ಬಸ್‌ ಮುಷ್ಕರ: ಪಾತಾಳಕ್ಕೆ ಕುಸಿದ ತರಕಾರಿ ಬೆಲೆ, ಕಂಗಾಲಾದ ಅನ್ನದಾತ..!

ರೈತರಿಗೆ ಸಿಗುತ್ತಿಲ್ಲ ಕರ್ಚು, ಆಳಿನ ಹಾಗೂ ಸಾರಿಗೆ ವೆಚ್ಚ, ಬುಟ್ಟಿ ಟೊಮೆಟೊಗೆ 20 ರಿಂದ 30|  ರೈತರಿಗೆ ತರಕಾರಿ ಕೀಳಲು ಹಚ್ಚಿದ ಕೂಲಿ ಮತ್ತು ಮಾರುಕಟ್ಟೆಗೆ ಸಾಗಿಸಲು ಮಾಡಿದ ವೆಚ್ಚವೂ ಸಿಗುತ್ತಿಲ್ಲ| ಗ್ರಾಹಕರಿಗೆ ಬೆಲೆ ಕಡಿಮೆ ಇಲ್ಲ| 

Vegetable Prices Fall Due to KSRTC Strike at Hanumasagar in Koppal grg

ಏಕನಾಥ ಜಿ. ಮೆದಿಕೇರಿ

ಹನುಮಸಾಗರ(ಏ.19): ಸರ್ಕಾರಿ ಸಾರಿಗೆ ಬಸ್‌ ಮುಷ್ಕರದ ಬಿಸಿ ರೈತರು ಬೆಳೆದ ತರಕಾರಿಗೆ ತಟ್ಟಿದ್ದು, ಅಲ್ಪ ಅವಧಿಯಲ್ಲಿ ತರಕಾರಿ ಬೆಲೆ ಪಾತಾಳಕ್ಕೆ ಕುಸಿದಿದ್ದ ರೈತರು ಕಂಗಾಲಾಗಿದ್ದಾರೆ. ರೈತರಿಗೆ ತರಕಾರಿ ಕೀಳಲು ಹಚ್ಚಿದ ಕೂಲಿ ಮತ್ತು ಮಾರುಕಟ್ಟೆಗೆ ಸಾಗಿಸಲು ಮಾಡಿದ ವೆಚ್ಚವೂ ಸಿಗುತ್ತಿಲ್ಲ. ಇದರಿಂದಾಗಿ ಎಷ್ಟೋ ರೈತರು ತಾವು ಬೆಳೆದ ತರಕಾರಿಗಳನ್ನು ಹೊಲದಲ್ಲೇ ಬಿಡುತ್ತಿದ್ದಾರೆ. ಇನ್ನು ಕೆಲವರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ, ನಿಟ್ಟುಸಿರು ಹಾಕುತ್ತ ಬರುತ್ತಿದ್ದಾರೆ.

ಈ ಹಿಂದೆ ಒಂದು ಅಥವಾ ಎರಡು ಬೆಗೆಯ ತರಕಾರಿಗಳ ಬೆಲೆ ಮಾತ್ರ ಕುಸಿತವಾಗುತ್ತಿದ್ದವು. ಆದರೆ, ಈಗ ಸೌತೆಕಾಯಿ, ಹೀರೆಕಾಯಿ ಹೊರತುಪಡಿಸಿ ಉಳಿದೆಲ್ಲ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುಮಾರು 10 ಕೆಜಿ ಟೊಮೆಟೊ ಬುಟ್ಟಿಗೆ 20ರಿಂದ 30ರು, ಒಂದು ಟ್ರೇಗೆ 40ರಿಂದ 60 ರು, 10ಕ್ಕೂ ಅಧಿಕ ಕೆಜಿ ತೂಕ ಇರುವ ಒಂದು ಬುಟ್ಟಿಬದನೆಕಾಯಿಗೆ 30ರಿಂದ 40 ರು., ಒಂದು ಬುಟ್ಟಿಹಾಗಲಕಾಯಿ ಬೆಲೆ 50ರಿಂದ 60 ರು., ಬುಟ್ಟಿಬೆಂಡೆಕಾಯಿ ಬೆಲೆ 40ರಿಂದ 60 ರು.ಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದು, ರೈತರನ್ನು ಕಂಗೆಡಿಸಿದೆ.

Vegetable Prices Fall Due to KSRTC Strike at Hanumasagar in Koppal grg

ಕೆಲಸಕ್ಕೆ ಮತ್ತಷ್ಟು ನೌಕರರು: 7500 ಬಸ್‌ಗಳ ಸಂಚಾರ

ಗ್ರಾಹಕರಿಗೆ ಬೆಲೆ ಕಡಿಮೆ ಇಲ್ಲ:

ರೈತರು ಮಾರುಕಟ್ಟೆಗೆ ತಂದ ಬುಟ್ಟಿತರಕಾರಿಗಳನ್ನು 20ರಿಂದ 30 ರು. ನೀಡಿ ಕೊಂಡುಕೊಳ್ಳಲು ಹಿಂದೇಟು ಹಾಕುವ ವ್ಯಾಪಾರಿಗಳು ತಾವು ಬಜಾರದಲ್ಲಿ 1 ಕೆಜಿ ಟೊಮೆಟೊಗೆ 10 ರು. ಉಳಿದ ಬಹುತೇಕ ತರಕಾರಿಗಳನ್ನು 10 ರು.ಗೆ ಅರ್ಧ ಕೆಜಿ, ಕಾಲು ಕೆಜಿಯಂತೆ ಮಾರಾಟ ಮಾಡುತ್ತಾರೆ.

ಟೊಮೆಟೊ, ಬದನೆಕಾಯಿ ಸೇರಿ ವಿವಿಧ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಕುಸಿಯುತಿದೆ. ಇದರಿಂದಾಗಿ ರೈತರು ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಕಷ್ಟಪಟ್ಟು ತರಕಾರಿ ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಬಂದರೆ ಬಸ್‌ ಚಾರ್ಜ್‌ ಹಾಗೂ ತರಕಾರಿ ಬಿಡಿಸಲು ಮಾಡಿದ ಹಣವೂ ಸಿಗುತ್ತಿಲ್ಲ. ಇದೇ ಸ್ಥಿತಿ ಮುಂದುವರೆದರೆ ನಾವು ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ತುಮರಿಕೊಪ್ಪ ಗ್ರಾಮದ ರೈತ ಕಳಕಪ್ಪ ಪೂಜಾರ ತಿಳಿಸಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬರುತ್ತಿದೆ. ಇದನ್ನು ಬೇರೆಡೆ ಕಳುಹಿಸಲು ಬಸ್‌ ಸೌಕರ್ಯವಿಲ್ಲ. ಖಾಸಗಿ ವಾಹನದವರು ದೂರದ ಪಟ್ಟಣಕ್ಕೆ ಹೋಗಲ್ಲ. ಇಲ್ಲೇ ಮಾರಾಟ ಮಾಡಬೇಕಾಗಿದ್ದರಿಂದ ಬೆಲೆ ನಿತ್ಯ ಕುಸಿತ ಕಾಣುತ್ತಿದೆ ಎಂದು ಹನುಮಸಾಗರ ಮಾರುಕಟ್ಟೆಯಲ್ಲಿ ತರಕಾರಿ ಹರಾಜು ಮಾಡುವವ ಹುಸೇನ್‌ಸಾಬ ಕುಷ್ಟಗಿ ಹೇಳಿದ್ದಾರೆ.

ಮಾರುಕಟ್ಟೆಗೆ ಟೊಮೆಟೊ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಇಲ್ಲಿ ತಗೆದುಕೊಂಡು ಬೇರೆಡೆ ಮಾರಾಟ ಮಾಡಲು ಬಸ್‌ ಸೌಲಭ್ಯ ಇಲ್ಲ. ಇಲ್ಲೇ ಮಾರಾಟ ಮಾಡಬೇಕು. ಬೇಸಿಗೆ ಬಿಸಿಲು ಹೆಚ್ಚಿದ್ದರಿಂದ ತರಕಾರಿಗಳು ಬೇಗನೆ ಹಾಳಾಗುತ್ತಿವೆ. ಹೆಚ್ಚಿನ ಬೆಲೆಗೆ ಮಾರುತ್ತೀರಿ ಎನ್ನುತ್ತೀರಿ. ನಾವು ಬಿಸಿಲಿಗೆ ಹಾಳಾದ ತರಕಾರಿಗಳ ನಷ್ಟಹೇಗೆ ಸರಿದೂಗಿಸಬೇಕು? ಎಂದು ತರಕಾರಿ ಮಾರುವವ ಚಂದುಸಾಬ ನದಾಫ್‌ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios