ಬೆಂಗಳೂರು [ಜು.04]:   ಮಹಿಳೆ ಮತ್ತು ಮಕ್ಕಳ ಮೇಲಿನ ಲೌಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಸಂತ್ರಸ್ತರರೊಂದಿಗೆ ಮಾಹಿತಿ ಹಂಚಿಕೊಳ್ಳಲು ಪೊಲೀಸ್‌ ಠಾಣೆಗಳಲ್ಲಿ ‘ನೊಂದವರ ದಿನ’ ಆಚರಣೆಗೆ ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ನಿರ್ಧರಿಸಿದ್ದಾರೆ.

ನಗರದಲ್ಲಿ ಬುಧವಾರ ತಮ್ಮ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ಲೈಂಗಿಕ ಶೋಷಣೆಗೆ ತುತ್ತಾದವರಿಗೆ ನ್ಯಾಯ ಕೊಡಿಸುವ ಬಹುದೊಡ್ಡ ಜವಾಬ್ದಾರಿ ಪೊಲೀಸರ ಮೇಲಿದೆ ಎಂದರು.

ಹೀಗಾಗಿ ಗಂಭೀರ ಸ್ವರೂಪದ ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣಗಳ ತನಿಖೆ ಸಹ ಸೂಕ್ಷ್ಮವಾಗಿ ನಡೆಸಬೇಕಿದೆ. ನ್ಯಾಯಾಲಯದಲ್ಲಿನ ವಿಚಾರಣೆ ಅತಿ ಮುಖ್ಯವಾಗಿರುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ತನಿಖಾ ಹಂತ ಅಥವಾ ನ್ಯಾಯಾಲಯದ ವಿಚಾರಣೆ ಹಂತದಲ್ಲಿ ಪ್ರಕರಣದಿಂದ ಹಿಂದೆ ಸರಿಯುವಂತೆ ದೂರುದಾರರು ಹಾಗೂ ಸಾಕ್ಷಿಗಳಿಗೆ ಬೆದರಿಕೆ, ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತವೆ. ಇದರಿಂದ ಪ್ರಕರಣದ ಅಂತಿಮ ಆದೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆಯುಕ್ತರು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಲೈಂಗಿಕ ಶೋಷಣೆ ಪ್ರಕರಣದ ಸಂತ್ರಸ್ತರ ಆಹವಾಲು ಆಲಿಕೆಗೆ ಮತ್ತು ಪ್ರಕರಣದ ತನಿಖೆ ಪ್ರಗತಿ ಕುರಿತು ಮಾಹಿತಿ ಹಂಚಿಕೊಳ್ಳಲು ಪ್ರತಿ ಠಾಣಾ ಮಟ್ಟದಲ್ಲಿ ‘ನೊಂದವರ ದಿನ’ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ಆರೋಪಿಗಳಿಂದ ಜೀವ ಭೀತಿಗೆ ಒಳಗಾಗಿದ್ದರೆ ಸಂತ್ರಸ್ತರ ರಕ್ಷಣೆ ಪೊಲೀಸರ ಹೊಣೆಗಾರಿಕೆಯಾಗಿದೆ. ಅವರ ಮನೆ ಹಾಗೂ ಕಚೇರಿ ಕಡೆ ಗಸ್ತಿಗೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ನೊಂದವರಿಗೆ ಯಾವುದೇ ರೀತಿಯ ಸಹಾಯವನ್ನು ನೀಡಲು ಪೊಲೀಸರು ಮುಂದಾಗಬೇಕು. ಈ ಎಲ್ಲಾ ವಿಚಾರಗಳ ಬಗ್ಗೆ ನೊಂದವರ ದಿನದಂದು ಬಗ್ಗೆ ಚರ್ಚೆಸಲಾಗುತ್ತದೆ ಎಂದರು.

ಶೋಷಿತರಿಂದ ಆಹವಾಲು ಸ್ವೀಕರಿಸಿದ ಬಳಿಕ ತನಿಖಾಧಿಕಾರಿ ಮತ್ತು ಹಿರಿಯ ಅಧಿಕಾರಿಯ, ಆ ಕ್ಷಣದಿಂದಲೇ ಆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ತನ್ಮೂಲಕ ಸಂತ್ರಸ್ತರಲ್ಲಿ ಅಸುರಕ್ಷತೆ ಭಾವನೆ ತೊಲಗಿಸಿ ಭರವಸೆ ಮೂಡಿಸಬೇಕು ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

 ಜನಸ್ನೇಹಿ ಪೊಲೀಸ್‌

ನಾಗರಿಕರ ಜೊತೆ ಪೊಲೀಸರ ನಡವಳಿಕೆ ಬದಲಾಗಬೇಕಿದೆ ಎಂದು ಗೃಹ ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಹೀಗಾಗಿ ಸರ್ಕಾರದ ‘ಜನ ಸ್ನೇಹಿ ಪೊಲೀಸ್‌’ ಯೋಜನೆಯು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಿದೆ ಎಂದು ಆಯುಕ್ತರು ಹೇಳಿದರು.

ನಿಯಮಿತವಾಗಿ ಠಾಣಾ ಮಟ್ಟದಲ್ಲಿ ನಾಗರಿಕ ಸಮಿತಿಗಳ ಸಭೆ ನಡೆಸಬೇಕು. ಠಾಣೆಗಳಿಗೆ ಸಮಸ್ಯೆ ಹೊತ್ತು ಬರುವ ನಾಗರಿಕರ ಜತೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಹಾಗೆಯೇ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿದರೆ ಕಡ್ಡಾಯವಾಗಿ ಸಂಜೆ 4ರಿಂದ ಸಾರ್ವಜನಿಕರಿಂದ ಇನ್ಸ್‌ಪೆಕ್ಟರ್‌ಗಳು ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಸೂಚಿಸಿದರು.

 ಟೋಕನ್‌ ವ್ಯವಸ್ಥೆ

ಜನರ ಸಮಸ್ಯೆ ಪರಿಹಾರಕ್ಕೆ ‘ಟೋಕನ್‌ ವ್ಯವಸ್ಥೆ’ ಜಾರಿಗೊಳಿಸಲು ಆಯುಕ್ತರು ಚಿಂತನೆ ನಡೆಸಿದ್ದಾರೆ.

ಠಾಣಾ ಮಟ್ಟದಲ್ಲಿ ಜನರ ದೂರುಗಳು ಇತ್ಯರ್ಥವಾಗಬೇಕು. ಅಲ್ಲಿ ಪರಿಹಾರ ಕಾಣದೆ ಹೋದರೆ ಮಾತ್ರ ಮೇಲಾಧಿಕಾರಿಗಳಿಗೆ ವರ್ಗಾವಣೆಯಾಗಬೇಕು. ಠಾಣೆಗಳಲ್ಲಿ ದಾಖಲಾಗುವ ದೂರುಗಳಿಗೆ ಒಂದು ಸಂಖ್ಯೆ ನೀಡುವ ಮೂಲಕ ಟೋಕನ್‌ ವ್ಯವಸ್ಥೆಯನ್ನು ಜಾರಿ ಮಾಡುವ ಉದ್ದೇಶವಿದೆ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

 ಠಾಣೆಗಳಲ್ಲಿ ಮಕ್ಕಳ ಆಟದ ವಸ್ತುಗಳು!

ಜನಸ್ನೇಹಿ ಠಾಣೆ ಎಂದರೆ ಕೇವಲ ಸ್ನೇಹಮಯ ವರ್ತನೆ ಮಾತ್ರವಲ್ಲ, ಠಾಣಾ ಆವರಣದಲ್ಲಿ ಕಿರು ಉದ್ಯಾನ ನಿರ್ಮಾಣ, ಮಕ್ಕಳ ಜೋಕಾಲಿ, ಪುಟ್ಟಜಾರು ಬಂಡೆ ಸೇರಿದಂತೆ ಇನ್ನಿತರ ಪರಿಕರಗಳನ್ನು ಅಳವಡಿಸಬೇಕು. ಈ ನಿಟ್ಟಿನಲ್ಲಿ ಕೋರಮಂಗಲ ಠಾಣೆಯನ್ನು ಮಾದರಿ ಜನಸ್ನೇಹಿ ಠಾಣೆಯಾಗಿ ಆಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.