ಬೆಂಗಳೂರು [ಡಿ.16]:  ಮಾರುಕಟ್ಟೆಯಲ್ಲಿ ಈಗ ಅವರೆಕಾಯಿ, ಬಟಾಣಿಯ ಸುಗ್ಗಿ! ಆದರೆ, ಬಹುತೇಕ ತರಕಾರಿಗಳ ದರದಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿತಟ್ಟಿದೆ.

ನಗರದ ಮಾರುಕಟ್ಟೆಯಲ್ಲಿ ಬಟಾಣಿ ಮತ್ತು ಟೊಮೆಟೋ ಹೊರತುಪಡಿಸಿದರೆ ಬೆಂಡೆಕಾಯಿ, ತೊಂಡೆಕಾಯಿ, ಬೀನ್ಸ್‌, ಕ್ಯಾರೆಟ್‌, ಗೋರಿಕಾಯಿ, ಹಸಿ ಮೆಣಸಿನಕಾಯಿ, ನುಗ್ಗೆಕಾಯಿ, ಬೀಟ್‌ರೂಟ್‌, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಸೇರಿದಂತೆ ಬಹುತೇಕ ತರಕಾರಿಗಳ ದರದಲ್ಲಿ ಏರಿಕೆಯಾಗಿದೆ. ಬಟಾಣಿ ಮಾತ್ರ ಕೆ.ಜಿ.ಗೆ 40-50 ರು., ಟೊಮೆಟೋ ಕೆ.ಜಿ. .20ಕ್ಕೆ ಖರೀದಿಯಾಗುತ್ತಿದೆ. ಕೆಲ ದಿನಗಳಿಂದ ಬಹುಬೇಡಿಕೆ ಇದ್ದ ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 60ರಿಂದ 100 ರು. ನಿಗದಿಯಾಗಿದೆ. ವಿವಿಧ ಸೊಪ್ಪುಗಳ ದರದಲ್ಲಿ ಇಳಿಕೆಯಾಗಿದ್ದರೆ, ಸಬ್ಬಕ್ಕಿ ಸೊಪ್ಪು ಪೂರೈಕೆ ಇಲ್ಲದೆ ಬೆಲೆ ಗಗನಕ್ಕೇರಿದೆ.

ದಿಢೀರ್ ಭಾರೀ ಕುಸಿತವಾಯ್ತು ಈರುಳ್ಳಿ ಬೆಲೆ : ಈಗೆಷ್ಟು?...

ಚಳಿಗಾಲದಲ್ಲಿ ತರಕಾರಿ ಇಳುವರಿ ಕಡಿಮೆ. ಈವರೆಗೆ ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳು ಹೆಚ್ಚಾಗಿದ್ದವು. ಹೀಗಾಗಿ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ ಬೆಲೆಗಳು ಏರಿಕೆಯಾಗಿದೆ. ಡಿ.17 (ಮಂಗಳವಾರ)ರಿಂದ ಧನುರ್ಮಾಸ ಆರಂಭವಾಗಲಿದೆ. ಈ ಮಾಸದಲ್ಲಿ ಶುಭ ಕಾರ್ಯಗಳು ನಡೆಯುವುದು ಕಡಿಮೆ. ಹೀಗಾಗಿ ಮುಂದಿನ ದಿನಗಳಲ್ಲಿ ತರಕಾರಿಗಳ ದರ ಇಳಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ವ್ಯಾಪಾರಿಗಳು.

ನುಗ್ಗೆ ಕೆ.ಜಿ. 440 ರು., ಒಂದಕ್ಕೆ 40 ರು.!

ಪೂರೈಕೆ ಕೊರತೆಯಿಂದ ಕೆಲ ದಿನಗಳಿಂದ ಬೆಲೆ ಹೆಚ್ಚಾಗಿದ್ದ ನುಗ್ಗೆಕಾಯಿಗೆ ಬಹುಬೇಡಿಕೆ ಕುದುರಿದೆ. ಮಾರುಕಟ್ಟೆಯಲ್ಲಿ ಹುಡುಕಿದರೂ ನುಗ್ಗೆಕಾಯಿ ಸಿಗುತ್ತಿಲ್ಲ. ಹೀಗಾಗಿ ದರ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಗ್ರಾಹಕರ ಕೈಗೆಟುಕದಂತಾಗಿದೆ. ಕಳೆದ ತಿಂಗಳು ಹಾಪ್‌ಕಾಮ್ಸ್‌ನಲ್ಲಿ ನುಗ್ಗೆಕಾಯಿ ಕೆ.ಜಿ. 299 ರು. ಇದ್ದದ್ದು, ಇದೀಗ 440ಕ್ಕೆ ತಲುಪಿದೆ. ಒಂದು ನುಗ್ಗೆಕಾಯಿ 35 ರಿಂದ 40 ರು.ಗೆ ಮಾರಾಟವಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ತಮಿಳುನಾಡು, ಆಂಧ್ರ ಮತ್ತಿತರ ಪ್ರದೇಶಗಳಲ್ಲಿ ಮಳೆಗೆ ನುಗ್ಗೆ ಮರದ ಹೂವುಗಳು ನೆಲಕಚ್ಚಿದ್ದವು. ಜತೆಗೆ ನುಗ್ಗೆ ಗಿಡಕ್ಕೆ ಹುಳುಬಾಧೆಯೂ ಕಾಡಿತ್ತು. ಈ ಹಿಂದೆ ಒಂದಕ್ಕೆ 5ಕ್ಕೆ ಮಾರಾಟವಾಗುತ್ತಿದ್ದ ನುಗ್ಗೆಕಾಯಿ 40 ರು.ಗೆ ತಲುಪಿದೆ.

ಹಾಪ್‌ಕಾಮ್ಸ್‌

ತರಕಾರಿ ದರ (ಕೆ.ಜಿ.ಗಳಲ್ಲಿ ರು.ಗಳಲ್ಲಿ)

ಈರುಳ್ಳಿ ದಪ್ಪ 139

ಸಬ್ಬಕ್ಕಿ ಸೊಪ್ಪು 115

ಬೆಳ್ಳುಳ್ಳಿ 208

ಗೋರಿಕಾಯಿ 61

ಟೊಮೆಟೋ 24

ಊಟಿ ಕ್ಯಾರಟ್‌ 92

ಅವರೆಕಾಯಿ 47

ನವಿಲುಕೋಸು 40

ಹುರುಳಿಕಾಯಿ 64

ಎಲೆಕೋಸು 33

ಹಸಿ ಮೆಣಸಿನಕಾಯಿ 48

ಬೆಂಡೆಕಾಯಿ, ತೊಂಡೆಕಾಯಿ 54

ಕೊತ್ತಂಬರಿ ಸೊಪ್ಪು 65

ಬೀಟ್‌ರೂಟ್‌ 67

ಮೂಲಂಗಿ 39

ಬಿಳಿ ಬದನೆಕಾಯಿ 51

ಹಾಗಲಕಾಯಿ 41

ಮೆಂತ್ಯಸೊಪ್ಪು 56

ಪಾಲಕ್‌ ಸೊಪ್ಪು 52

ದಂಟಿನ ಸೊಪ್ಪು 52

ಏಲಕ್ಕಿ ಬಾಳೆ 44