಲದಂತ ಸ್ಥಿತಿಯಲ್ಲಿ ಇದೆ. 25 ಕುಟುಂಬಗಳ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರು ಕಿಲೋಮೀಟರ್ ದೂರದಲ್ಲಿ ಇರುವ ಗಾಳಿಬೀಡು ಶಾಲೆಗೆ ನಡೆದುಕೊಂಡೇ ಹೋಗಿ ಬರಬೇಕು. ಮಳೆ ಶುರುವಾಯಿತ್ತೆಂದರೆ ಈ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಎದುರಾಗಲಿದೆ.
ಇನ್ನು ಈ ನೂತನ ಬಡಾವಣೆಯಲ್ಲಿ ಚರಂಡಿಗಳ ವ್ಯವಸ್ಥೆ ಸರಿಯಿಲ್ಲ, 25 ಕುಟುಂಬಗಳಿಗೆ ಕೇವಲ ಒಂದೇ ಒಂದು ಟ್ಯಾಂಕ್ ಇದ್ದು ಅದಕ್ಕೂ ಸರಿಯಾದ ಸಮರ್ಪಕವಾದ ನೀರಿನ ಪೂರೈಕೆ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳಿರುವುದನ್ನು ಇದುವರೆಗೆ ಜಿಲ್ಲಾಧಿಕಾರಿ, ಶಾಸಕರು ಮತ್ತು ಸಚಿವರ ಗಮನಕ್ಕೂ ತರಲಾಗಿದೆ. ಆದರೆ ಯಾರೂ ನಮ್ಮ ಸಮಸ್ಯೆ ಬಗೆಹರಿಸಲು ಸಿದ್ಧರಲ್ಲ ಎನ್ನುವುದು ಜನರ ಆಕ್ರೋಶ.
ಕೊಡಗು: ಸೋರಿಕೆಯಿಲ್ಲದೆ ಕೃಷಿ ಭೂಮಿಗೆ ಹರಿಯಲಿದೆಯಾ ಹಾರಂಗಿ ನೀರು?
ಈ ಕುರಿತು ಉಪವಿಭಾಗಧಿಕಾರಿಯವರನ್ನು ಕೇಳಿದರೆ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ಅವರಿಂದ ಇನ್ನೂ ಸಾಕಷ್ಟು ಕೆಲಸಗಳನ್ನು ಪೂರೈಸಬೇಕಾಗಿದೆ. ಹೀಗಾಗಿ ಬಡಾವಣೆಯನ್ನು ನಾವು ಅವರಿಂದ ಹ್ಯಾಂಡ್ ಓವರ್ ಮಾಡಿಕೊಂಡಿಲ್ಲ. ಆದ್ದರಿಂದ ಸೌಲಭ್ಯಗಳನ್ನು ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಒಟ್ಟಿನಲ್ಲಿ ಇಲಾಖೆಗಳ ನಡುವಿನ ಗೊಂದಲಗಳಿಂದಾಗಿ ಇಲ್ಲಿನ ಕುಟುಂಬಗಳಿಗೆ ಮೂಲಸೌಲಭ್ಯಗಳಿಲ್ಲದೆ ಇರುವುದರಿಂದ ಜನರು ಬರುತ್ತಿಲ್ಲ, ಹೀಗಾಗಿ ಮನೆಗಳು ಕಾಡಪಾಲಾಗುತ್ತಿರುವುದು ವಿಪರ್ಯಾಸ. ಸರ್ಕಾರದ ಮಹತ್ವಕಾಂಕ್ಷೆಯ ವಸತಿ ಯೋಜನೆ ಹಳ್ಳ ಹಿಡಿಯಿತಾ ಎನ್ನುವ ಅನುಮಾನ ಕಾಡುತ್ತಿದೆ.