ಬೆಂಗಳೂರು [ಜ.17]:  ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುವ ವಾಹನಗಳಿಗೆ ಕಡ್ಡಾಯ ಫಾಸ್ಟ್ಯಾಗ್‌ ಅಳವಡಿಕೆ ಗುರುವಾರದಿಂದ ಜಾರಿಗೆ ಬಂದಿದ್ದು, ಮೊದಲ ದಿನವೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಟೋಲ್‌ ಪ್ಲಾಜಾಗಳಲ್ಲಿ ವಾಹನ ಚಾಲಕರು ಮತ್ತು ಟೋಲ್‌ ಸಿಬ್ಬಂದಿ ನಡುವೆ ವಾಗ್ವಾದಗಳು ನಡೆದಿವೆ.

ಬೆಂಗಳೂರು- ತುಮಕೂರು ಹೆದ್ದಾರಿಯ ನೆಲಮಂಗಲ, ಬೆಂಗಳೂರು- ಹೊಸೂರು ಹೆದ್ದಾರಿಯ ಅತ್ತಿಬೆಲೆ, ಬಳ್ಳಾರಿ ರಸ್ತೆಯ ಟೋಲ್‌ ಪ್ಲಾಜಾಗಳಲ್ಲಿ ಕ್ಯಾಶ್‌ ಲೇನ್‌ ಹಾಗೂ ಫಾಸ್ಟ್ಯಾಗ್‌ ಲೇನ್‌ ವಿಚಾರದಲ್ಲಿ ಟೋಲ್‌ ಸಿಬ್ಬಂದಿ ಮತ್ತು ಚಾಲಕರ ನಡುವೆ ಬಿರುಸಿನ ವಾಗ್ವಾದಗಳು ನಡೆದಿವೆ. ಫಾಸ್ಟ್ಯಾಗ್‌ ಇಲ್ಲದ ವಾಹನಗಳು ಫಾಸ್ಟ್ಯಾಗ್‌ ಲೇನ್‌ನಲ್ಲಿ ಬಂದಿದ್ದರಿಂದ ಟೋಲ್‌ ಸಿಬ್ಬಂದಿ ದುಪ್ಪಟ್ಟು ಶುಲ್ಕ ಕೇಳಿದ್ದಾರೆ. ದುಪ್ಪಟ್ಟು ಶುಲ್ಕ ಪಾವತಿಸಲು ಒಪ್ಪದ ವಾಹನ ಚಾಲಕರು ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ಇದರಿಂದ ಇತರೆ ವಾಹನಗಳು ಸವಾರರು ಕಿರಿಕಿರಿ ಅನುಭವಿಸಿದರು.

ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಸಲು ಕೊನೆಯ ದಿನ..

ಫಾಸ್ಟ್ಯಾಗ್‌ ಅಳವಡಿಕೆಗೆ ಮೂರು ಬಾರಿ ಗಡುವು ವಿಸ್ತರಿಸುವ ಮೂಲಕ ಸುಮಾರು ಒಂದೂವರೆ ತಿಂಗಳ ಕಾಲಾವಕಾಶ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಫಾಸ್ಟ್ಯಾಗ್‌ ಇದ್ದ ವಾಹನಗಳಿಗೆ ಮಾತ್ರ ಫಾಸ್ಟ್ಯಾಗ್‌ ಲೇನ್‌ನಲ್ಲಿ ಸಂಚರಿಸಲು ಅವಕಾಶ ನೀಡಿದೆ. ಫಾಸ್ಟ್‌ ಟ್ಯಾಗ್‌ ಇಲ್ಲದ ವಾಹನಗಳು ಫಾಸ್ಟ್ಯಾಗ್‌ ಲೇನ್‌ನಲ್ಲಿ ಬಂದರೆ ದುಪ್ಪಟ್ಟು ಶುಲ್ಕ ವಸೂಲಿಗೆ ಆದೇಶಿಸಿರುವುದರಿಂದ ಮೊದಲ ದಿನವೇ ಟೋಲ್‌ ಸಿಬ್ಬಂದಿ ವಾಗ್ವಾದ-ಜಗಳ ನಡುವೆಯೂ ಮುಲಾಜಿಲ್ಲದೆ ದುಪ್ಪಟ್ಟು ಶುಲ್ಕಕ್ಕೆ ವಸೂಲಿಗೆ ಮುಂದಾದರು.

ಕ್ಯಾಶ್‌ ಲೇನ್‌ನಲ್ಲಿ ವಾಹನ ದಟ್ಟಣೆ:

ಟೋಲ್‌ ಪ್ಲಾಜಾಗಳ ಕ್ಯಾಶ್‌ ಲೇನ್‌ನಲ್ಲಿ ಟೋಲ್‌ ಸಿಬ್ಬಂದಿ ಪ್ರತಿ ವಾಹನದಿಂದ ಹಣ ಪಡೆದು ಶುಲ್ಕದ ರಶೀದಿ ನೀಡುತ್ತಿದ್ದರಿಂದ ಈ ಲೇನ್‌ನಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು. ಹೀಗಾಗಿ ವಾಹನ ಸವಾರರು ತಮ್ಮ ಸರದಿ ಬರುವವರೆಗೂ ಸರತಿ ಸಾಲಿನಲ್ಲೇ ಕಾಯಬೇಕಾಯಿತು. ಇನ್ನು ಫಾಸ್ಟ್ಯಾಗ್‌ ಲೇನ್‌ ಮತ್ತು ಕ್ಯಾಶ್‌ ಲೇನ್‌ನ ಆರಂಭದಲ್ಲೇ ಸಿಬ್ಬಂದಿಯನ್ನು ನಿಯೋಜಿಸಿದ್ದು, ವಾಹನದ ಫಾಸ್ಟ್ಯಾಗ್‌ ನೋಡಿಕೊಂಡು ಮೀಸಲು ಲೇನ್‌ಗಳಿಗೆ ಕಳುಹಿಸುತ್ತಿದ್ದರು. ಕೆಲ ಟೋಲ್‌ ಪ್ಲಾಜಾಗಳಲ್ಲಿ ಬ್ಯಾರಿಕೇಡ್‌ ಇರಿಸಿ ಲೇನ್‌ ಬೇರ್ಪಡಿಸಲಾಗಿತ್ತು.

 ಸ್ಕ್ಯಾನರ್‌ ಕೆಲಸ ಮಾಡದಿದ್ದರೂ ಹಣ ವಸೂಲಿ!

ಟೋಲ್‌ ಪ್ಲಾಜಾಗಳ ಫಾಸ್ಟ್ಯಾಗ್‌ ಲೇನ್‌ಗಳಲ್ಲಿ ಅಳವಡಿಸಿರುವ ಸ್ಕಾ್ಯನರ್‌ಗಳು ಕೆಲವು ಕಡೆ ಕೈಕೊಟ್ಟಿವೆ. ಹೀಗಾಗಿ ಟೋಲ್‌ ಸಿಬ್ಬಂದಿ ಹ್ಯಾಂಡ್‌ ರೀಡರ್‌ ಮೂಲಕ ಫಾಸ್ಟ್ಯಾಗ್‌ ಸ್ಟಿಕ್ಕರ್‌ಗಳನ್ನು ಸ್ಕಾ್ಯನ್‌ ಮಾಡಿದ್ದಾರೆ. ಹೀಗಾಗಿ ಕೆಲ ಕಡೆ ಫಾಸ್ಟ್ಯಾಗ್‌ ಲೇನ್‌ಗಳಲ್ಲೂ ವಾಹನ ದಟ್ಟಣೆ ಉಂಟಾಗಿತ್ತು. ಇದರಿಂದ ಕುಪಿತಗೊಂಡ ಚಾಲಕರು ಟೋಲ್‌ ಸಿಬ್ಬಂದಿ ಜತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಫಾಸ್ಟ್ಯಾಗ್‌ ಲೇನ್‌ನಲ್ಲಿ ಸ್ಕ್ಯಾನರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಹಣ ಕಡಿತಗೊಳ್ಳದಿದ್ದರೆ, ವಾಹನ ಮಾಲಿಕರು ಶುಲ್ಕ ನೀಡದೆ ಸಂಚರಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೇಳಿದೆ. ಆದರೂ ಕೆಲ ಕಡೆ ಟೋಲ್‌ ಸಿಬ್ಬಂದಿ ನಗದು ಪಡೆದು ಶುಲ್ಕ ರಶೀದಿ ಕೊಟ್ಟಿದ್ದಾರೆ.

ಫಾಸ್ಟ್‌ಟ್ಯಾಗ್‌ ಇಲ್ಲದವರಿಗೆ ಕೇಂದ್ರದಿಂದ ಸಿಹಿ ಸುದ್ದಿ..!..

ಕೇಂದ್ರ ಸರ್ಕಾರದ ಅದೇಶದ ಅನ್ವಯ ಗುರುವಾರದಿಂದಲೇ ಫಾಸ್ಟ್ಯಾಗ್‌ ಲೇನ್‌ ಬಳಸಿದ ಫಾಸ್ಟ್ಯಾಗ್‌ ರಹಿತ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಕಡ್ಡಾಯವಾಗಿ ಫಾಸ್ಟ್ಯಾಗ್‌ ಅಳವಡಿಸಿಕೊಳ್ಳಬೇಕು. ಇಲ್ಲವೇ ಸರತಿ ಸಾಲಿನಲ್ಲಿ ನಿಂತು ಕ್ಯಾಶ್‌ ಲೇನ್‌ನಲ್ಲಿ ಸಂಚರಿಸಬೇಕು.

-ಲಿಂಗೇಗೌಡ, ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿ ಹಿರಿಯ ಅಧಿಕಾರಿ.