ತರಕಾರಿ ಕೆಜಿಗೆ 2 ರು. : ರಸ್ತೆಗೆ ಚೆಲ್ಲಿ ರೈತರ ಆಕ್ರೋಶ
ಎಲ್ಲಾ ತರಕಾರಿಗಳು ಕೆಜಿ 2 ರು ಗಿಂತ ಜಾಸ್ತಿಯಾಗದ ಹಿನ್ನೆಲೆ ಆಕ್ರೋಶಗೊಂಡ ರೈತರು ತಾವು ತಂದಿದ್ದ ತರಕಾರಿಗಳನ್ನು ರಸ್ತೆಗೆ ಚೆಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ರಾಯಚೂರು [ಫೆ.01]: ಇಲ್ಲಿಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ 2 ರು.ಗೆ ಕುಸಿತ ಕಂಡಿರುವುದನ್ನು ಖಂಡಿಸಿ ರೈತರು ತಾವು ಬೆಳೆದ ತರಕಾರಿಯನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಿ ಮತ್ತು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.
ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಟೊಮೆಟೊ, ಬದನೇಕಾಯಿ, ಹೂ ಕೋಸು ಕ್ರಮವಾಗಿ ಕೇಜಿಗೆ 2, 5 ಮತ್ತು 10 ರು.ಗೆ ಸಗಟು ವ್ಯಾಪಾರಸ್ಥರು ನಿಗದಿ ಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶುಕ್ರವಾರ ಪ್ರತಿ ಕೆಜಿ ಟೋಮೊಟೊ 15 ರಿಂದ 20 ರು., ಬದನೆಕಾಯಿ 18 ರಿಂದ 22 ರು., ಹೂಕೋಸು 25ರವರೆಗೆ ಮಾರಾಟವಾಗಿತ್ತು. ದರ ಕುಸಿತದಿಂದ ಆಕ್ರೋಶಗೊಂಡ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಕ್ಕಿಂತ ಉಚಿತವಾಗಿ ಹಂಚುವುದು ಲೇಸು ಎಂದು ಹೇಳಿ ತರಕಾರಿಯನ್ನು ಸಾರ್ವಜನಿಕರಿಗೆ ವಿತರಿಸಿದರು. ಕೆಲವರು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ದಿಢೀರ್ ಬೆಲೆ ಕುಸಿತದಿಂದ ರೈತರು ಕಂಗೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಮಾರುಕಟ್ಟೆಗೆ ನಿತ್ಯ ಸುತ್ತಲಿನ ನಲವತ್ತಕ್ಕು ಹೆಚ್ಚು ಹಳ್ಳಿಗಳ ರೈತರು ತರಕಾರಿ ತಂದು ಮಾರಾಟ ಮಾಡಿ ಹೋಗುತ್ತಾರೆ. ಆದರೆ, ಸಗಟು ವ್ಯಾಪಾರಸ್ಥರು ಪಕ್ಕದ ಆಂಧ್ರ-ತೆಲಂಗಾಣದ ರೈತರು ತರುವ ತರಕಾರಿಗಳನ್ನು ಖರೀದಿಸುತ್ತಿರುವುದು ಸ್ಥಳೀಯ ರೈತರು ಬೆಳೆದ ತರಕಾರಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.