ಹುಬ್ಬಳ್ಳಿ(ಫೆ.02):ರಾಜ್ಯದಲ್ಲಿ ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾದ ಬಿಆರ್‌ಟಿಎಸ್‌ (ಹುಬ್ಬಳ್ಳಿ- ಧಾರವಾಡ ತ್ವರಿತ ಬಸ್‌ ಸಂಚಾರ ವ್ಯವಸ್ಥೆ) ಕಾರಿಡಾರ್‌ ಇಂದು(ಫೆ.02) ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಲೋಕಾರ್ಪಣೆಗೊಳಿಸಲಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ.

ಇಂದು ಮಧ್ನಾಹ್ನ 2.30 ಗಂಟೆಗೆ ನಗರದ ಹೊಸೂರಿನ ಪ್ರಾದೇಶಿಕ ಬಸ್‌ ನಿಲ್ದಾಣ ಹಾಗೂ ಚಿಗರಿ ಬಸ್‌ಗಳಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಸಿರು ನಿಶಾನೆ ತೋರಿಸಲಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಸ್‌ ಮೂಲಕವೇ ನವನಗರಕ್ಕೆ ತೆರಳಿ 2.45ಕ್ಕೆ ಅಲ್ಲಿ ಬಸ್‌ ನಿಲ್ದಾಣ ಉದ್ಘಾಟಿಸುವರು. ಮಧ್ಯಾಹ್ನ 3 ಗಂಟೆಗೆ ರಾಯ್ಕರ ಮೈದಾನದಲ್ಲಿ ಏರ್ಪಡಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉಪಸ್ಥಿತರಿರಲಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಉಪಸ್ಥಿತರಿರುವರು. ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಎಸ್‌.ವಿ. ಸಂಕನೂರ, ಬಸವರಾಜ ಹೊರಟ್ಟಿ, ಪ್ರದೀಪ್‌ ಶೆಟ್ಟರ್‌, ಶ್ರೀನಿವಾಸ ಮಾನೆ, ಸಿ.ಎಂ. ನಿಂಬಣ್ಣವರ, ಅಬ್ಬಯ್ಯ ಪ್ರಸಾದ, ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್‌. ಪಾಟೀಲ ಅತಿಥಿಗಳಾಗಿ ಅಗಮಿಸುವವರು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ, ವಸತಿ ಮತ್ತು ನಗರ ಸಚಿವಾಲಯ ಕಾರ್ಯದರ್ಶಿ ದುರ್ಗಾ ಶಂಕರ ಮಿಶ್ರಾ, ಕರ್ನಾಟಕ ಸರ್ಕಾರ ಸಾರಿಗೆ, ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ , ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ವಿ. ಪೊನ್ನುರಾಜ, ಎಚ್‌ಡಿಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಜಿಲ್ಲಾಧಿಕಾರಿ ದೀಪಾ ಚೋಳನ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ವಿಶೇಷತೆಗಳೇನು?:

ಕೇಂದ್ರ, ರಾಜ್ಯ ಸರ್ಕಾರ ಮತ್ತು ವಿಶ್ವ ಬ್ಯಾಂಕ್‌ ಜಂಟಿ ಯೋಜನೆಯಾಗಿ ಸುಮಾರು 970.87 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲಾಗಿದೆ. ನರ್ಮ್ ಯೋಜನೆಯಡಿ 100 ಎಸಿ ಬಸ್‌ ಖರೀದಿಸಲಾಗಿದೆ. ಮಹಾನಗರದ ಮಧ್ಯೆ 32 ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. 6 ಪಾದಚಾರಿ ಮೇಲ್ಸೇತುವೆ, ಹೊಸೂರಿನ 17 ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಇಲ್ಲಿ ಇಂಟರ್‌ ಚೇಂಜ್‌, ಬಸ್‌ ಡಿಪೋ, ಕಚೇರಿ ಮತ್ತು ನಿಯಂತ್ರಣ ಕೇಂದ್ರಗಳಿವೆ. 2.5 ಎಕರೆ ಪ್ರದೇಶದಲ್ಲಿ ಉಪನಗರ ಸಾರಿಗೆ ಸೇವೆ ಒದಗಿಸಲು ಯೋಜಿಸಲಾಗಿದೆ. ಧಾರವಾಡ ಹೊಸ ಬಸ್‌ ನಿಲ್ದಾಣದಲ್ಲಿ 40 ಬಸ್‌ ಸಾಮರ್ಥ್ಯ ಡಿಪೋ ಹಾಗೂ ಹುಬ್ಬಳ್ಳಿ ಹೊಸ ಬಸ್‌ ನಿಲ್ದಾಣದ ಬಳಿ 113 ಬಸ್‌ ಸಾಮರ್ಥ್ಯದ ಡಿಪೋ ನಿರ್ಮಿಸಲಾಗಿದೆ.

2018 ಅ. 2 ರಿಂದಲೇ ಪ್ರಾಯೋಗಿಕವಾಗಿ ಬಿಆರ್‌ಟಿಎಸ್‌ ಬಸ್‌ ಸಂಚರಿಸುತ್ತಿವೆ. ಸದ್ಯ 100 ಬಸ್‌ಗಳು ಸಂಚರಿಸುತ್ತಿದ್ದು, 1204 ಟ್ರಿಪ್‌ಗಳು ಮಾಡುತ್ತಿವೆ. ಪ್ರತಿನಿತ್ಯ 1 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಪರಿಸರಕ್ಕೆ ಸಾಕಷ್ಟು ಲಾಭವಾಗುತ್ತಿದೆ. ಇಂಧನ ಬಳಕೆ ಇಳಿಮುಖವಾಗಿದೆ. ಈ ಸೇವೆಯಿಂದ ಸಾರ್ವಜನಿಕರಿಗೆ ಸಮಯ ಉಳಿತಾಯವಾಗುತ್ತಿದೆ. ಪ್ರತಿನಿತ್ಯ ಟಿಕೆಟ್‌ ಪಡೆಯುವುದನ್ನು ತಪ್ಪಿಸಲು ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗುತ್ತಿದೆ.

ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಲಕ್ನೋ ನಗರದ ಬಿಆರ್‌ಟಿಎಸ್‌ ಪ್ರತಿನಿತ್ಯ 60 ರಿಂದ 70 ಸಾವಿರ ಜನರಿಗೆ ಸೇವೆ ನೀಡುತ್ತಿದ್ದರೆ, ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲಿ ಇರುವ ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್‌ 1 ಲಕ್ಷ ಜನರಿಗೆ ಸೇವೆ ಒದಗಿಸುತ್ತಿದೆ.