ಜಗತ್ತಿನಲ್ಲಿ ಅತ್ಯಂತ ಕ್ರೂರಿ ಮತ್ತು ಮನುಷ್ಯತ್ವ ಇಲ್ಲದಿರುವವರು ಎಂದರೆ ಅದು ಸಸ್ಯಹಾರಿಗಳೇ. ಇತ್ತೀಚೆಗೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾಂಸ ನೇತು ಹಾಕುವುದು ನಿಲ್ಲಲಿ ಎಂದು ಹೇಳಿರುವುದೇ ಹಾಸ್ಯಾಸ್ಪದ: ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ 

ಬೆಂಗಳೂರು(ಜ.13): ಸಸ್ಯಾಹಾರಿಗಳಲ್ಲಿಯೇ ಹೆಚ್ಚಿನ ಕ್ರೂರತೆ ಅಡಗಿದ್ದು, ಜಗತ್ತಿನಲ್ಲಿ ಹೆಚ್ಚಿನ ಕೊಲೆಗಳು ಮನುಷ್ಯತ್ವ ಇಲ್ಲದ ಸಸ್ಯಾಹಾರಿಗಳಿಂದಲೇ ನಡೆದಿವೆ ಎಂದು ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ ಪ್ರತಿಪಾದಿಸಿದ್ದಾರೆ. ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ದ್ರಾವಿಡ ಸಂಘ(ಆರ್‌ಡಿಎಸ್‌) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಅತ್ಯಂತ ಕ್ರೂರಿ ಮತ್ತು ಮನುಷ್ಯತ್ವ ಇಲ್ಲದಿರುವವರು ಎಂದರೆ ಅದು ಸಸ್ಯಹಾರಿಗಳೇ. ಇತ್ತೀಚೆಗೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾಂಸ ನೇತು ಹಾಕುವುದು ನಿಲ್ಲಲಿ ಎಂದು ಹೇಳಿರುವುದೇ ಹಾಸ್ಯಾಸ್ಪದ. ಏಕೆಂದರೆ, ಹಿಟ್ಲರ್‌ ಸಹ ಸಸ್ಯಾಹಾರಿ. ಆತ ಲಕ್ಷಾಂತರ ಮಂದಿಯ ನರಮೇಧ ಮಾಡಿದ. ಭಾರತದ ಅತೀ ಕ್ರೂರಿ ಎಂದೇ ಸಾಬೀತು ಆಗಿರುವ ಸರಣಿ ಹತ್ಯೆಕೋರ ರಾಮನ್‌ ರಾಘವ್‌ ಸಹ ಸಸ್ಯಾಹಾರಿಯೇ ಆಗಿದ್ದ ಎಂದರು.

ಆರ್‌ಎಸ್‌ಎಸ್‌ ನಾವೆಲ್ಲಾ ಹಿಂದು, ನಾವೆಲ್ಲ ಒಂದು ಎಂದು ಘೋಷಣೆ ಮಾಡುತ್ತಿದ್ದರೂ, ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಪಾಲಿಸುತ್ತಿದೆ. ದಕ್ಷಿಣ ಭಾರತೀಯರ ಪ್ರತಿಯೊಬ್ಬರ ಡಿಎನ್‌ಎ ಪರಿಶೀಲನೆ ನಡೆಸಿದರೆ, ಒಂದೇ ಮಾದರಿಯಲ್ಲಿರುತ್ತದೆ. ಇದನ್ನು ಹೇಳದೆ ರಹಸ್ಯವಾಗಿ ಇಡಲಾಗುತ್ತಿದೆ. ಧರ್ಮ, ಜಾತಿ ಹೆಸರಿನಲ್ಲಿ ನಮ್ಮನ್ನು ಮಾನಸಿಕವಾಗಿ ದಿಕ್ಕು ತಪ್ಪಿಸಿ, ನಮ್ಮೊಳಗೆ ಅಸೂಯೆ, ದ್ವೇಷ ಬಿತ್ತಲಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಈ ನೆಲದ ದ್ರಾವಿಡ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ರಾಷ್ಟ್ರೀಯ ದ್ರಾವಿಡ ಸಂಘಟನೆ ಮಾಡಲಿದೆ. ಈ ಸಂಘಟನೆಯು ಯಾರನ್ನೋ ವಿರೋಧಿಸುವುದಿಲ್ಲ. ಎಲ್ಲರೂ ಪ್ರಜೆಗಳೇ ಆಗಿದ್ದು, ಎಲ್ಲರಿಗೂ ಮಾನ್ಯತೆ ನೀಡಬೇಕು. ಹೀಗಾಗಿ ಸಮಾನತೆಯ ಬದುಕಿಗೆ ಹೋರಾಡಲಿದೆ ಎಂದು ಹೇಳಿದರು.

ಧರ್ಮದ ಹೆಸರಲ್ಲಿ ದ್ವೇಷ, ದುರಂತ: ಆರ್‌ಎಸ್‌ಎಸ್‌ ವಿರುದ್ಧ ಜಾಗೃತಿಗೆ ದ್ರಾವಿಡ ಸಂಘ ಸ್ಥಾಪನೆ, ಅಗ್ನಿ ಶ್ರೀಧರ್‌

ಲೇಖಕ ಜಾಣಗೆರೆ ವೆಂಕಟರಾಮಯ್ಯ, ಚಿಂತಕ ಮುಕುಂದ್‌ ರಾಜ್‌, ದಲಿತ, ಮೈನಾರಿಟಿಸ್‌ ಸೇನೆಯ ಅಧ್ಯಕ್ಷ ಎ.ಜೆ.ಖಾನ್‌ ಇದ್ದರು.

ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಹಿಂದೆ ನಮ್ಮ ನೆಲದಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ಇತ್ತು. ಜಾತಿ, ಮತ, ಲಿಂಗ ತಾರತಮ್ಯ ಇರಲಿಲ್ಲ. ಎಲ್ಲರೂ ಎಲ್ಲರಿಗೋಸ್ಕರ ಬದುಕುತ್ತಿದ್ದರು. ಆದರೆ, ಸದ್ಯ ದೇಶದಲ್ಲಿ ಹಿಂದುತ್ವ ಹೆಸರಲ್ಲಿ ಸಾಕಷ್ಟುದುರಂತ ನಡೆಯುತ್ತಿದೆ. ಇದರ ವಿರುದ್ಧ ಮಾತನಾಡಿದರೆ ಭಯೋತ್ಪಾದಕರು ಎನ್ನುವ ಪಟ್ಟಕಟ್ಟುತ್ತಾರೆ. ಆದರೆ, ನಾವು ಹೋರಾಟ ಮುಂದುವರೆಸಿ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೆಜ್ಜೆ ಹಾಕಬಾರದು ಎಂದರು.

ಚಿಂತಕ ಮುಕುಂದ್‌ ರಾಜ್‌ ಮಾತನಾಡಿ, ದ್ರಾವಿಡ ಪರಿಕಲ್ಪನೆ ಜನರಿಗೆ ತಲುಪದಂತೆ ನೋಡಿಕೊಳ್ಳಲಾಗುತ್ತಿದೆ. ಅದರಲ್ಲೂ ಮುಸ್ಲಿಮರ ವಿಷಯವನ್ನೇ ಪದೇ ಪದೇ ಪ್ರಸ್ತಾಪಿಸಿ, ಗೋಡ್ಸೆ ಸಂತತಿಗಳನ್ನು ಖುಷಿಪಡಿಸಲಾಗುತ್ತಿದೆ. ಇಂತಹ ವಿಷಯಗಳು ಬಂದಾಗ ನಾವು ಎಚ್ಚರವಾಗುವ ಜೊತೆಗೆ, ವೈಜ್ಞಾನಿಕವಾಗಿ ಉತ್ತರಗಳನ್ನು ನೀಡಬೇಕಾಗಿದೆ ಎಂದರು.

ದಲಿತ, ಮೈನಾರಿಟಿಸ್‌ ಸೇನೆಯ ಅಧ್ಯಕ್ಷ ಎ.ಜೆ.ಖಾನ್‌ ಮಾತನಾಡಿ, ಧರ್ಮದ ಹೆಸರಿನಲ್ಲಿ ಅಧರ್ಮವಿದ್ದು, ದ್ವೇಷ ಬಿತ್ತಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಜನತೆಯನ್ನು ಜಾಗೃತಗೊಳಿಸಲು ಎಲ್ಲ ರೀತಿಯ ಪ್ರಭುತ್ವವನ್ನು ಒಂದೆಡೆ ತರಲು ಸಂಘ ಆರಂಭವಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.