ವಿಜಯಪುರ(ಮೇ.13):  ಬಿಎಲ್‌ಡಿಇ ಡೀಮ್ಡ್‌ ವಿಶ್ವವಿದ್ಯಾಲಯ ಉಪಕುಲಪತಿ ಹಾಗೂ ನಗರದ ಖ್ಯಾತ ವೈದ್ಯ ಡಾ.ಎಂ.ಎಸ್‌.ಬಿರಾದಾರ ಉಕ್ಕಲಿ (65) ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವಿದೆ. ಕೊರೋನಾ ರೋಗಿಗಳ ಸೇವೆ ಮಾಡುತ್ತಲೇ ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ಡಾ.ಎಂ.ಎಸ್‌. ಬಿರಾದಾರ ಅವರು ವಿಜಯಪುರದ ಮನೆಯಲ್ಲಿ ಹೋಮ್‌ ಕ್ವಾರಂಟೈನ್‌ ಆಗಿ ಗುಣಮುಖರಾಗಿದ್ದರು. ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರದಿಂದ ಏರ್‌ಆ್ಯಂಬುಲೆನ್ಸ್‌ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮಾರ್ಗ ಮಧ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತಕ್ಕೆ ಒಳಗಾದ ಅವರಿಗೆ ವೈದ್ಯರು ಹೆಚ್ಚಿನ ಚಿಕಿತ್ಸೆ ಮುಂದುವರೆದಿದ್ದರೂ ಅದು ಫಲಕಾರಿಯಾಗದೇ ನಿಧನ ಹೊಂದಿದರು. 

MB ಪಾಟೀಲ್‌ ನೇತೃತ್ವದ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸಾ ಶುಲ್ಕ ಶೇ.70 ಇಳಿಕೆ

ಮೃತರು ಮೂಲತಃ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಗುರುವಾರ ಬೆಳಗ್ಗೆ 8ಗಂಟೆಗೆ ಲಾಕ್ಡೌನ್‌ ನಿಯಮಾವಳಿಗಳ ಅನ್ವಯ ಸ್ವಗ್ರಾಮ ಉಕ್ಕಲಿಯ ತೋಟದಲ್ಲಿ ಜರುಗಿಸಲಾಗಿದೆ. ಶ್ರೇಷ್ಠ ವೈದ್ಯರಾಗಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುರುಗಳಾಗಿ ಮತ್ತು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಮಾನವೀಯ ಮೌಲ್ಯಗಳನ್ನು ಅಂತಃಕರಣ ಹೊಂದಿದ್ದ ಡಾ.ಎಂ.ಎಸ್‌.ಬಿರಾದಾರ ಅಗಲಿಕೆ ವೈಯಕ್ತಿಕವಾಗಿ ನನಗೆ ಅತೀವ ನೋವು ತಂದಿದೆ. ಅವರನ್ನು ಕಳೆದುಕೊಂಡು ವೈದ್ಯಕೀಯ ಕ್ಷೇತ್ರ ಹಾಗೂ ಬಿ.ಎಲ್‌.ಡಿ.ಇ ಸಂಸ್ಥೆ ಬಹುದೊಡ್ಡ ಸಂಕಷ್ಟಕ್ಕೆ ಇಡಾಗಿದೆ ಎಂದು ಮಾಜಿ ಸಚಿವ, ಬಿಎಲ್‌ಡಿಇ ಅಧ್ಯಕ್ಷ ಎಂ.ಬಿ. ಪಾಟೀಲ ಸಂತಾಪ ಸೂಚಿಸಿದ್ದಾರೆ.