ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ಹೂವಿನ ಬೆಲೆ
ವರ ಮಹಾಲಕ್ಷ್ಮೀ ಹಬ್ಬ ಸಮೀಪಿಸುತ್ತಿದ್ದಂತೆ ವ್ಯಾಪಾರ- ವಹಿವಾಟು ಚುರುಕುಗೊಂಡು ಮಾರುಕಟ್ಟೆಕಳೆಗಟ್ಟಿದೆ. ಹೂವು ಹಣ್ಣುಗಳ ಬೆಲೆ ಗಗನಕ್ಕೆ ಏರಿದೆ.
ಬೆಂಗಳೂರು [ಆ.08]: ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರ ಮಹಾಲಕ್ಷ್ಮೀ ಹಬ್ಬ ಸಮೀಪಿಸುತ್ತಿದ್ದಂತೆ ವ್ಯಾಪಾರ- ವಹಿವಾಟು ಚುರುಕುಗೊಂಡು ಮಾರುಕಟ್ಟೆಕಳೆಗಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜನರ ಅಭಿರುಚಿ, ಆಚರಣೆಗೆ ತಕ್ಕಂತೆ ವರಮಹಾಲಕ್ಷ್ಮೇ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರ ಕಣ್ಮನ ಸೆಳೆಯುತ್ತಿವೆ.
ಕನಕಾಂಬರಿಗೆ ಕೇಜಿಗೆ ಸಾವಿರ
ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಆಗಮಿಸುವ ಕಾರಣ ಹೂವು-ಹಣ್ಣಿನ ಬೆಲೆ ಗಗನಕ್ಕೇರಿದೆ. ವರ ಮಹಾಲಕ್ಷ್ಮೇ ಹಬ್ಬಕ್ಕೆ ಎರಡು ದಿನ ಬಾಕಿ ಇರುವುದಾಗಲೇ ಹೂವಿನ ಬೆಲೆ ಆಕಾಶದತ್ತ ಮುಖ ಮಾಡಿದ್ದು, ಕನಕಾಂನಬರಿ ಈಗಾಗಲೇ ಕೇಜಿಗೆ ಸಾವಿರ ರುಪಾಯಿ ತಲುಪಿದೆ. ಜತೆಗೆ ತಾವರೆ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ತಾಜಾ ಸೇವಂತಿ ಕೆ.ಜಿ.ಗೆ 200-250 ರು., ಡ್ರೈ ಸೇವಂತಿ ಕೆ.ಜಿ. 400 ರು., ತಾಜಾ ಮಲ್ಲಿಗೆ ಮೊಗ್ಗು ಕೆ.ಜಿಗೆ 300 ರು., ಸುಗಂಧರಾಜ ಕೆ.ಜಿಗೆ 140, ರೋಸ್ ಕೆ.ಜಿ.ಗೆ 200 ರು. ತಲುಪಿದೆ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ದಿವಾಕರ್.
ತರಕಾರಿ ಬೆಲೆ ಏರಿಕೆ
ಕಳೆದ ನಾಲ್ಕು ತಿಂಗಳಿನಿಂದ ಏರಿಕೆಯತ್ತ ಸಾಗಿದ್ದ ತರಕಾರಿ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಕಳೆದ ವಾರ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 48-50ರು. ಇದ್ದ ಕ್ಯಾರೆಟ್ ಬೆಲೆ 70ರು., ಹಸಿಮೆಣಸಿನಕಾಯಿ ಕೆ.ಜಿ. 18ರಿಂದ 40 ರು. ಕ್ಕೆ ಏರಿಕೆ, ಸೌತೆಕಾಯಿ ಕೆ.ಜಿ. 18-20ರಿಂದ 24ಕ್ಕೆ ಮಾರಾಟವಾಗುತ್ತಿದೆ. ಬೀನ್ಸ್ ಕೆ.ಜಿ. 40-42 ರು., ಆಲೂಗಡ್ಡೆ ಕೆ.ಜಿ. 14-16 ರು., ಈರುಳ್ಳಿ ಕೆ.ಜಿ. 18 ರು., ಟೊಮೆಟೋ ಕೆ.ಜಿ. 26 ರು., ಬೀಟ್‌ರೂಟ್ ಕೆ.ಜಿ. 36 ರು., ಬದನೆಕಾಯಿ 20-24ರು., ಕೊತ್ತಂಬರಿ ಸೊಪ್ಪು, ಸಬ್ಬಕ್ಕಿ ಕಟ್ಟು ಒಂದಕ್ಕೆ 10-12 ರು., ಪಾಲಾಕ್ 14ರು., ಮೆಂತ್ಯೆ ಒಂದು ಕಟ್ಟು 25, ತೆಂಗಿನಕಾಯಿ ಮಧ್ಯಮ 16-17 ರು., ದಪ್ಪ ಕಾಯಿ 22-24 ರು., ಹಾಗಲಕಾಯಿ 26-28 ರು., ಸಿಹಿ ಕುಂಬಳ 10-14 ರು., ನಿಂಬೆಹಣ್ಣು ಒಂದಕ್ಕೆ 3.30 ರು., ಚಪ್ಪರದವರೆ 48 ರು., ಬೂದುಗುಂಬಳ ಕೆ.ಜಿ. 40ಕ್ಕೆ ಖರೀದಿಯಾಗುತ್ತಿದೆ ಎಂದು ಕಲಾಸಿಪಾಳ್ಯ ತರಕಾರಿ-ಹಣ್ಣು ಸರಬರಾಜುದಾರರಾದ ರಾಧಾಕೃಷ್ಣ ತಿಳಿಸಿದರು.